Advertisement

ಹರಿಣಗಳ ನಾಗಾಲೋಟಕ್ಕೆ ಕಿವೀಸ್‌ ಬ್ರೇಕ್‌

10:23 AM Feb 23, 2017 | |

ಕ್ರೈಸ್ಟ್‌ಚರ್ಚ್‌: ರಾಸ್‌ ಟಯ್ಲರ್‌ ಅವರ ಅಮೋಘ ಶತಕದಿಂದಾಗಿ ನ್ಯೂಜಿಲ್ಯಾಂಡ್‌ ತಂಡವು ದ್ವಿತೀಯ ಏಕದಿನ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು 6 ರನ್ನುಗಳಿಂದ ರೋಚಕವಾಗಿ ಸೋಲಿಸಿದೆ. 

Advertisement

ಈ ಗೆಲುವಿನಿಂದ ನ್ಯೂಜಿಲ್ಯಾಂಡ್‌ ಮತ್ತು ದಕ್ಷಿಣ ಆಫ್ರಿಕಾ ನಡುವಣ ಐದು ಪಂದ್ಯಗಳ ಸರಣಿ 1-1 ಸಮಬಲದಲ್ಲಿ ನಿಂತಿದೆ. ಸರಣಿಯ ಮೂರನೇ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ ಶನಿವಾರ ನಡೆಯಲಿದೆ. 

ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ ತಂಡವು ರಾಸ್‌ ಟಯ್ಲರ್‌ ಅವರ ಶತಕ ಮತ್ತು ಅವರು ಜೇಮ್ಸ್‌ ನೀಶಮ್‌ ಜತೆಗೂಡಿ ಮುರಿಯದ ಐದನೇ ವಿಕೆಟಿಗೆ ಪೇರಿಸಿದ 123 ರನ್ನುಗಳ ಜತೆಯಾಟದಿಂದಾಗಿ 4 ವಿಕೆಟಿಗೆ 289 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಗೆಲ್ಲಲು ಕಠಿನ ಗುರಿಯಿದ್ದರೂ ಕೊನೆ ಹಂತದವರೆಗೂ ಹೋರಾಡಿದ ದಕ್ಷಿಣ ಆಫ್ರಿಕಾ ಅಂತಿಮವಾಗಿ 9 ವಿಕೆಟಿಗೆ 283 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಡ್ವೇಯ್ನ ಪ್ರಿಟೋರಿಯಸ್‌ 26 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರೂ ತಂಡ ಗೆಲುವಿನಿಂದ ದೂರವೇ ಉಳಿಯಿತು. ಈ ಸೋಲಿನಿಂದಾಗಿ ದಕ್ಷಿಣ ಆಫ್ರಿಕಾದ ಸತತ 12 ಏಕದಿನ ಪಂದ್ಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಬಿತ್ತು.
 
ಟಯ್ಲರ್‌ ಶತಕ: ರಾಸ್‌ ಟಯ್ಲರ್‌ ಅವರ ಆಕರ್ಷಕ ಶತಕ ಈ ಪಂದ್ಯದ ಆಕರ್ಷಣೆಯಾಗಿತ್ತು. ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಟಯ್ಲರ್‌ ಏಕದಿನ ಕ್ರಿಕೆಟ್‌ನಲ್ಲಿ 17ನೇ ಶತಕ ಸಿಡಿಸಿ ನಥನ್‌ ಆ್ಯಸ್ಟಲ್‌ ಅವರ ಹೆಸರಲ್ಲಿದ್ದ ಗರಿಷ್ಠ ಶತಕ ದಾಖಲೆಯನ್ನು ಅಳಿಸಿ ಹಾಕಿದರು. ಏಕದಿನ ಕ್ರಿಕೆಟ್‌ನಲ್ಲಿ ಆ್ಯಸ್ಟಲ್‌ 16 ಶತಕ ಸಿಡಿಸಿದ್ದರು.

ಕೇನ್‌ ವಿಲಿಯಮ್ಸನ್‌ ಮತ್ತು ಜೇಮ್ಸ್‌ ನೀಶಮ್‌ ಜತೆಗೆ ಶತಕದ ಜತೆಯಾಟದಲ್ಲಿ ಪಾಲ್ಗೊಂಡಿದ್ದ ಟಯ್ಲರ್‌ 110 ಎಸೆತ ಎದುರಿಸಿ 8 ಬೌಂಡರಿ ನೆರವಿನಿಂದ 102 ರನ್‌ ಗಳಿಸಿ ಅಜೇಯರಾಗಿ ಉಳಿದರು. ಈ ವೇಳೆ ಅವರು ಏಕದಿನ ಕ್ರಿಕೆಟ್‌ನಲ್ಲಿ ಆರು ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಈ ಸಾಧನೆಗೈದ ನ್ಯೂಜಿಲ್ಯಾಂಡಿನ ನಾಲ್ಕನೇ ಆಟಗಾರ ಎಂದೆನಿಸಿಕೊಂಡರು.

ವಿಲಿಯಮ್ಸನ್‌ ಜತೆ 104 ರನ್‌ ಪೇರಿಸಿದ್ದ ಟಯ್ಲರ್‌ ಆಬಳಿಕ ನೀಶಮ್‌ ಜತೆ ಮುರಿಯದ ಐದನೇ ವಿಕೆಟಿಗೆ 123 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ವಿಲಿಯಮ್ಸನ್‌ 69  ರನ್‌ ಗಳಿಸಿದ್ದರೆ ನೀಶಮ್‌ 71ರನ್‌ ಗಳಿಸಿ ಅಜೇಯರಾಗಿ ಉಳಿದರು. 57 ಎಸೆತ ಎದುರಿಸಿದ ಅವರು 6 ಬೌಂಡರಿ ಬಾರಿಸಿದ್ದರು.

Advertisement

ಸಂಕ್ಷಿಪ್ತ ಸ್ಕೋರು: ನ್ಯೂಜಿಲ್ಯಾಂಡ್‌ 4 ವಿಕೆಟಿಗೆ 289 (ಡೀನ್‌ ಬೌನ್ಲಿ 34, ಕೇನ್‌ ವಿಲಿಯಮ್ಸನ್‌ 69, ರಾಸ್‌ ಟಯ್ಲರ್‌ 102 ಔಟಾಗದೆ, ಜೇಮ್ಸ್‌ ನೀಶಮ್‌ 71 ಔಟಾಗದೆ, ಪ್ರಿಟೋರಿಯಸ್‌ 40ಕ್ಕೆ 2); ದಕ್ಷಿಣ ಆಫ್ರಿಕಾ 9 ವಿಕೆಟಿಗೆ 283 (ಕ್ವಿಂಟನ್‌ ಡಿ ಕಾಕ್‌ 57, ಡ್ಯುಮಿನಿ 34, ಡಿ’ವಿಲಿಯರ್ 45, ಡೇವಿಡ್‌ ಮಿಲ್ಲರ್‌ 28, ಪ್ರಿಟೋರಿಯಸ್‌ 50, ಪೆಹ್ಲುಕ್ವಾಯೊ 29 ಔಟಾಗದೆ, ಟ್ರೆಂಟ್‌ ಬೌಲ್ಟ್ 63ಕ್ಕೆ 3, ಮಿಚೆಲ್‌ ಸ್ಯಾಟ್ನರ್‌ 46ಕ್ಕೆ 2). ಪಂದ್ಯಶ್ರೇಷ್ಠ: ರಾಸ್‌ ಟಯ್ಲರ್‌
 

Advertisement

Udayavani is now on Telegram. Click here to join our channel and stay updated with the latest news.

Next