Advertisement

ಪುನೀತ್ ರಾಜ್‍ಕುಮಾರ್ ಸಾಧನೆ ಮುಂದಿನ ಪೀಳಿಗೆಗೆ ತಿಳಿಯಬೇಕು: ಸಚಿವ ವಿ.ಸೋಮಣ್ಣ

02:26 PM Jan 30, 2022 | Team Udayavani |

ಬೆಂಗಳೂರು: ಇತ್ತೀಚೆಗಷ್ಟೆ ನಮ್ಮನ್ನಗಲಿದ ನಟ ಪುನೀತ್ ರಾಜ್‍ಕುಮಾರ್ ಅವರ ಸಾಧನೆ ಮುಂದಿನ ಪೀಳಿಗೆಗೆ ತಿಳಿಯಬೇಕು. ಅವರ ಆದರ್ಶದ ಜೀವನ, ಸಾಧನೆ, ಜೀವನ ಮೌಲ್ಯಗಳಿಂದ ಅವರು ಇಂದಿಗೂ‌ ನಮ್ಮೆಲ್ಲರ ಮನದಲ್ಲಿ ಜೀವಂತವಾಗಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

Advertisement

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಭಾವಿ ಪಾಲಿಕೆ ಕಚೇರಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರ ಸವಿನೆನಪಿಗಾಗಿ‌ ನಿರ್ಮಿಸಲಾದ ಒಳಾಂಗಣ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಿ‌ ಮಾತನಾಡಿದ ಅವರು, ಯೂತ್ ಐಕಾನ್ ಎಂತಲೇ ಖ್ಯಾತರಾಗಿದ್ದ ಪುನೀತ್ ಅವರ ಹೆಸರಿನಲ್ಲಿ ಈ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಈ‌ ಮೂಲಕ ಈ ಭಾಗದ ಕ್ರೀಡಾಸಕ್ತ ಯುವಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ಇದನ್ನೂ ಓದಿ:ಗಿಡ ನೆಟ್ಟು ಅಪ್ಪು ಆಸೆ ಪೂರೈಸಿ: ಅಭಿಮಾನಿಗಳಲ್ಲಿ ರಾಘಣ್ಣ ಮನವಿ

ನಟ ಪುನೀತ್ ತಮ್ಮ ಸಾವಿನ ಬಳಿಕವೂ ಸಾಕಷ್ಟು ಜನರಿಗೆ ಪ್ರೇರಣೆಯಾಗಿದ್ದಾರೆ. ಅವರ ಅಕಾಲಿಕ ನಿಧನದ ಬಳಿಕ ಅವರ ಸಾವಿರಾರು ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡುವ ಮೂಲಕ ನಟನೊಬ್ಬನ ಆದರ್ಶಗಳನ್ನು ಜೀವಂತವಿರಿಸಿದ್ದಾರೆ ಎಂದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ, ಮಕ್ಕಳ ಶಿಕ್ಷಣ ಹಕ್ಕುಗಳ ರಾಯಭಾರಿಯಾಗಿ ‘ಎಜುಕೇಶನ್ ಇಸ್ ಪವರ್’ ಎಂಬ ಅಭಿಯಾನದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಶಿಕ್ಷಣದ ಮಹತ್ವದ ಕುರಿತಂತೆ ಜಾಗೃತಿ ಮೂಡಿಸುವ ಕೆಲಸವನ್ನು ಅವರು ಮಾಡಿದ್ದರು. ಇದಷ್ಟೇ ಅಲ್ಲದೇ, ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ನೆರವಾಗುವ ‘ಸಂಜೀವಿನಿ’ ಯೋಜನೆ, ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ತಯಾರಿಸಿದ ‘ದೀಪ ಸಂಜೀವಿನಿ’ ಮಣ್ಣಿನ ಹಣತೆ ಖರೀದಿಸಿ ದೀಪಾವಳಿ ಆಚರಿಸುವ ಮೂಲಕ ಸ್ವಸಹಾಯ ಗುಂಪುಗಳನ್ನು ಬಲಪಡಿಸಲು ಮನವಿ ಮಾಡಿಕೊಳ್ಳುವ ಮೂಲಕ ಮಹಿಳೆಯರು ಸಬಲೀಕರಣಕ್ಕೆ ಕೈ ಜೋಡಿಸಿದ್ದರು. ಇಂಥ ಸಾಕಷ್ಟು ಕಾರಣಗಳಿಂದ ಲಕ್ಷಾಂತರ ಜನರು ರಾಜ್‍ಕುಮಾರ್ ಅವರನ್ನು ತಮ್ಮ ಆದರ್ಶವನ್ನಾಗಿ ಸ್ವೀಕರಿಸಿದ್ದಾರೆ. ಸಿನಿಮಾ, ನಟನೆ, ಗ್ಲಾಮರ್, ಸ್ಟಾರ್ ಗಿರಿಗಳನ್ನು‌ ಮೀರಿ ಒಬ್ಬ ಮಹಾ ಮಾನವತಾವಾದಿಯಾಗಿ ಪುನೀತ್ ನಮ್ಮೆಲ್ಲರ ಮನಗಳಲ್ಲಿ ನೆಲೆಯೂರಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next