ಮೌಂಟ್ ಮೌಂಗನುಯಿ: ತಿಸರ ಪೆರೆರ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹೊರತಾಗಿಯೂ ನ್ಯೂಜಿಲ್ಯಾಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ 21 ರನ್ನುಗಳ ಸೋಲನುಭವಿಸಿದ ಶ್ರೀಲಂಕಾ ಸರಣಿ ಕಳೆದುಕೊಂಡು ನಿರಾಶೆ ಅನುಭವಿಸಿದೆ.
ಶನಿವಾರ ಇಲ್ಲಿ ನಡೆದ ನಿರ್ಣಾಯಕ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆತಿಥೇಯ ನ್ಯೂಜಿಲ್ಯಾಂಡ್ 7 ವಿಕೆಟಿಗೆ 319 ರನ್ ರಾಶಿ ಹಾಕಿದರೆ, ಶ್ರೀಲಂಕಾ 46.2 ಓವರ್‌ಗಳಲ್ಲಿ 298ಕ್ಕೆ ಆಲೌಟ್ ಆಯಿತು. ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇದೆ.
ಚೇಸಿಂಗ್ ವೇಳೆ ಶ್ರೀಲಂಕಾ ತೀವ್ರ ಕುಸಿತ ಅನುಭವಿಸಿದರೂ 7ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ತಿಸರ ಪೆರೆರ ಒಮ್ಮೆಲೇ ಸಿಡಿದು ನಿಂತು ಕಿವೀಸ್ ಬೌಲರ್‌ಗಳನ್ನು ಪುಡಿಗುಟ್ಟತೊಡಗಿದರು. ಕೇವಲ 74 ಎಸೆತಗಳಿಂದ 140 ರನ್ ಬಾರಿಸಿ ವಿಜೃಂಭಿಸಿದರು. ಈ ಅಮೋಘ ಬ್ಯಾಟಿಂಗ್ ವೇಳೆ 13 ಸಿಕ್ಸರ್ ಹಾಗೂ 8 ಬೌಂಡರಿ ಸಿಡಿಯಿತು. ಏಕದಿನ ಇನ್ನಿಂಗ್ಸ್ ಒಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಶ್ರೀಲಂಕಾ ಆಟಗಾರನೆಂಬ ದಾಖಲೆ ಪೆರೆರ ಪಾಲಾಯಿತು. ಪಾಕಿಸ್ಥಾನ ವಿರುದ್ಧದ 1996ರ ನೈರೋಬಿ ಪಂದ್ಯದಲ್ಲಿ ಸನತ್ ಜಯಸೂರ್ಯ 11 ಸಿಕ್ಸರ್ ಬಾರಿಸಿದ ಲಂಕಾ ದಾಖಲೆ ಪತನಗೊಂಡಿತು.
ಪೆರೆರ-ನುವಾನ್ ಪ್ರದೀಪ್ ಅಂತಿಮ ವಿಕೆಟಿಗೆ 44 ರನ್ ಒಟ್ಟುಗೂಡಿಸಿದರು. ಪೆರೆರ ಹೊರತುಪಡಿಸಿದರೆ ಕಿವೀಸ್ ದಾಳಿಯನ್ನು ಎದುರಿಸಿ ನಿಂತ ಏಕೈಕ ಆಟಗಾರನೆಂದರೆ ಆರಂಭಕಾರ ದನುಷ್ಕ ಗುಣತಿಲಕ. 73 ಎಸೆತ ಎದುರಿಸಿದ ಗುಣತಿಲಕ 9 ಬೌಂಡರಿ ನೆರವಿನಿಂದ 71 ರನ್ ಹೊಡೆದರು.
ನ್ಯೂಜಿಲ್ಯಾಂಡಿನ ಬೃಹತ್ ಮೊತ್ತಕ್ಕೆ ಕಾರಣರಾದವರು ಓಪನರ್ ಕಾಲಿನ್ ಮುನ್ರೊ (87), ರಾಸ್ ಟಯ್ಲರ್ (90) ಮತ್ತು ಜಿಮ್ಮಿ ನೀಶಮ್ (64). ಮುನ್ರೊ 77 ಎಸೆತಗಳಿಂದ ಇನ್ನಿಂಗ್ಸ್ ಕಟ್ಟಿದರು (12 ಬೌಂಡರಿ, 2 ಸಿಕ್ಸರ್). ನೀಶಮ್ ಅವರ 64 ರನ್ ಕೇವಲ 37 ಎಸೆತಗಳಿಂದ ಬಂತು (5 ಬೌಂಡರಿ, 3 ಸಿಕ್ಸರ್).
ಸಿಕ್ಸರ್ ದಾಖಲೆ
ಏಕದಿನ ಇನ್ನಿಂಗ್ಸ್ ಒಂದರಲ್ಲಿ ಅತ್ಯಧಿಕ ಸಿಕ್ಸರ್ ಹೊಡೆದ ವಿಶ್ವದಾಖಲೆ ಮೂವರ ಹೆಸರಲ್ಲಿದೆ. ರೋಹಿತ್ ಶರ್ಮ, ಎಬಿ ಡಿ ವಿಲಿಯರ್ ಮತ್ತು ಕ್ರಿಸ್ ಗೇಲ್ ತಲಾ 16 ಸಿಕ್ಸರ್ ಬಾರಿಸಿದ್ದಾರೆ. ಶೇನ್ ವಾಟ್ಸನ್ (15) ಮತ್ತು ಕೋರಿ ಆ್ಯಂಡರ್ಸನ್ (14) ಅನಂತರದ ಸ್ಥಾನದಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-7 ವಿಕೆಟಿಗೆ 319 (ಟಯ್ಲರ್ 90, ಮುನ್ರೊ 87, ನೀಶಮ್ 64, ಮಾಲಿಂಗ 45ಕ್ಕೆ 2). ಶ್ರೀಲಂಕಾ-46.2 ಓವರ್‌ಗಳಲ್ಲಿ 298 (ಪೆರೆರ 140, ಗುಣತಿಲಕ 71, ಸೋಧಿ 55ಕ್ಕೆ 3, ನೀಶಮ್ 48ಕ್ಕೆ 2, ಹೆನ್ರಿ 52ಕ್ಕೆ 2). ಪಂದ್ಯಶ್ರೇಷ್ಠ: ತಿಸರ ಪೆರೆರ.