Advertisement
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎನ್‌ಎಚ್‌ಎಂ ನೌಕರರು 10 ದಿನಗಳಿಂದ ಮುಷ್ಕರ ನಿರತರಾಗಿದ್ದಾರೆ. ಇದು ಆರೋಗ್ಯ ಇಲಾಖೆಯ ಬಹುತೇಕ ಕೆಲಸಗಳ ಮೇಲೆ ಪರಿಣಾಮ ಬೀರಿದೆ. ನವಜಾತ ಶಿಶುಗಳ ಚಿಕಿತ್ಸೆ, ವೆಂಟಿಲೇಟರ್ ಅಳವಡಿಕೆ, ತೀವ್ರ ನಿಗಾ ಘಟಕದಲ್ಲಿ ಆರೈಕೆ ಸಹಿತ ಎಲ್ಲ ಕೆಲಸಗಳನ್ನು ಇವರೇ ನೋಡಿಕೊಳ್ಳುತ್ತಿದ್ದರು. ಈಗ ಅವರಿಲ್ಲದೆ ನವಜಾತ ಶಿಶು ವಿಭಾಗದ ಕಾರ್ಯ ನಿರ್ವಹಣೆಗೆ ತೊಂದರೆ ಉಂಟಾಗಿದೆ. ವೆನ್ಲಾಕ್ ಆಸ್ಪತ್ರೆಯ ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ.
ಆಯುಷ್ಮಾನ್ ಭಾರತ್ ಯೋಜನೆಯಡಿ ನವಜಾತ ಶಿಶುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಯೋಜನೆಯಡಿ ಆಸ್ಪತ್ರೆ ಶುಲ್ಕ ಭರಿಸಲಾಗುತ್ತದೆಯೇ ವಿನಾ ಮೆಡಿಕಲ್‌ನಿಂದ ತರುವಂತಹ ಔಷಧಗಳ ವೆಚ್ಚವನ್ನು ನಾವೇ ಭರಿಸಬೇಕು. ಆಸ್ಪತ್ರೆಯಲ್ಲಿರುವಷ್ಟು ದಿನ ಊಟ, ಇತರ ಖರ್ಚು ಕೂಡ ಇರುತ್ತದೆ. ದಾಖಲೆ ಸರಿಯಿಲ್ಲದಿದ್ದರೆ ಯೋಜನೆಯಡಿ ಆಸ್ಪತ್ರೆ ಶುಲ್ಕದ ಮೊತ್ತವೂ ಸಿಗುವುದಿಲ್ಲ. ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಗಳಿಗೆ ನಮ್ಮಂತಹ ಬಡ ವರ್ಗದವರೇ ಚಿಕಿತ್ಸೆಗೆ ಬರುವುದರಿಂದ ಈಗ ಖಾಸಗಿ ಆಸ್ಪತ್ರೆಗಳಿಗೆ ಹಣ ಹೊಂದಿಸಲಾಗದೆ ಕಂಗಾಲಾಗಿದ್ದೇವೆ ಎಂದು ಲೇಡಿಗೋಶನ್‌ನಿಂದ ಖಾಸಗಿ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಗೊಂಡಿರುವ ಶಿಶುವಿನ ಹೆತ್ತವರೊಬ್ಬರು ಅಳಲು ತೋಡಿ ಕೊಂಡಿದ್ದಾರೆ.
Related Articles
ಆಸ್ಪತ್ರೆಯ ಮೂಲವೊಂದರ ಪ್ರಕಾರ ಲೇಡಿಗೋಶನ್‌ನ ನವಜಾತ ಶಿಶು ವಿಭಾಗದಲ್ಲಿ ಒಟ್ಟು 40 ಹಾಸಿಗೆಗಳು, 13 ವೆಂಟಿಲೇಟರ್‌ಗಳು ಇವೆ. ಇಲ್ಲಿನ ತೀವ್ರ ನಿಗಾ ಘಟಕದಲ್ಲಿ 20 ಮಂದಿ ಎನ್‌ಎಚ್‌ಎಂ ನೌಕರರಿದ್ದು, ಈಗ ಅವರಿಲ್ಲದೆ ಆ ವಿಭಾಗದ ನಿರ್ವಹಣೆ ಸವಾಲಾಗಿದೆ. 9 ದಿನಗಳ ಅವಧಿಯಲ್ಲಿ 25ರಿಂದ 30 ನವಜಾತ ಶಿಶುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ನವಜಾತ ಶಿಶು ವಿಭಾಗದಲ್ಲಿ 2 ಐಸಿಯುಗಳಿದ್ದು, ಒಂದರಲ್ಲಿ 12 ಹಾಸಿಗೆ, 5 ವೆಂಟಿಲೇಟರ್, ಮತ್ತೂಂದರಲ್ಲಿ 6 ಬೆಡ್‌ಗಳಿವೆ. ಆದರೆ ಅಲ್ಲಿಂದ ಎಷ್ಟು ಶಿಶುಗಳನ್ನು ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
Advertisement
ಲೇಡಿಗೋಶನ್‌ನಿಂದ ನವಜಾತ ಶಿಶುಗಳನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುತ್ತಿಲ್ಲ. ನಮ್ಮ ಆಸ್ಪತ್ರೆಯಲ್ಲಿ ಸಾಧ್ಯವಿರುವ ಎಲ್ಲ ಸೌಲಭ್ಯ, ಚಿಕಿತ್ಸೆಗಳನ್ನು ನೀಡುತ್ತೇವೆ. ಅಗತ್ಯಬಿದ್ದರೆ ಮಾತ್ರ ಖಾಸಗಿಗೆ ಕಳುಹಿಸುತ್ತೇವೆ. ಸಿಬಂದಿ ಕೊರತೆಯಿದ್ದರೆ ಆಂತರಿಕ ವ್ಯವಸ್ಥೆ ಮಾಡಿಕೊಳ್ಳುತ್ತೇವೆ.– ಡಾ| ದುರ್ಗಾಪ್ರಸಾದ್, ವೈದ್ಯಕೀಯ ಅಧೀಕ್ಷಕರು (ಪ್ರಭಾರ), ಲೇಡಿಗೋಶನ್ ಸರಕಾರಿ ಆಸ್ಪತ್ರೆ ವೆನ್ಲಾಕ್‌ನ ನವಜಾತ ಶಿಶು ವಿಭಾಗಕ್ಕೆ ಈಗಲೂ ದಾಖಲು ಮಾಡಿಕೊಳ್ಳ ಲಾಗುತ್ತಿದೆ. ಲಭ್ಯ ಸಿಬಂದಿ ವಿಭಾಗವನ್ನು ನಿರ್ವ ಹಿಸುತ್ತಿದ್ದಾರೆ. ತುಂಬಾ ಗಂಭೀರ ತೊಂದರೆ ಇರುವ ಶಿಶುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿರಬಹುದು. ಆದರೆ ಎಲ್ಲ ಶಿಶುಗಳನ್ನೂ ಕಳುಹಿಸಿಲ್ಲ.
-ಡಾ| ಸದಾನಂದ ಶ್ಯಾನ್‌ಭೋಗ್, ವೈದ್ಯಕೀಯ ಅಧೀಕ್ಷಕರು, ವೆನ್ಲಾಕ್ ಸರಕಾರಿ ಆಸ್ಪತ್ರೆ