Advertisement

ಹೊಸಂಗಡಿ ಯಕ್ಷಬಳಗ ಸಮ್ಮಾನಿತ: ತಾರಾನಾಥ ವರ್ಕಾಡಿ

08:15 AM Aug 18, 2017 | |

ಗಡಿನಾಡು ಕಾಸರಗೋಡಿನಲ್ಲಿ ಯಕ್ಷಗಾನವನ್ನು ಬೆಳೆಸುವಲ್ಲಿ ಕಳೆದ ಎರಡೂವರೆ ದಶಕಗಳಿಂದ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಕಲಾಸಂಸ್ಥೆ ಯಕ್ಷಬಳಗ ಹೊಸಂಗಡಿ. 25 ವರ್ಷಗಳಿಂದ ಆಷಾಢ ಮಾಸ ಸರಣಿ ತಾಳಮದ್ದಳೆ ಕೂಟ ಹಾಗೂ ಸಾಧಕರಿಗೆ ಸಮ್ಮಾನವನ್ನು ನಡೆಸುತ್ತಾ ಬಂದಿದೆ. ಈ ಬಾರಿ ಈ ಸರಣಿ ಆಗಸ್ಟ್‌ 19ರಂದು ದೇವಸ್ಥಾನದಲ್ಲಿ ಸಮಾರೋಪಗೊಳ್ಳಲಿದ್ದು ತೆಂಕುತಿಟ್ಟಿನ ಕಲಾವಿದ, ಪ್ರಸಂಗಕರ್ತ, ಯಕ್ಷಪತ್ರಕರ್ತ ತಾರಾನಾಥ ವರ್ಕಾಡಿ ಸಮ್ಮಾನ ಸ್ವೀಕರಿಸಲಿದ್ದಾರೆ.

Advertisement

ತಾರಾನಾಥ ವರ್ಕಾಡಿ ಯಕ್ಷಗಾನ ರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿ ದವರು. ಪುಟ್ಟ ವಾಕ್ಯಗಳ ಸಂಭಾಷಣೆ, ಸ್ಪಷ್ಟ  ಉಚ್ಛಾರ, ಮೋಹಕ ಲಾಲಿತ್ಯ ಪೂರ್ಣ ಮಾತುಗಾರಿಕೆಯಿಂದಲೇ ಪ್ರೇಕ್ಷಕರನ್ನು ಹಿಡಿದಿಡಬಲ್ಲವರು. ಸಂತುಲಿತ ನಾಟ್ಯದಿಂದ ತನಗೆ ದೊರೆತ ಯಾವುದೇ ಪಾತ್ರವನ್ನು ಚೊಕ್ಕ ವಾಗಿ ಮಾಡಬಲ್ಲ ಕೌಶಲ ವರ್ಕಾಡಿಯವರ ಹಿರಿಮೆ. ವಿಷ್ಣು, ರಾಮ, ಕೃಷ್ಣ, ಸುಧನ್ವ, ಪಾತ್ರಗಳು ಇವರಿಗೆ ತಾರಾಮೌಲ್ಯ ತಂದುಕೊಟ್ಟಿವೆ.  

ಯಕ್ಷಗಾನದ ಪಾತ್ರದ ಜತೆಜತೆಯಲ್ಲೇ ಪ್ರಸಂಗ ರಚನೆ, ಸಾಹಿತ್ಯ ರಚನೆ, ಪತ್ರಿಕೆಗಳಲ್ಲಿ ಸಾಹಿತ್ಯ ಕೃಷಿಯನ್ನು ನಡೆಸುತ್ತಾ ಬಂದವರು.  ನಿತ್ಯ ಅಧ್ಯಯನಶೀಲರಾಗಿ ಯಕ್ಷಗಾನ, ತಾಳಮದ್ದಳೆ, ಕನ್ನಡ ತುಳು ಪ್ರಸಂಗರಚನೆ, ಜ್ಯೋತಿಷ, ವಾಸ್ತು, ಆಯುರ್ವೇದ ಪರಿಣತರಾಗಿದ್ದಾರೆ, ಯಕ್ಷಗಾನ ಪತ್ರಿಕೋದ್ಯಮಿಯಾಗಿದ್ದಾರೆ.

 ಧರ್ಮಸ್ಥಳ ಯಕ್ಷಗಾನ ಕಲಾಕೇಂದ್ರದಲ್ಲಿ ತರಬೇತಿ ಪಡೆದ ವರ್ಕಾಡಿಯವರಿಗೆ ಕರ್ಗಲ್ಲು ವಿಶ್ವೇಶ್ವರ ಭಟ್‌ ಹಾಗೂ ಕೆ. ಗೋವಿಂದ ಭಟ್‌ ನಾಟ್ಯ ಗುರುಗಳು. ಪ್ರಸಂಗ ರಚನೆಗೆ ಡಾ| ಶಿಮಂತೂರು ನಾರಾಯಣ ಶೆಟ್ಟಿ, ಅರ್ಥಗಾರಿಕೆಗೆ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರು ಗುರುಗಳು. ವಿವಿಧ ಮೇಳಗಳಲ್ಲಿ ಸುದೀರ್ಘ‌ ಮೂರೂವರೆ ದಶಕ ತಿರುಗಾಟ ನಡೆಸಿದ್ದಾರೆ. “ಬಲ್ಲಿರೇನಯ್ಯ’ ಯಕ್ಷಗಾನ ಮಾಸಪತ್ರಿಕೆ ಹೊರ ತರುತ್ತಿದ್ದು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯರೂ ಆಗಿದ್ದಾರೆ. 

ಯೋಗೀಶ ರಾವ್‌ ಚಿಗುರುಪಾದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next