ನವದೆಹಲಿ: ಮುಂಬರುವ ಟಿ-20 ವಿಶ್ವಕಪ್ ಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಿದೆ. ಹಿರಿಯ ಹಾಗೂ ಕಿರಿಯ ಅನುಭವಿ ಆಟಗಾರರನ್ನು ಒಳಗೊಂಡಿರುವ 15 ಮಂದಿಯ ತಂಡವನ್ನು ಕಿವೀಸ್ ಕ್ರಿಕೆಟ್ ಟೀಮ್ ಪ್ರಕಟಿಸಿದೆ.
ಅನುಭವಿ ಕಪ್ತಾನ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿಗಳ ಸಾಲಿನಲ್ಲಿ ಟ್ರೆಂಟ್ ಬೌಲ್ಟ್, ಹಾಗೂ ಟಿಮ್ ಸೌಥಿ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಕಳೆದ ಸಮಯದಿಂದ ಹೆಬ್ಬೆರಳು ಗಾಯದ ಕಾರಣದಿಂದ ವಿಶ್ರಾಂತಿಯಲ್ಲಿರುವ ಡೆವೊನ್ ಕಾನ್ವೆ ಅವರ ಹೆಸರನ್ನು ತಂಡದಲ್ಲಿ ಸೇರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಟಿ- 20 ಮಾದರಿಯಲ್ಲಿ ಗಮನ ಸೆಳೆದಿರುವ ಯುವ ಆಟಗಾರರಾದ ಫಿನ್ ಅಲೆನ್, ರಚಿನ್ ರವೀಂದ್ರ ಹಾಗೂ ಡ್ಯಾರಿಲ್ ಮಿಚೆಲ್ ನ್ಯೂಜಿಲೆಂಡ್ ಟಿ-20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಪಾಕಿಸ್ತಾನ ವಿರುದ್ಧದ ಟಿ-20 ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಮೈಕೆಲ್ ಬ್ರೇಸ್‌ವೆಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ನ್ಯೂಜಿಲೆಂಡ್‌ನ ತಂಡದ ಪ್ರಮುಖ ವೇಗಿ ಕೈಲ್ ಜೇಮಿಸನ್ ,ಆಲ್‌ರೌಂಡರ್ ಆಡಮ್ ಮಿಲ್ನೆ ಗಾಯದ ಕಾರಣದಿಂದ ಆಯ್ಕೆ ಆಗಿಲ್ಲ. ವಿಲ್ ಒ’ರೂರ್ಕ್, ಟಾಮ್ ಲ್ಯಾಥಮ್, ಟಿಮ್ ಸೀಫರ್ಟ್ ಯಂಗ್ ವಿಲ್, ಕಾಲಿನ್ ಮುನ್ರೊ, ತಂಡಕ್ಕೆ ಆಯ್ಕೆ ಆಗಿಲ್ಲ.
T20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತನ್ನ ಮೊದಲ ಪಂದ್ಯವನ್ನು ಜೂನ್ 7 ರಂದು ಗಯಾನಾದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಆಡಲಿದೆ. ಕಿವೀಸ್ ʼಸಿʼ ಗ್ರೂಪ್ ನಲ್ಲಿದ್ದು, ಇದರಲ್ಲಿ ಆತಿಥೇಯ ವೆಸ್ಟ್ ಇಂಡೀಸ್, ಉಗಾಂಡಾ ಮತ್ತು ಪಪುವಾ ನ್ಯೂಗಿನಿ ತಂಡಗಳಿವೆ.
ನ್ಯೂಜಿಲೆಂಡ್ ತಂಡ:
ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ
.
ಮೀಸಲು ಆಟಗಾರ: ಬೆನ್ ಸಿಯರ್ಸ್