ಕೇಪ್‌ಟೌನ್: 2019ರ ಕ್ಯಾಲೆಂಡರ್ ವರ್ಷದ ಮೊದಲ ಟೆಸ್ಟ್ ಪಂದ್ಯವನ್ನು ಜಯಿಸಿದ ಹೆಗ್ಗಳಿಕೆ ದಕ್ಷಿಣ ಆಫ್ರಿಕಾದ್ದಾಗಿದೆ. ಇಲ್ಲಿನ ನ್ಯೂಲ್ಯಾಂಡ್ಸ್ ಅಂಗಳದಲ್ಲಿ ನಡೆದ ನ್ಯೂ ಇಯರ್ ಟೆಸ್ಟ್ ಪಂದ್ಯದಲ್ಲಿ ಹರಿಣಗಳ ಪಡೆ ಪಾಕಿಸ್ಥಾನವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿ ಈ ಹೆಗ್ಗಳಿಕೆಗೆ ಪಾತ್ರವಾಯಿತು.
ಗೆಲುವಿಗೆ ಕೇವಲ 41 ರನ್ನುಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ, 4ನೇ ದಿನವಾದ ರವಿವಾರ 9.5 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟದಲ್ಲಿ 43 ರನ್ ಮಾಡಿ ಇದನ್ನು ಸಾಧಿಸಿತು. ಇದರೊಂದಿಗೆ ಡು ಪ್ಲೆಸಿಸ್ ಬಳದ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದ್ದು, 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದು ತವರಿನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಒಲಿದ ಸತತ 7ನೇ ಟೆಸ್ಟ್ ಸರಣಿ.
“ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯವನ್ನು ಆಫ್ರಿಕಾ 6 ವಿಕೆಟ್‌ಗಳಿಂದ ಗೆದ್ದಿತ್ತು. ಅಂತಿಮ ಟೆಸ್ಟ್ ಜ. 11ರಿಂದ ಜೊಹಾನ್ಸ್‌ಬರ್ಗ್‌ನಲ್ಲಿ ಆರಂಭವಾಗಲಿದೆ.
ಪಾಕಿಸ್ಥಾನದ 177 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ 431 ರನ್ ಪೇರಿಸಿತು. ನಾಯಕ ಡು ಪ್ಲೆಸಿಸ್ ಅವರ 103 ರನ್ ಆಫ್ರಿಕಾ ಸರದಿಯ ಆಕರ್ಷಣೆಯಾಗಿತ್ತು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಾಕಿಸ್ಥಾನ ಗಳಿಸಿದ್ದು 294 ರನ್. ಸ್ಟೇನ್ ಮತ್ತು ರಬಾಡ ತಲಾ 4 ವಿಕೆಟ್ ಉರುಳಿಸಿದರು. ಶತಕವೀರ ಡು ಪ್ಲೆಸಿಸ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-177 ಮತ್ತು 294. ದಕ್ಷಿಣ ಆಫ್ರಿಕಾ-431 ಮತ್ತು ಒಂದು ವಿಕೆಟಿಗೆ 43. ಪಂದ್ಯಶ್ರೇಷ್ಠ: ಫಾ ಡು ಪ್ಲೆಸಿಸ್.