ಬೆಂಗಳೂರು: ಕಾಂಗ್ರೆಸ್ ಪಕ್ಷದ ಚಟುವಟಿಕೆಗಳು ಹಾಗೂ ಸುದ್ದಿಗಳನ್ನು ಕಾರ್ಯಕರ್ತರಿಗೆ ತಲುಪಿಸಲು ಕಾಂಗ್ರೆಸ್ ರಾಜ್ಯ ಮಟ್ಟದ ಪಾಕ್ಷಿಕ ಪತ್ರಿಕೆ (ಸುದ್ದಿ ಸಂದೇಶ) ಹೊರ ತರಲು ಪ್ರಯತ್ನ ನಡೆಸಿದ್ದು, ಹೊಸ ವರ್ಷದಲ್ಲಿ ಪಾಕ್ಷಿಕ ಹೊರಬರುವ ಸಾಧ್ಯತೆ ಇದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಶನಿವಾರ ಪತ್ರಿಕೆ ತರುವ ಕುರಿತಂತೆ ಮೊದಲ ಸಭೆ ನಡೆಸಲಾಗಿದ್ದು, ಕೆಪಿಸಿಸಿ ಉಪಾಧ್ಯಕ್ಷರಾದ ಬಿ.ಎಲ್.ಶಂಕರ್, ರಾಜ್ಯ ಸಭಾ ಸದಸ್ಯ ಎಲ್. ಹನುಮಂತಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು, ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ಶ್ರೀಕಂಠ ಮೂರ್ತಿ ಪಾಲ್ಗೊಂಡಿದ್ದರು.ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪಕ್ಷದಲ್ಲಿ ನಡೆಯುವ ಚಟುವಟಿಕೆಗಳು, ರಾಷ್ಟ್ರೀಯ ನಾಯಕರ ಸಂದೇಶಗಳು ತಳ ಮಟ್ಟದ ಕಾರ್ಯಕರ್ತರಿಗೆ ತಲುಪಿಸಲು ಪಾಕ್ಷಿಕ ತರುವ ಕುರಿತು ಚರ್ಚೆ ನಡೆಸಲಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಕಾಂಗ್ರೆಸ್ ಸಂದೇಶ ಎಂಬ ಆಂತರಿಕ ಪ್ರಸಾರಕ್ಕಾಗಿ ಪತ್ರಿಕೆ ಹೊರ ತರಲಾಗುತ್ತಿದ್ದು, ಅದರ ಮಾದರಿಯಲ್ಲಿಯೇ ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರಿಗೆ ಎಲ್ಲ ಸಂದೇಶ ರವಾನಿಸಲು ಪಾಕ್ಷಿಕ ಹೊರ ತರಲು ಉದ್ದೇಶಿಸಲಾಗಿದೆ. ಪಕ್ಷವನ್ನು ಬಲ ಪಡಿಸಲು ನಾಯಕರು ನೀಡುವ ಸಂದೇಶಗಳನ್ನು ಹಾಕುವುದು, ಪಕ್ಷದ ವತಿಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಮಾಹಿತಿ ಒದಗಿಸುವುದು. ಅಗತ್ಯ ಬಿದ್ದರೆ ಪಕ್ಷದ ಪರವಾಗಿ ವಿಶೇಷ ಅಂಕಣಗಳನ್ನು ಬರೆಯಲು ಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.
ಆರಂಭದಲ್ಲಿ ಪ್ರತಿ ಗ್ರಾಮ ಪಂಚಾಯತಿ, ತಾಲೂಕು, ಜಿಲ್ಲಾ ಪಂಚಾಯತಿ ಹಾಗೂ ಪಕ್ಷದ ವಿವಿಧ ಘಟಕಗಳಿಗೆ ಪತ್ರಿಕೆ ಕಳುಹಿಸಲು ಚಿಂತನೆ ನಡೆದಿದ್ದು, ಆರಂಭದಲ್ಲಿ ಕನಿಷ್ಠ 10 ಸಾವಿರ ಪ್ರತಿಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ನಂತರ ಪ್ರತಿ ಬೂತ್ ಮಟ್ಟದವರೆಗೂ ವಿಸ್ತರಿಸಲು ಯೋಜಿಸಲಾಗಿದ್ದು, ಸುಮಾರು 70 ಸಾವಿರ ಪ್ರತಿ ಪ್ರಟಕಿಸುವ ಆಲೋಚನೆ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್, ದೆಹಲಿಯಲ್ಲಿರುವ ಕಾಂಗ್ರೆಸ್ ಸಂದೇಶ ಮಾದರಿಯಲ್ಲಿ ರಾಜ್ಯದಲ್ಲಿ ಕಾರ್ಯಕರ್ತರೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಒಂದು ಸುದ್ದಿ ಸಂದೇಶ ಹೊರ ತರಲು ತೀರ್ಮಾನಿಸಿದ್ದೇವೆ. ಪ್ರಾಥಮಿಕ ಹಂತದ ಚರ್ಚೆ ನಡೆದಿದ್ದು, ಹೊಸ ವರ್ಷದಿಂದ ಪ್ರಕಟಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.