ಫೂಲ್‌ಬನಿ/ಭುವನೇಶ್ವರ : ಒಡಿಶಾದ ಕಂದಮಾಲ್ ಜಿಲ್ಲೆಯಲ್ಲಿನ ಬುಡಕಟ್ಟು ವಸತಿ ಶಾಲೆಯ ಹಾಸ್ಟೆಲ್ ನಲ್ಲಿ ಹದಿನಾಲ್ಕು ವರ್ಷದ ಬಾಲಕಿಯು ಹೆತ್ತ ನವಜಾತ ಶಿಶು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಬಾಲಕಿಯು ದರಿಂಗೀಬಾದಿ ಗ್ರಾಮದ ಸೇವಾಶ್ರಮ ಹೈಸ್ಕೂಲ್‌ನ 8ನೇ ತರಗತಿಯ ವಿದ್ಯಾರ್ಥಿನಿ; ಕಳೆದ ಶನಿವಾರ ರಾತ್ರಿ ಈಕೆ ಮಗು ಹೆತ್ತಿದ್ದಳು. ಘಟನೆಯನ್ನು ಅನುಸರಿಸಿ ಒಡಿಶಾ ಸರಕಾರ, ಶಾಲೆಯ ಮುಖ್ಯೋಪಾಧ್ಯಾಯಿನಿ ರಾಧಾರಾಣಿ ದಲೇಯಿ ಮತ್ತು ಮೂವರು ಸಹಾಯಕ ಸುಪರಿಂಟೆಂಡೆಂಟ್‌ಗಳನ್ನು ಅಮಾನತು ಮಾಡಿದೆ. ಪೊಲೀಸರು ಶಾಲೆಯ ಆರು ಸಿಬಂದಿಗಳನ್ನು ಪ್ರಶ್ನಿಸುತ್ತಿದ್ದಾರೆ.
ಈ ನಡುವೆ ಪೊಲೀಸರು ತಕಾಲಮಹಾ ಗ್ರಾಮದ ನಿವಾಸಿಯಾಗಿರುವ ಮೂರನೇ ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಬಾಲಕಿಯ ಮೇಲಿನ ಅತ್ಯಾಚಾರದ ಆರೋಪದಲ್ಲಿ ಬಂಧಿಸಿದ್ದಾರೆ. ಬಾಲಕಿಯು ಕೆಲ ತಿಂಗಳ ಹಿಂದೆ ರಜೆಯಲ್ಲಿ ತನ್ನ ಗ್ರಾಮಕ್ಕೆ ಹೋಗಿದ್ದಾಗ ಈತ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.