ಬೆಂಗಳೂರು: ಶಾಲೆ ಆರಂಭ ಕುರಿತು ಮಕ್ಕಳ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ವರದಿ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲಿಯೇ ಶಿಕ್ಷಣ ಇಲಾಖೆಗೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ತಜ್ಞರೊಂದಿಗೆ ನಡೆದ ಸಭೆ ಬಳಿಕ ಮಾತನಾಡಿದ ಅವರು, ಕೇಂದ್ರವು ಶಾಲೆಗಳನ್ನು ತೆರೆಯಲು ಆದೇಶ ಹೊರಡಿಸಿದೆ. ಈ ಪ್ರಕಾರ ಅಕ್ಟೋಬರ್ 15ರಿಂದ ಶಾಲಾ ಕಾಲೇಜುಗಳನ್ನು ತೆರೆಯಲು ರಾಜ್ಯ ಸರಕಾರಗಳಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.
‘ರಾಜ್ಯದಲ್ಲಿ ಎಲ್‌ಕೆಜಿ-ಯುಕೆಜಿ ಯಾವಾಗ ಪ್ರಾರಂಭಿಸಬಹುದು, ಯಾವ ತರಗತಿಗಳನ್ನು ಮೊದಲು ಪ್ರಾರಂಭಿಸಬಹುದು ಸಮುದಾಯ ಜನಪ್ರತಿನಿಧಿಗಳಿಂದ ಯಾವ ರೀತಿಯಿಂದ ಸಹಕಾರ ನಿರೀಕ್ಷಿಸಬಹುದು’ ಎಂಬ ಮೂರು ವಿಷಯಗಳಿಗೆ ಸಂಬಂಧಿಸಿ ಶಿಕ್ಷಣ ಸಚಿವರು ಆರೋಗ್ಯ ಇಲಾಖೆಯ ಸಲಹೆ ಸೂಚನೆಗಳನ್ನು ಕೇಳಿದ್ದಾರೆ.
ಈ ಕುರಿತು ಮಕ್ಕಳ ತಜ್ಞರ ಜತೆ ಸಭೆ ನಡೆಸಲಾಗುತ್ತಿದ್ದು, ಶೀಘ್ರವೇ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಮಕ್ಕಳು ಹಾಗೂ ಪೋಷಕರು ತೊಂದರೆಗೆ ಒಳಗಾಗಬಾರದು ಎಂಬ ಕಾರಣಕ್ಕೆ ಶಾಲೆ ಆರಂಭಿಸಲು ನಿರ್ಧರಿಸಿಲ್ಲ.
ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ಸುರಕ್ಷತೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಎರಡನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ಧಾರ ಮಾಡುತ್ತೇವೆ ಎಂದರು.