Advertisement

80 ಲಕ್ಷ ರೂ. ವ್ಯಯಿಸಿದ ಸೇತುವೆ ಒಂದು ವರ್ಷದಲ್ಲೇ ನಿರುಪಯುಕ್ತ!

03:30 AM Nov 28, 2018 | Team Udayavani |

ಪಡುಬಿದ್ರಿ: ವರ್ಷದ ಹಿಂದಷ್ಟೇ ಸುಮಾರು 80 ಲಕ್ಷ ರೂ. ವ್ಯಯಿಸಿ ಹೆಜಮಾಡಿ ಮತ್ತು ಪಡುಬಿದ್ರಿ ಗ್ರಾಮಗಳ ಮುಟ್ಟಳಿವೆ ಪ್ರದೇಶದಲ್ಲಿ ನಿರ್ಮಿಸಿದ ಸೇತುವೆ ನಿರುಪಯುಕ್ತವೆನಿಸಿದೆ. ಈ ಸೇತುವೆಯಲ್ಲಿ ಅಳಿವೆ ಮೂಲಕ ಮಳೆಗಾಲದ ಆರಂಭಕ್ಕೆ ಹರಿದು ಬರುವ ನೀರು ಸಮುದ್ರವನ್ನು ಸೇರದಿರುವ ಕಾರಣ ಉಪಯೋಗಕ್ಕೆ ಬಾರದೇ ವ್ಯರ್ಥವಾದ ಹಿನ್ನೆಲೆಯಲ್ಲಿ ಮಂಗಳವಾರ ಜಿ.ಪಂ. ಸ್ಥಾಯೀ ಸಮಿತಿ ಮತ್ತು ಬಂದರು ಮೀನುಗಾರಿಕಾ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಈ ಪ್ರದೇಶದಲ್ಲಿ ಹೊಸ ಸೇತುವೆ
ನಿರ್ಮಾಣಕ್ಕೆ ಸರ್ವೇ ನಡೆಸಿ ಆದಷ್ಟು ಬೇಗ ಕ್ರಿಯಾಯೋಜನೆ ರೂಪಿಸುವುದಾಗಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಉದಯ ಶೆಟ್ಟಿ ಹೇಳಿದರು. ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್‌ ಪಡುಬಿದ್ರಿ ಅವರು ಜಿ.ಪಂ. ಮಾಸಿಕ ಸಭೆಯಲ್ಲಿ ಸೇತುವೆ ನಿಷ್ಪ್ರಯೋಜಕವಾಗಿರುವ ಬಗ್ಗೆ ಪ್ರಸ್ತಾವಿಸಿ ಅನುದಾನ ತಡೆ ಹಿಡಿಯುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಸಭೆ ನಿರ್ಧರಿಸಿದಂತೆ ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿಯ ಅಧ್ಯಕ್ಷ ಉದಯ ಕೋಟ್ಯಾನ್‌, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಾರ್ಶ್ವನಾಥ್‌, ಲೋಕೋಡಯೋಗಿ ಇಲಾಖಾ ಎಂಜಿನಿಯರ್‌ ಮಿಥುನ್‌ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ಶಶಿಕಾಂತ್‌ ಪಡುಬಿದ್ರಿ ಮಾತನಾಡಿ, ಕಾಮಿನಿ ಹೊಳೆ-ಸಮುದ್ರ ಸಂಗಮ ಸ್ಥಳದಲ್ಲಿ ಸೇತುವೆ ನಿರ್ಮಾಣದಿಂದ ಪಡುಬಿದ್ರಿ ಭಾಗದಲ್ಲಿ ಕೃತಕ ನೆರೆಯುಂಟಾಗಿದೆ. ಸೇತುವೆಯ ಆಳ ಕಡಿಮೆಯಾಗಿರುವ ಕಾರಣ ಸಮಸ್ಯೆ ಪರಿಹರಿಸಲಾದಷ್ಟು ದೊಡ್ಡದಾಗಿದೆ. ಅದರ ಬದಲು ಈಗ ಹೊಳೆ ನೀರು ಸಮುದ್ರ ಸೇರುವ ಜಾಗದಲ್ಲಿ ಮತ್ತೂಂದು ಸೇತುವೆ ನಿರ್ಮಿಸಬೇಕು. ಇದರಿಂದ ಹೊಳೆ ಭಾಗದ ಜನರಿಗೆ ಉಪಯೋಗವಾಗಲಿದೆ ಎಂದರು.

ಸಾರ್ವಜನಿಕ ಅಭಿಪ್ರಾಯ ಪರಿಗಣಿಸದೆ ಸರಕಾರಿ ಅನುದಾನವನ್ನು ನಿಷ್ಪ್ರಯೋಜಕಗೊಳಿಸಿದ ಬಗ್ಗೆ ಉದಯ ಕೋಟ್ಯಾನ್‌ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಜಿ.ಪಂ.ಗೆ ಸಮಗ್ರ ಮಾಹಿತಿ ನೀಡಿ ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು. ಬಂದರು ಮತ್ತು ಮೀನುಗಾರಿಕಾ ಇಲಾಖೆಯಿಂದ ಕ್ರಿಯಾ ಯೋಜನೆ ದೊರೆತ ಬಳಿಕ ಜಿ.ಪಂ.ಗೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಕ್ರೋಡೀಕರಣಕ್ಕೆ ಪ್ರಯತ್ನಿಸಲಾಗುವುದು ಎಂದು ಶಶಿಕಾಂತ್‌ ಪಡುಬಿದ್ರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next