ವೆಲ್ಲಿಂಗ್ಟನ್: ಮುಂಬರುವ ಏಕದಿನ ವಿಶ್ವಕಪ್ ಕೂಟಕ್ಕೆ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ತನ್ನ 15 ಸದಸ್ಯರ ತಂಡ ಪ್ರಕಟಿಸಿದೆ. ಕೇನ್ ವಿಲಿಯಮ್ಸನ್ ಅವರು ನಿರೀಕ್ಷೆಯಂತೆ ನಾಯಕನಾಗಿ ತಂಡಕ್ಕೆ ಮರಳಿದ್ದು, ವೇಗಿಗಳಾದ ಕೈಲ್ ಜೇಮಿಸನ್ ಮತ್ತು ಆಡ್ಯಂ ಮಿಲ್ನೆ ಹೊರಬಿದ್ದಿದ್ದಾರೆ.
ಕೇಂದ್ರ ಗುತ್ತಿಗೆಯಲ್ಲಿರವ ವೇಗಿ ಟ್ರೆಂಟ್ ಬೌಲ್ಟ್ ಮತ್ತು ಆಲ್ ರೌಂಡರ್ ಜಿಮ್ಮಿ ನೀಶಮ್ ಗೆ ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಲಾಗಿದೆ. ಸ್ಪಿನ್ ಆಲ್ ರೌಂಡರ್ ಮಿಚೆಲ್ ಬ್ರೇಸ್ ವೆಲ್ ಗಾಯಗೊಂಡಿರುವ ಕಾರಣ ನೀಶಮ್ ಗೆ ಅವಕಾಶದ ಬಾಗಿಲು ತೆರೆದಿದೆ. ಅಲ್ಲದೆ ವಿಲ್ ಯಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ತಂಡವನ್ನು ಕೇನ್ ವಿಲಿಯಮ್ಸನ್ ಮುನ್ನಡೆಸುತ್ತಿದ್ದು, ಟಾಮ್ ಲ್ಯಾಥಂ ಉಪ ನಾಯಕರಾಗಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲ್ಯೂಕಿ ಫರ್ಗ್ಯಸನ್, ಮ್ಯಾಟ್ ಹೆನ್ರಿ ಸ್ಥಾನ ಪಡೆದಿದ್ದಾರೆ. ಸ್ಪಿನ್ ವಿಭಾಗದಲ್ಲಿ ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್ ಮತ್ತು ರಚಿನ್ ರವೀಂದ್ರ ಇದ್ದಾರೆ.
ಇದನ್ನೂ ಓದಿ:Delhi: ಇಂದು ಭಾರತ- ಸೌದಿ ಅರೇಬಿಯಾ ದ್ವಿಪಕ್ಷೀಯ ಮಾತುಕತೆ: ಒಪ್ಪಂದಗಳಿಗೆ ಸಹಿ ಸಾಧ್ಯತೆ
ವಿಲಿಯಮ್ಸನ್ ಮತ್ತು ಸೌಥಿಗೆ ಇದು ನಾಲ್ಕನೇ ವಿಶ್ವಕಪ್. ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಡೇರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರು ಮೊದಲ ಬಾರಿಗೆ ಏಕದಿನ ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಮತ್ತೊಂದೆಡೆ ರಚಿನ್ ರವೀಂದ್ರ ಮತ್ತು ವಿಲ್ ಯಂಗ್ ಅವರು ತಮ್ಮ ಮೊದಲ ಹಿರಿಯ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಎಲ್ಲಾ ತಂಡಗಳು ತಮ್ಮ 15-ಆಟಗಾರರ ತಂಡವನ್ನು ಅಂತಿಮಗೊಳಿಸಲು ಸೆಪ್ಟೆಂಬರ್ 28 ರವರೆಗೆ ಸಮಯಾವಕಾಶವಿದೆ. ಇದರ ನಂತರ ಯಾವುದೇ ಬದಲಿ ಆಟಗಾರನ ಸೇರ್ಪಡೆಗೆ ಐಸಿಸಿ ಯಿಂದ ಅನುಮೋದನೆಯ ಅಗತ್ಯವಿದೆ.
ತಂಡ: ಕೇನ್ ವಿಲಿಯಮ್ಸನ್ (ನಾ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್ (ವಿ.ಕೀ, ಉ.ನಾ), ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್