ಪಾಂಡವಪುರ: ಮದುವೆ ದಿನವೇ ಪರೀಕ್ಷೆ ನಿಗದಿಯಾಗಿದ್ದ ಹಿನ್ನೆಲೆ ಚಿನಕುರಳಿಯ ಎಸ್‌ಟಿಸಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕಲ್ಯಾಣ ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆಯುವ ಮೂಲಕ ಮಾದರಿಯಾಗಿದ್ದಾರೆ.
ಪ್ರಶಂಸೆ: ತಾಲೂಕಿನ ಚಿನಕುರಳಿಯಲ್ಲಿರುವ ಶಾಸಕ ಸಿ.ಎಸ್.ಪುಟ್ಟರಾಜು ಅವರ ಮಾಲಿಕತ್ವದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿರುವ ಎಲ್.ವೈ.ಐಶ್ವರ್ಯಗೆ ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಹಸೆಮಣೆಯಿಂದ ನೇರವಾಗಿ ಕಾಲೇಜಿಗೆ ಆಗಮಿಸಿ ಪರೀಕ್ಷೆ ಬರೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮದುವೆ ದಿನವೇ ಪರೀಕ್ಷೆ ನಿಗದಿ: ತಾಲೂಕಿನ ಲಿಂಗಪುರ ಗ್ರಾಮದ ಕಮಲಾ ಮತ್ತು ಯೋಗೇಂದ್ರ ಅವರ ಪುತ್ರಿ ಐಶ್ವರ್ಯ ಹಾಗೂ ಮೈಸೂರು ತಾಲೂಕು ಲಕ್ಷ್ಮೀಪುರ ಗ್ರಾಮದ ಭಾಗ್ಯಲಕ್ಷ್ಮೀ ಹಾಗೂ ಸೋಮಶೇಖರ್ ಅವರ ಪುತ್ರ ಅವಿನಾಶ್ ಅವರ ವಿವಾಹ ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿತ್ತು. ಅದೇ ದಿನ ಬಿಕಾಂ ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಮದುವೆ ಮುಗಿದ ಬಳಿಕ ಕುಟುಂಬಸ್ಥರು ಹಾಗೂ ಅತ್ತೆ, ಮಾವ, ಪತಿಯ ಅನುಮತಿ ಪಡೆದು ವಧು-ವರ ನೇರವಾಗಿ ಪರೀಕ್ಷೆ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ.
ಶಾಸಕರು ಹಾಗೂ ಸಂಸ್ಥೆಯ ಸಿಇಒ ಶ್ಲಾಘನೆ: ಹೊಸಬಾಳಿನ ಹೊಸಿಲಿಗೆ ಕಾಲಿಟ್ಟಿರುವ ಭವಿಷ್ಯದ ದೃಷ್ಟಿಯಿಂದ ಜವಾಬ್ದಾರಿಯುತವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿನಿ ಐಶ್ವರ್ಯ ಹಾಗೂ ಅವರಿಗೆ ಸಹಕಾರ ನೀಡಿದ ಹಿರಿಯರಿಗೆ ಶಾಸಕ ಸಿ.ಎಸ್.ಪುಟ್ಟರಾಜು, ಶಿಕ್ಷಣ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು ಅಭಿನಂದನೆ ಸಲ್ಲಿಸಿದ್ದಾರೆ.