ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಚಿತ್ರಗಳು ಸದ್ದಿಲ್ಲದೆಯೇ ಸೆಟ್ಟೇರುತ್ತಿವೆ. ಆ ಸಾಲಿಗೆ ಈಗ ಹೊಸಬರ ಚಿತ್ರವೊಂದು ಸದ್ದಿಲ್ಲದೆಯೇ ಸೆಟ್ಟೇರಿದೆ. ಈ ಹಿಂದೆ ಚಂದನ್, ಶ್ವೇತಾ ಪಂಡಿತ್ ಅಭಿನಯದ “ಎರಡೊಂದ್ಲ ಮೂರು’ ಚಿತ್ರವನ್ನು ನಿರ್ದೇಶಿಸಿದ್ದ ಕುಮಾರ್ ದತ್, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಅವರ ಎರಡನೇ ಸಿನಿಮಾ. ಈ ಚಿತ್ರಕ್ಕೆ ಪಂಚಾಕ್ಷರಿ ನಾಯಕರಾಗಿ ನಟಿಸುತ್ತಿದ್ದಾರೆ.
ಈ ಹಿಂದೆ “ರಂಗ್‌ಬಿರಂಗಿ’ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದ ಪಂಚಾಕ್ಷರಿ ಅವರಿಗೆ ಈ ಚಿತ್ರದಲ್ಲಿ ನಾಯಕಿಯಾಗಿ ಪ್ರತಿಭಾ ನಟಿಸುತ್ತಿದ್ದಾರೆ. ಇದು ಇವರಿಗೆ ಮೊದಲ ಚಿತ್ರ. ಸದ್ಯಕ್ಕೆ “ಟರ್ನಿಂಗ್ ಪಾಯಿಂಟ್’ ಶೀರ್ಷಿಕೆ ಇಡಬೇಕೆಂಬುದು ನಿರ್ದೇಶಕರ ಯೋಚನೆ. ಆ ಶೀರ್ಷಿಕೆ ಸದ್ಯಕ್ಕೆ ಫಿಲ್ಮ್ ಚೇಂಬರ್‌ನಲ್ಲಿದ್ದು, ಅಲ್ಲಿ ಅನುಮತಿ ಸಿಕ್ಕ ಬಳಿಕ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಇದೊಂದು ರಾತ್ರಿ ಪಯಣದ ಕಥೆ.
ತುಮಕೂರು, ಮಂಗಳೂರು ರಸ್ತೆಗಳಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆ ಎನ್ನುವ ನಿರ್ದೇಶಕರು, ಬೆಂಗಳೂರಿನಲ್ಲೂ ಸಾಕಷ್ಟು ಭಾಗ ಚಿತ್ರೀಕರಿಸಲಾಗುತ್ತದೆ. ಈ ಚಿತ್ರದ ವಿಶೇಷವೆಂದರೆ, ರಾತ್ರಿ ವೇಳೆಯಲ್ಲೇ ಚಿತ್ರೀಕರಣ ನಡೆಸುವುದು. ಹಾಗಾಗಿ ಇದೊಂದು ರಾತ್ರಿ ಕಥೆ ಎಂಬುದು ಅವರ ಮಾತು. ಇಲ್ಲಿ ಕೇವಲ ಲವ್‌ಸ್ಟೋರಿ ಮಾತ್ರವಲ್ಲ, ಬೇರೆಯದ್ದೇ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ.
ಲವ್ ಟ್ರಾಕ್ ಜೊತೆಗೆ ಸೆಂಟಿಮೆಂಟ್ ಮತ್ತು ಮನರಂಜನೆ ಕೂಡ ಚಿತ್ರದ ಹೈಲೈಟ್. ಚಿತ್ರದ ಮತ್ತೂಂದು ವಿಶೇಷವೆಂದರೆ, ಇದು ಕನ್ನಡ ಜೊತೆಗೆ ಮರಾಠಿ ಭಾಷೆಯಲ್ಲೂ ತಯಾರಾಗಲಿದೆ. ಅಂದಹಾಗೆ, ಈ ಚಿತ್ರವನ್ನು ಅಭಿಲಾಶ್ ಚಕ್ಲ ಅವರು ನಿರ್ಮಾಣ ಮಾಡುತ್ತಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳೇ ಚಿತ್ರದಲ್ಲೂ ಕಾಣಿಸಿಕೊಳ್ಳಲಿವೆ. ಶ್ರೀಧರ್, ಸೂರಜ್ ಸೇರಿದಂತೆ ಅನೇಕ ಹೊಸಬರು ನಟಿಸುತ್ತಿದ್ದಾರೆ.
“ಒಂದ್ ಕಥೆ ಹೇಳ್ಲಾ’ ಚಿತ್ರಕ್ಕೆ ಸಂಗೀತ ನೀಡಿರುವ ಬಕ್ಕೇಶ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಎರಡು ಹಾಡುಗಳು ಚಿತ್ರದಲ್ಲಿರಲಿವೆ. ಇನ್ನು, “ಎರಡೊಂದ್ಲ ಮೂರು’ ಚಿತ್ರದಲ್ಲಿ ಕೆಲಸ ಮಾಡಿದ್ದ ವಿನಯ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. 25 ದಿನಗಳ ಕಾಲ ನಡೆಯುವ ಚಿತ್ರೀಕರಣಕ್ಕೆ ಸೋಮವಾರ ರಾತ್ರಿ ಚಾಲನೆ ದೊರೆತಿದೆ.