ಢಾಕಾ: ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ ಬರೋಬ್ಬರಿ ಒಂದು ದಶಕದ ಬಳಿಕ ಬಾಂಗ್ಲಾದೇಶಕ್ಕೆ ಪ್ರವಾಸಗೈಯಲಿದೆ. ಈ ಪ್ರವಾಸ 2 ಹಂತಗಳಲ್ಲಿ ನಡೆಯಲಿದೆ.
ಮುಂದಿನ ತಿಂಗಳು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಕಿವೀಸ್ ಪಾಲಿಗೆ ಇದು ಏಕದಿನ ವಿಶ್ವಕಪ್‌ಗೆ ಅಭ್ಯಾಸವಾಗಲಿದೆ. ಇದು ವಿಶ್ವಕಪ್‌ಗೂ ಮುನ್ನ ಕಿವೀಸ್ ಆಡಲಿರುವ ಕೊನೆಯ ಏಕದಿನ ಸರಣಿಯೂ ಹೌದು.
ಭಾರತದಲ್ಲಿ ನಡೆಯುವ ವಿಶ್ವಕಪ್ ಮುಗಿದ ಬಳಿಕ ನವೆಂಬರ್‌ನಲ್ಲಿ ಮತ್ತೆ ಬಾಂಗ್ಲಾಕ್ಕೆ ತೆರಳಲಿದ್ದು, ಆಗ ಟೆಸ್ಟ್ ಸರಣಿಯನ್ನು ಆಡಲಿದೆ.
ಏಕದಿನ ಪಂದ್ಯಗಳೆಲ್ಲ ಮಿರ್ಪುರ್‌ನ “ಶೇರ್ ಎ ಬಾಂಗ್ಲಾ ಸ್ಟೇಡಿಯಂ’ನಲ್ಲಿ ನಡೆಯಲಿವೆ (ಸೆ. 21, 23 ಮತ್ತು 26). ಆದರೆ ಟೆಸ್ಟ್ ತಾಣಗಳನ್ನು ಇನ್ನೂ ಹೆಸರಿಸಿಲ್ಲ (ನ. 28-ಡಿ. 2, ಡಿ. 6-10).
ನ್ಯೂಜಿಲ್ಯಾಂಡ್ ಕೊನೆಯ ಸಲ ಬಾಂಗ್ಲಾದೇಶಕ್ಕೆ ತೆರಳಿ ಪೂರ್ಣ ಪ್ರಮಾಣದ ಸರಣಿಯನ್ನಾಡಿದ್ದು 2013ರಲ್ಲಿ. ಅಂದಿನ ಎರಡೂ ಟೆಸ್ಟ್ ಪಂದ್ಯಗಳು ಡ್ರಾಗೊಂಡಿದ್ದವು. ಏಕದಿನ ಸರಣಿಯನ್ನು ಬಾಂಗ್ಲಾ 3-0 ಅಂತರದಿಂದ ಜಯಿಸಿತ್ತು. ಏಕೈಕ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ನ್ಯೂಜಿಲ್ಯಾಂಡ್ ಈ ಪ್ರವಾಸವನ್ನು ಮುಗಿಸಿತ್ತು.