Advertisement
ಗೆಲುವಿಗೆ 444 ರನ್ನುಗಳ ಕಠಿನ ಗುರಿ ಪಡೆದಿರುವ ವಿಂಡೀಸ್, 3ನೇ ದಿನದ ಅಂತ್ಯಕ್ಕೆ ಬಹಳ ಸಂಕಟ ಸ್ಥಿತಿಗೆ ತಳ್ಳಲ್ಪಟ್ಟಿದೆ. 2 ವಿಕೆಟ್ ಉರುಳಿಸಿಕೊಂಡು ಕೇವಲ 30 ರನ್ ಮಾಡಿದೆ. ಪಂದ್ಯವಿನ್ನೂ 2 ದಿನ ಕಾಣಲಿಕ್ಕಿದೆಯಾದರೂ ಉಳಿದ 8 ವಿಕೆಟ್‌ಗಳ ನೆರವಿನಿಂದ 414 ರನ್ ಪೇರಿಸುವುದು ಕೆರಿಬಿಯನ್ನರ ಈಗಿನ ಬ್ಯಾಟಿಂಗ್ ಲೈನ್‌ಅಪ್‌ನಿಂದ ಅಸಾಧ್ಯ ಎಂದೇ ಹೇಳಬೇಕಾಗುತ್ತದೆ. ನಾಯಕ ಕ್ರೆಗ್ ಬ್ರಾತ್‌ವೇಟ್ 13 ರನ್ ಹಾಗೂ ಶೈ ಹೋಪ್ ಒಂದು ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆರಂಭಕಾರ ಕೈರನ್ ಪೊವೆಲ್ ಖಾತೆ ತೆರೆಯದೆ ನಿರ್ಗಮಿಸಿದರೆ, ವನ್‌ಡೌನ್‌ನಲ್ಲಿ ಬಂದ ಶಿಮ್ರನ್ ಹೆಟ್‌ಮೈರ್ 15 ರನ್ ಮಾಡಿ ಔಟಾದರು. ಈ ವಿಕೆಟ್‌ಗಳು ಸೌಥಿ ಮತ್ತು ಬೌಲ್ಟ್ ಪಾಲಾಗಿವೆ.
ಈ ಪಂದ್ಯದ 3ನೇ ದಿನದಾಟದಲ್ಲಿ ಸಾಕಷ್ಟು ಬೆಳವಣಿಗೆಗಳು ಸಂಭವಿಸಿದವು. 8ಕ್ಕೆ 215 ರನ್ ಮಾಡಿದ್ದ ವೆಸ್ಟ್ ಇಂಡೀಸ್ ದಿನದಾಟ ಮುಂದುವರಿಸಿ ಕೇವಲ 6 ರನ್ ಸೇರಿಸಿ 221ಕ್ಕೆ ಆಲೌಟ್ ಆಯಿತು. ಈ ಎರಡೂ ವಿಕೆಟ್ ಬೌಲ್ಟ್ ಪಾಲಾದವು. 73ಕ್ಕೆ 4 ವಿಕೆಟ್ ಕಿತ್ತ ಬೌಲ್ಟ್ ಕಿವೀಸ್ ಸರದಿಯ ಯಶಸ್ವಿ ಬೌಲರ್ ಎನಿಸಿದರು. ಸೌಥಿ, ಗ್ರ್ಯಾಂಡ್‌ಹೋಮ್ ಮತ್ತು ವ್ಯಾಗ್ನರ್ ತಲಾ 2 ವಿಕೆಟ್ ಉರುಳಿಸಿದರು. 152 ರನ್ನುಗಳ ಮುನ್ನಡೆಯೊಂದಿಗೆ ದ್ವಿತೀಯ ಸರದಿ ಆರಂಭಿಸಿದ ನ್ಯೂಜಿಲ್ಯಾಂಡ್ ಬಿರುಸಿನ ಆಟಕ್ಕಿಳಿದು 8ಕ್ಕೆ 291 ರನ್ ಪೇರಿಸಿ ಡಿಕ್ಲೇರ್ ಮಾಡಿತು. ರಾಸ್ ಟಯ್ಲರ್ ಅವರ ಶತಕ ಕಿವೀಸ್ ಸರದಿಯ ಆಕರ್ಷಣೆಯಾಗಿತ್ತು. ಟಯ್ಲರ್ 198 ಎಸೆತಗಳಿಂದ 107 ರನ್ (11 ಬೌಂಡರಿ) ಬಾರಿಸಿ ಅಜೇಯರಾಗಿ ಉಳಿದರು. ಇದು ಅವರ 17ನೇ ಶತಕ. ಇದರೊಂದಿಗೆ ನ್ಯೂಜಿಲ್ಯಾಂಡ್ ಪರ ಆತಿ ಹೆಚ್ಚು ಶತಕ ಬಾರಿಸಿದ ಮಾರ್ಟಿನ್ ಕ್ರೋವ್ ಮತ್ತು ಕೇನ್ ವಿಲಿಯಮ್ಸನ್ ದಾಖಲೆಯನ್ನು ಟಯ್ಲರ್ ಸರಿದೂಗಿಸಿದರು.
Related Articles
Advertisement