ಉತ್ತರಪ್ರದೇಶ: ಯುಪಿಯ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಹಣ ಮತ್ತು ಆಸ್ತಿ ವಿಚಾರದಲ್ಲಿ ಜಗಳ ನಡೆದು ಇಬ್ಬರು ಸಹೋದರರು ತಮ್ಮ ತಂದೆಯನ್ನು ಕೊಂದ ಘಟನೆ ಉತ್ತರಪ್ರದೇಶದ ಮಧುಬನ್ವಾ ಗ್ರಾಮದಲ್ಲಿ ನಡೆದಿದೆ.
ಘಟನೆಯ ಬಳಿಕ ಮೃತ ತಂದೆಯ ದೇಹವನ್ನು ಚರಂಡಿಯ ಪಕ್ಕದಲ್ಲಿ ಹೂತುಹಾಕಿ, ತಾಯಿಗೆ ತಂದೆ ಇರುವುದಾಗಿಯೂ, ಬೇರೆ ಊರಿಗೆ ಅವರನ್ನು ಕಳುಹಿಸಿರುವುದಾಗಿ ಸುಳ್ಳು ಹೇಳಿರುತ್ತಾರೆ. ಜೂನ್ 4 ರಂದು ಸಂತ್ರಸ್ತ ಪರಶುರಾಮ್ ತನ್ನ ಇಬ್ಬರು ಮಕ್ಕಳಾದ ರಾಜಾರಾಮ್ ಮತ್ತು ಸೋನು ಅವರೊಂದಿಗೆ ಮದ್ಯ ಮತ್ತು ಆಸ್ತಿಗಾಗಿ ಹಣ ಕೇಳುವ ಬಗ್ಗೆ ಜಗಳವಾಡಿದ್ದನು.
ಮರುದಿನ ತಂದೆ ಇಬ್ಬರಿಗೆ ಬೆದರಿಕೆ ಹಾಕಿದ್ದು, ಆಸ್ತಿ ಹಿಂತಿರುಗಿಸದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿ ಅವರು ಕೆಲಸಕ್ಕೆ ತೆರಳಿದ್ದರು. ಆಕ್ರೋಶಗೊಂಡ ಸಹೋದರರು ಆತನನ್ನು ಹಿಂಬಾಲಿಸಿದರು, ಅವನನ್ನು ಕೊಂದು ನಂತರ ಅವನ ದೇಹವನ್ನು ಚರಂಡಿಯ ಪಕ್ಕದಲ್ಲಿ ಹೂತಿದ್ದರು. ನಂತರ ಪ್ರತಿ ಬಾರಿ ತಾಯಿಗೆ ಸುಳ್ಳು ಹೇಳುತ್ತಾ ಬಂದಿರುತ್ತಾರೆ.
ದಿನಗಳು ಕಳೆದರೂ ಪತಿ ಮನೆಗೆ ಬಾರದೆ ಇದ್ದಾಗ ಪತ್ನಿ ಪೊಲೀಸರಿಗೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾಳೆ. ತನಿಖೆಯ ಸಮಯದಲ್ಲಿ ಪೊಲೀಸರು ಇಬ್ಬರು ಪುತ್ರರ ಮೇಲೆ ಅನುಮಾನಗೊಂಡು ಅಂತಿಮವಾಗಿ ಅವರನ್ನು ವಿಚಾರಣೆಗೆ ಒಳಪಡಿಸಿದರು.
ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಯಶ್ವೀರ್ ಸಿಂಗ್ ಹೇಳುವ ಪ್ರಕಾರ “ವಿಚಾರಣೆಯ ಸಮಯದಲ್ಲಿ, ಇಬ್ಬರು ಅಪರಾಧವನ್ನು ಒಪ್ಪಿಕೊಂಡರು ಮತ್ತು ಮೃತದೇಹದ ಸ್ಥಳವನ್ನು ಬಹಿರಂಗಪಡಿಸಿದರು. ನಾವು ಅದನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ” ಎಂದಿದ್ದಾರೆ.
ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.