ಎಲ್ಲರಿಗೂ ಬಾಲ್ಯದ ನೆನಪಾದಾಗ ಆ ಸವಿನೆನಪು ಕಣ್ಣೆದುರಿಗೆ ಬಂದು ತುಟಿಯಲ್ಲೊಂದು ಮಂದಹಾಸ ಇಣುಕಿ ಮರೆಯಾಗುತ್ತದೆ. ಆ ವಯಸ್ಸಿನಲ್ಲಿ ಜ್ವಾಲಾಮುಖೀಯಂತೆ ಏಳುತ್ತಿದ್ದ ಅದೆಷ್ಟೋ ಕುತೂಹಲಗಳಿಗೆ ಇಂದಿಗೂ ಉತ್ತರ ಸಿಗದಿದ್ದರೂ ಅವು ಈಗ ತಾನಾಗಿಯೇ ತಣ್ಣಗಾಗಿವೆ. ಆಗ ಇದ್ದ ಮುಗ್ಧ ನಗುವಿಗೂ ಇಂದು ಬದುಕಿನಲ್ಲಿ ಹಲವಾರು ಅನುಭವಗಳನ್ನು ಪಡೆದ ಈ ನಗುವಿಗೂ ಅದೆಷ್ಟು ವ್ಯತ್ಯಾಸವಿದೆ. ಆ ದಿನಗಳು ಅದೆಷ್ಟು ಚಂದ. ಮತ್ತೂಮ್ಮೆ ಆ ದಿನಗಳು ಮರಳಿ ಬಾರದಿದ್ದರೂ ಆ ನೆನಪುಗಳು ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಬೇರೂರಿ ಬಿಟ್ಟಿರುತ್ತವೆ.
ಅಲ್ಲಿಯವರೆಗೆ ಮನೆಯಲ್ಲಿಯೇ ಆಡುತ್ತ ಅಜ್ಜಿಯ ಕಥೆ ಕೇಳುತ್ತ ಹಕ್ಕಿಯಂತೆ ಸ್ವಾತಂತ್ರ್ಯ ಅನುಭವಿಸುತ್ತಿದ್ದ ನನಗೆ ಅಂದು ಅಂಗನವಾಡಿ ಟೀಚರ್ ಮನೆಗೆ ಬಂದು ನನ್ನನ್ನು ಕಳುಹಿಸಿ ಕೊಡುವಂತೆ ಕೇಳಿದಾಗ ನಮ್ಮಮ್ಮ ಹಿಂದೆ ಮುಂದೆ ಯೋಚನೆ ಮಾಡದೆ ಫ್ರಾಕ್ ಹಾಕಿ, ತಲೆಬಾಚಿ ಕಳುಹಿಸಿ ಕೊಡಲು ಸಜ್ಜಾಗುತ್ತಿದ್ದಂತೆ ಮನಸ್ಸಿನಲ್ಲಿ ಏನೋ ಒಂಥರಾ ತಳಮಳ. “ನಾನು ಹೋಗುವುದಿಲ್ಲವೆಂದು’ ಸಣ್ಣ ಧ್ವನಿಯಲ್ಲಿ ಹೇಳುತ್ತಿದ್ದೆ. ಯಾಕೆಂದರೆ, ಟೀಚರ್ ನೋಡಿ ಭಯಗೊಂಡಿದ್ದ ನಾನು ಗಟ್ಟಿ ಧ್ವನಿಯಲ್ಲಿ ಮಾತನಾಡಲಾಗಲಿಲ್ಲ. ಅಂತೂ ಅಮ್ಮ ಟಾಟಾ ಮಾಡಿ ಮನೆಯಿಂದ ಕಳುಹಿಸಿಕೊಟ್ಟೇಬಿಟ್ಟರು.
ಟೀಚರ್ ಎಂಬ ಶಬ್ದವನ್ನೇ ಭಯಾನಕ ಶಬ್ದವೆಂದು ಅಂದುಕೊಂಡಿದ್ದ ನನಗೆ ಅವರ ಜೊತೆಯಲ್ಲೇ ನಡೆಯುವಾಗ ಹೇಗಾಗಬೇಕು ಹೇಳಿ. ಆದರೆ ಟೀಚರ್ ನನ್ನನ್ನು ಪ್ರೀತಿಯಿಂದ ಮಾತನಾಡಿಸಿ ಅಂಗನವಾಡಿಗೆ ಕರೆತಂದೇ ಬಿಟ್ಟರು. ಅಲ್ಲಿದ್ದ ಮಕ್ಕಳೊಡನೆ ಆಟವಾಡಿ ಟೀಚರ್ ಕೊಟ್ಟ ಚಿತ್ರಾನ್ನವನ್ನು ತಿಂದು, ಮನೆಗೆ ಮರಳಿ ಅಮ್ಮನ ಮುಖ ನೋಡಿದಾಗ ಪ್ರಪಂಚವನ್ನೇ ಗೆದ್ದು ಬಂದಷ್ಟು ಖುಷಿಯಾಗಿತ್ತು.
ಮೊದಲ ದಿನ ಭಯಾನಕವಾಗಿ ಕಲ್ಪಿಸಿಕೊಂಡಿದ್ದ ಆ ಟೀಚರ್ ಬರಬರುತ್ತ ಆತ್ಮೀಯರಾದರು. ಅವರು ಪ್ರೀತಿ ತುಂಬಿದ ಮಾತುಗಳ ಜೊತೆಗೆ ಆಟ ಆಡಿಸುವುದು, ಹಾಡು ಹೇಳಿಸುವುದು ಮತ್ತು ಡ್ಯಾನ್ಸ್ ಕಲಿಸುತ್ತಿದ್ದರು. ಅವರನ್ನು ನಾನು ನನಗೆ ಗೊತ್ತಿಲ್ಲದಂತೆ ಮಹಾನ್ ವ್ಯಕ್ತಿಯಾಗಿ ನೋಡಲು ಆರಂಭಿಸಿದೆ. ಯಾಕೆಂದರೆ, ಆಗ ನನ್ನ ಮನಸ್ಸಿನಲ್ಲಿ ಟೀಚರ್ ಹೇಳಿದ್ದೆಲ್ಲಾ ಸತ್ಯ. ಅವರಿಗೆ ಎಲ್ಲವೂ ಗೊತ್ತಿದೆ ಅನ್ನುವಷ್ಟರ ಮಟ್ಟಿಗೆ ನಂಬಿಕೊಂಡಿದ್ದೆ. ಅವರ ಬಣ್ಣ ಬಣ್ಣದ ಸೀರೆಯ ಸೆರಗನ್ನು ಅವರಿಗೆ ಗೊತ್ತಾಗದಂತೆ ಮೆಲ್ಲಗೆ ಸವರಿ ನೋಡುವುದರಲ್ಲೇ ಏನೋ ಒಂಥರಾ ಖುಷಿ ಇತ್ತು. ಅದೇ ಭಾವನೆಯೋ ಏನೋ “ಮುಂದೆ ನೀನು ಏನಾಗುತ್ತೀಯಾ?’ ಎಂದು ಯಾರಾದರೂ ಕೇಳಿದರೆ “ಟೀಚರ್’ ಎಂದು ಥಟ್ಟನೆ ಉತ್ತರಿಸುತ್ತಿದ್ದ.
ಹೀಗೆ ನೀವು ನೀಡಿದ ಪ್ರೀತಿ, ವಿದ್ಯೆ, ವಾತ್ಸಲ್ಯ ಎಂದಿಗೂ ಮರೆಯಲಾಗದ ಸಂಪತ್ತು. ವಿದ್ಯೆಯ ಮೊದಲ ಮೆಟ್ಟಿಲನ್ನು ನಿಮ್ಮ ಸಹಾಯದಿಂದ ಏರಿಸಿದ್ದೀರಿ ಥ್ಯಾಂಕ್ಯೂ ಮ್ಯಾಮ….
ಸಂಧ್ಯಾ ಜಿ. ಶೆಟ್ಟಿ
ಪತ್ರಿಕೋದ್ಯಮ ವಿಭಾಗ
ಎಂ.ಜಿ.ಎಂ. ಕಾಲೇಜು, ಉಡುಪಿ