ಹ್ಯಾಮಿಲ್ಟನ್: ಭಾರೀ ಮಳೆಯಿಂದ ನ್ಯೂಜಿಲ್ಯಾಂಡ್-ದಕ್ಷಿಣ ಆಫ್ರಿಕಾ ನಡುವಿನ ಹ್ಯಾಮಿಲ್ಟನ್ ಟೆಸ್ಟ್ ಪಂದ್ಯದ ಅಂತಿಮ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಇದರಿಂದ ಗೆದ್ದು ಸರಣಿಯನ್ನು ಸಮಬಲಗೊಳಿಸುವ ಹಾದಿ ಯಲ್ಲಿದ್ದ ನ್ಯೂಜಿಲ್ಯಾಂಡಿಗೆ ತೀವ್ರ ಹಿನ್ನಡೆಯಾಗಿದೆ.
ಆದರೆ ಈ ಮಳೆಯಿಂದ ದಕ್ಷಿಣ ಆಫ್ರಿಕಾಕ್ಕೆ ಮಾತ್ರ ಅವಳಿ ಲಾಭವಾಗಿದೆ. ಅದು 1-0 ಅಂತರದಿಂದ ಸರಣಿ ವಶಪಡಿಸಿ ಕೊಂಡಿತಷ್ಟೇ ಅಲ್ಲ, ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯವನ್ನು ಹಿಂದಕ್ಕೆ ತಳ್ಳಿ 2ನೇ ಸ್ಥಾನಕ್ಕೆ ಏರುವಲ್ಲಿ ಯಶಸ್ವಿಯಾಯಿತು.
175 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಳಿಕ 4ನೇ ದಿನದಾಟದ ಅಂತ್ಯಕ್ಕೆ 80 ರನ್ನಿಗೆ 5 ವಿಕೆಟ್ ಉದುರಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ಸೋಲಿನತ್ತ ಮುಖ ಮಾಡಿತ್ತು. ನ್ಯೂಜಿಲ್ಯಾಂಡಿನ ಸರಣಿ ಸಮಬಲದ ಯೋಜನೆಗೆ ಸಕಲವೂ ಸಿದ್ಧಗೊಂಡಿತ್ತು. ಆದರೆ ಅಂತಿಮ ದಿನ ಸುರಿದ ಮಳೆ ವಿಲಿಯಮ್ಸನ್ ಬಳಗದ ಪಾಲಿಗೆ ವಿಲನ್ ಆಗಿ ಕಾಡಿತು.
ವೆಲ್ಲಿಂಗ್ಟನ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ 8 ವಿಕೆಟ್‌ಗಳಿಂದ ಜಯಿಸಿತ್ತು. ಇದಕ್ಕೂ ಮುನ್ನ ಟಿ-20 (1-0) ಹಾಗೂ ಏಕದಿನ ಸರಣಿಯನ್ನೂ (3-2) ದಕ್ಷಿಣ ಆಫ್ರಿಕಾವೇ ವಶಪಡಿಸಿ ಕೊಂಡಿತ್ತು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-314 ಮತ್ತು 5 ವಿಕೆಟಿಗೆ 80. ನ್ಯೂಜಿಲ್ಯಾಂಡ್-489. ಪಂದ್ಯಶ್ರೇಷ್ಠ: ಕೇನ್ ವಿಲಿಯಮ್ಸನ್.