Advertisement

ಟೆಸ್ಟ್‌ ಪಂದ್ಯ: ನ್ಯೂಜಿಲ್ಯಾಂಡ್‌ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ

05:37 PM Feb 25, 2023 | Team Udayavani |

ವೆಲ್ಲಿಂಗ್ಟನ್‌: ಪ್ರವಾಸಿ ಇಂಗ್ಲೆಂಡ್‌ ಎದುರಿನ ದ್ವಿತೀಯ ಹಾಗೂ ನಿರ್ಣಾಯಕ ಟೆಸ್ಟ್‌ ಪಂದ್ಯದಲ್ಲೂ ನ್ಯೂಜಿಲ್ಯಾಂಡ್‌ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿದೆ. ಹಿರಿಯ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಮತ್ತು ಎಡಗೈ ಸ್ಪಿನ್ನರ್‌ ಜಾಕ್‌ ಲೀಚ್‌ ಸೇರಿಕೊಂಡು ಆತಿಥೇಯರನ್ನು ಸಂಕಟಕ್ಕೆ ತಳ್ಳಿದ್ದಾರೆ.

Advertisement

ಇಂಗ್ಲೆಂಡ್‌ 8 ವಿಕೆಟಿಗೆ 435 ರನ್‌ ಪೇರಿಸಿ ಡಿಕ್ಲೇರ್‌ ಮಾಡಿದ್ದು, ಜವಾಬಿತ್ತ ನ್ಯೂಜಿಲ್ಯಾಂಡ್‌ 138ಕ್ಕೆ 7 ವಿಕೆಟ್‌ ಕಳೆದುಕೊಂಡು ದ್ವಿತೀಯ ದಿನದಾಟ ಮುಗಿಸಿದೆ. ಇನ್ನೂ 297 ರನ್‌ ಹಿನ್ನಡೆಯಲ್ಲಿದೆ. ಮೊದಲ ಟೆಸ್ಟ್‌ ಪಂದ್ಯವನ್ನು 267 ರನ್ನುಗಳ ಭಾರೀ ಅಂತರದಿಂದ ಕಳೆದುಕೊಂಡಿದ್ದ ಕಿವೀಸ್‌, ದ್ವಿತೀಯ ಪಂದ್ಯದಲ್ಲೂ ಅಪಾಯಕ್ಕೆ ಸಿಲುಕಿದೆ.
ಜೇಮ್ಸ್‌ ಆ್ಯಂಡರ್ಸನ್‌ ಮತ್ತು ಜಾಕ್‌ ಲೀಚ್‌ ತಲಾ 3 ವಿಕೆಟ್‌ ಉರುಳಿಸಿದರು. ಒಂದು ವಿಕೆಟ್‌ ಸ್ಟುವರ್ಟ್‌ ಬ್ರಾಡ್‌ ಕೆಡವಿದರು.

“ಆ್ಯಂಡಿ’ ಅಗ್ರ ಕ್ರಮಾಂಕದ ಮೇಲೆ ಘಾತಕವಾಗಿ ಎರಗಿದರು. ಮೊದಲ ಓವರ್‌ನಲ್ಲೇ ಡೇವನ್‌ ಕಾನ್ವೇ ಅವರನ್ನು ಶೂನ್ಯಕ್ಕೆ ಮರಳಿಸಿದರು. ಬಳಿಕ ಮಾಜಿ ನಾಯಕ ಕೇನ್‌ ವಿಲಿಯಮ್ಸನ್‌ (4) ಮತ್ತು ವಿಲ್‌ ಯಂಗ್‌ (2) ಅವರಿಗೂ ಪೆವಿಲಿಯನ್‌ ಹಾದಿ ತೋರಿಸಿದರು. 21 ರನ್ನಿಗೆ ನ್ಯೂಜಿಲ್ಯಾಂಡ್‌ನ‌ 3 ವಿಕೆಟ್‌ ಬಿತ್ತು.

ಟಾಮ್‌ ಲ್ಯಾಥಂ (35)-ಹೆನ್ರಿ ನಿಕೋಲ್ಸ್‌ (30) ಸೇರಿಕೊಂಡು ಪರಿಸ್ಥಿತಿಯನ್ನು ಸುಧಾರಿಸುತ್ತಿರುವಾಗಲೇ ಜಾಕ್‌ ಲೀಚ್‌ ಆಕ್ರಮಣ ಮೊದಲ್ಗೊಂಡಿತು. ಬೇರೂರಿದ ಜೋಡಿ ಹಾಗೂ ಡ್ಯಾರಿಲ್‌ ಮಿಚೆಲ್‌ಗೆ (13) ಪೆವಿಲಿಯನ್‌ ಹಾದಿ ತೋರಿಸಿದರು. 103ಕ್ಕೆ ಆತಿಥೇಯರ 7 ವಿಕೆಟ್‌ ಬಿತ್ತು. ಟಾಮ್‌ ಬ್ಲಿಂಡೆಲ್‌ (25) ಮತ್ತು ಟಿಮ್‌ ಸೌಥಿ (23) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ದ್ವಿಶತಕ ವಂಚಿತ ಬ್ರೂಕ್‌
ಇಂಗ್ಲೆಂಡ್‌ 3ಕ್ಕೆ 315 ರನ್‌ ಮಾಡಿ ಮೊದಲ ದಿನದಾಟ ಮುಗಿಸಿತ್ತು. ಜೋ ರೂಟ್‌ 101 ಮತ್ತು ಹ್ಯಾರಿ ಬ್ರೂಕ್‌ 184 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಆದರೆ ಬ್ರೂಕ್‌ ಅವರ ಚೊಚ್ಚಲ ದ್ವಿಶತಕದ ಆಸೆ ಈಡೇರಲಿಲ್ಲ. ಕೇವಲ 2 ರನ್‌ ಸೇರಿಸಿ ನಿರ್ಗಮಿಸಿದರು. ಆದರೆ ರೂಟ್‌ ನೂರೈವತ್ತರ ಗಡಿ ದಾಟುವಲ್ಲಿ ಯಶಸ್ವಿಯಾದರು. ಕೂಡಲೇ ಸ್ಟೋಕ್ಸ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದರು.

Advertisement

ರೂಟ್‌ 224 ಎಸೆತಗಳಿಂದ ಅಜೇಯ 153 ರನ್‌ ಹೊಡೆದರು (10 ಬೌಂಡರಿ, 3 ಸಿಕ್ಸರ್‌). ಬ್ರೂಕ್‌ ಅವರ 186 ರನ್‌ 176 ಎಸೆತಗಳಿಂದ ಬಂತು. ಸಿಡಿಸಿದ್ದು 24 ಬೌಂಡರಿ ಮತ್ತು 5 ಸಿಕ್ಸರ್‌.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-8 ವಿಕೆಟಿಗೆ 435 ಡಿಕ್ಲೇರ್‌ (ಬ್ರೂಕ್‌ 186, ರೂಟ್‌ ಔಟಾಗದೆ 153, ಸ್ಟೋಕ್ಸ್‌ 27, ಹೆನ್ರಿ 100ಕ್ಕೆ 4, ಬ್ರೇಸ್‌ವೆಲ್‌ 54ಕ್ಕೆ 2). ನ್ಯೂಜಿಲ್ಯಾಂಡ್‌-7 ವಿಕೆಟಿಗೆ 138 (ಲ್ಯಾಥಂ 35, ನಿಕೋಲ್ಸ್‌ 30, ಬ್ಲಿಂಡೆಲ್‌ ಬ್ಯಾಟಿಂಗ್‌ 25, ಸೌಥಿ ಬ್ಯಾಟಿಂಗ್‌ 23, ಆ್ಯಂಡರ್ಸನ್‌ 37ಕ್ಕೆ 3, ಲೀಚ್‌ 45ಕ್ಕೆ 3).

 

Advertisement

Udayavani is now on Telegram. Click here to join our channel and stay updated with the latest news.

Next