ಹ್ಯಾಮಿಲ್ಟನ್: ವನಿತಾ ಏಕದಿನ ವಿಶ್ವಕಪ್ ನ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭಗೈದಿದ್ದ ಭಾರತೀಯ ತಂಡ ಎರಡನೇ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ಸೋಲನುಭವಿಸಿದೆ. ಇಲ್ಲಿನ ಸೆಡ್ಡಾನ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ 62 ರನ್ ಅಂತರದ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿದರೆ, ಭಾರತ ತಂಡ 198 ರನ್ ಗಳಷ್ಟೇ ಗಳಿಸಲು ಶಕ್ತವಾಯಿತು.
ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲ್ಯಾಂಡ್ ತಂಡಕ್ಕೆ ಸ್ಯಾಟರ್ ವೇಯ್ಟ್ ಮತ್ತು ಅಮೆಲಾ ಕೆರ್ರ್ ಅರ್ಧಶತಕದ ಕೊಡುಗೆ ನೀಡಿದರು. ಸ್ಯಾಟರ್ ವೇಯ್ಟ್ 71 ರನ್ ಗಳಿಸಿದರೆ, ಕೆರ್ರ್ 50 ರನ್ ಬಾರಿಸಿದರು. ಕೀಪರ್ ಮಾರ್ಟಿನ್ 41 ರನ್, ನಾಯಕಿ ಸೋಫಿ ಡಿವೈನ್ 35 ರನ್ ಗಳ ಕಾಣಿಕೆ ನೀಡಿದರು. ಭಾರತದ ಪರ ಪೂಜಾ ವಸ್ತ್ರಾಕರ್ ನಾಲ್ಕು ವಿಕೆಟ್ ಕಿತ್ತರೆ, ರಾಜೇಶ್ವರಿ ಗಾಯಕ್ವಾಡ್ ಎರಡು, ಜೂಲನ್ ಗೋಸ್ವಾಮಿ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:ಇ-ಶ್ರಮ್ ಯೋಜನೆ : ಯಾರು ಅರ್ಹರು? ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ
ಗುರಿ ಬೆನ್ನತ್ತಿದ ಭಾರತ ಸತತ ವಿಕೆಟ್ ಕಳೆದುಕೊಂಡು ನಿಧಾನ ಆರಂಭ ಪಡೆಯಿತು. 29.4 ಓವರ್ ವೇಳೆ ಕೇವಲ 97 ರನ್ ಗಳಿಸಿದ್ದ ಭಾರತ ತಂಡ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಾಯಕಿ ಮಿಥಾಲಿ ರಾಜ್ 31 ರನ್ ಗಳಿಸಿ ಔಟಾದರೆ, ಉಪ ನಾಯಕಿ ಹರ್ಮನ್ ಪ್ರೀತ್ ಕೌರ್ ಅರ್ಧಶತಕ ಬಾರಿಸಿ ಸ್ವಲ್ಪ ಹೋರಾಟ ನಡೆಸಿದರು. 63 ಎಸೆತ ಎದುರಿಸಿದ ಹರ್ಮನ್ 71 ರನ್ ಗಳಿಸಿದರು. ಉಳಿದಂತೆ ಯಾರಿಂದಲೂ ಉತ್ತಮ ಬೆಂಬಲ ಸಿಗಲಿಲ್ಲ. ಕೊನೆಗೆ 46.4 ಓವರ್ ಗಳಲ್ಲಿ 198 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಕಿವೀಸ್ ಪರ ಲಿ ತಹುಹು ಮತ್ತು ಅಮೆಲಾ ಕೌರ್ ತಲಾ ಮೂರು ವಿಕೆಟ್ ಕಿತ್ತರೆ, ಹೀಲಿ ಜೆನ್ಸನ್ ಎರಡು, ಜೆಸ್ ಕೆರ್ರ್ ಹಾಗೂ ಹನ್ನಾಹ್ ರೋವ್ ತಲಾ ಒಂದು ವಿಕೆಟ್ ಪಡೆದರು.
ಅಂಕಪಟ್ಟಿಯಲ್ಲಿ ಭಾರತ ತಂಡ ಸದ್ಯ ಐದನೇ ಸ್ಥಾನದಲ್ಲಿದೆ. ಮಾರ್ಚ್ 12ರಂದು ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.