Advertisement
ಮಂಗಳವಾರ ನೆಲ್ಸನ್‌ನ “ಸ್ಯಾಕ್ಸ್‌ಟನ್ ಓವಲ್’ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ 9 ವಿಕೆಟಿಗೆ 246 ರನ್ ಗಳಿಸಿ ಸವಾಲೊಡ್ಡಿತು. ನ್ಯೂಜಿಲ್ಯಾಂಡಿನ 14ನೇ ಓವರ್ ಬಳಿಕ ಮಳೆ ಸುರಿದುದರಿಂದ 2 ಗಂಟೆಗಳ ಅವಧಿಯ ಆಟ ನಷ್ಟವಾಯಿತು. ಇದರಿಂದ ಕಿವೀಸ್‌ಗೆ 25 ಓವರ್‌ಗಳಲ್ಲಿ 151 ರನ್ನುಗಳ ಸವಾಲನ್ನು ನಿಗದಿಗೊಳಿಸಲಾಯಿತು. ಮಾರ್ಟಿನ್ ಗಪ್ಟಿಲ್ ಅವರ ಅಮೋಘ ಆಟದಿಂದ 23.5 ಓವರ್‌ಗಳಲ್ಲಿ 2 ವಿಕೆಟಿಗೆ 151 ರನ್ ಗಳಿಸಿ ಗುರಿ ಮುಟ್ಟಿತು. ವೆಲ್ಲಿಂಗ್ಟನ್‌ನ ಮೊದಲ ಪಂದ್ಯವನ್ನು ಕಿವೀಸ್ ಡಿ-ಎಲ್ ನಿಯಮದಂತೆ 61 ರನ್ನುಗಳಿಂದ ಗೆದ್ದಿತ್ತು.
ಆಘಾತಕಾರಿಯಾಗಿ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ಥಾನಕ್ಕೆ ಮೊಹಮ್ಮದ್ ಹಫೀಜ್ (60), ಶಾದಾಬ್ ಖಾನ್ (52) ಮತ್ತು ಹಸನ್ ಅಲಿ (51) ಅವರ ಅರ್ಧ ಶತಕಗಳು ಆಸರೆಯಾದವು. ಇವರಲ್ಲಿ ಹಸನ್ ಅಲಿ ಆಟ ಅತ್ಯಂತ ಆಕ್ರಮಣಕಾರಿಯಾಗಿತ್ತು. ಅವರ 51 ರನ್ ಕೇವಲ 31 ಎಸೆತಗಳಿಂದ ಬಂತು. ಅಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ ಕಿವೀಸ್ ಬೌಲರ್‌ಗಳ ಮೇಲೆರಗಿದರು. ಹಫೀಜ್ 71 ಎಸೆತಗಳಿಂದ 60 ರನ್ ಬಾರಿಸಿದರು (8 ಬೌಂಡರಿ), ಶಾದಾಬ್ ಅವರ 52 ರನ್ 68 ಎಸೆತಗಳಿಂದ ಬಂತು (3 ಬೌಂಡರಿ, 1 ಸಿಕ್ಸರ್). ಶೋಯಿಬ್ ಮಲಿಕ್ 27 ರನ್ ಹೊಡೆದರು.
Related Articles
Advertisement
ಗಪ್ಟಿಲ್ ಬಿರುಸಿನ ಬ್ಯಾಟಿಂಗ್ನ್ಯೂಜಿಲ್ಯಾಂಡ್ ಸರದಿಯನ್ನು ಆಧರಿಸಿದವರು ಬಿರುಸಿನ ಆರಂಭಕಾರ ಮಾರ್ಟಿನ್ ಗಪ್ಟಿಲ್. ಅಪಾಯಕಾರಿ ಕಾಲಿನ್ ಮುನ್ರೊ ಅವರನ್ನು ಖಾತೆ ತೆರೆಯುವ ಮೊದಲೇ ಪೆವಿಲಿಯನ್ನಿಗೆ ಅಟ್ಟಿದ ಮೊಹಮ್ಮದ್ ಆಮಿರ್ ಕಿವೀಸ್ ಮೇಲೆರಗುವ ಮುನ್ಸೂಚನೆಯೊಂದನ್ನು ರವಾನಿಸಿದ್ದರು. ಆದರೆ ಗಪ್ಟಿಲ್ ಗಟ್ಟಿಯಾಗಿ ನಿಂತು ತಂಡವನ್ನು ದಡ ಮುಟ್ಟಿಸಿದರು. ಗಪ್ಟಿಲ್ ಗಳಿಕೆ ಅಜೇಯ 86 ರನ್. 71 ಎಸೆತಗಳ ಈ ಪಂದ್ಯಶ್ರೇಷ್ಠ ಆಟದ ವೇಳೆ 5 ಸಿಕ್ಸರ್, 5 ಬೌಂಡರಿ ಸಿಡಿಯಲ್ಪಟ್ಟಿತು. 14ನೇ ಓವರ್ ಮುಕ್ತಾಯಕ್ಕೆ ಮಳೆಯಿಂದ ಪಂದ್ಯ ಸ್ಥಗಿತಗೊಂಡಾಗ ನ್ಯೂಜಿಲ್ಯಾಂಡ್ 2 ವಿಕೆಟಿಗೆ 64 ರನ್ ಮಾಡಿತ್ತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ನಾಯಕ ಕೇನ್ ವಿಲಿಯಮ್ಸನ್ ಕೂಡ ಆಗ ಪೆವಿಲಿಯನ್ ಸೇರಿದ್ದರು. ಇಲ್ಲಿ ಕೇನ್ ಗಳಿಕೆ ಕೇವಲ 19 ರನ್. ಗಪ್ಟಿಲ್ ಜತೆ 45 ರನ್ ಬಾರಿಸಿದ ರಾಸ್ ಟಯ್ಲರ್ ಔಟಾಗದೆ ಉಳಿದರು. ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-50 ಓವರ್‌ಗಳಲ್ಲಿ 9 ವಿಕೆಟಿಗೆ 246 (ಹಫೀಜ್ 60, ಶಾದಾಬ್ 52, ಹಸನ್ ಅಲಿ 51, ಫರ್ಗ್ಯುಸನ್ 39ಕ್ಕೆ 3, ಆ್ಯಸ್ಟಲ್ 50ಕ್ಕೆ 2, ಸೌಥಿ 57ಕ್ಕೆ 2). ನ್ಯೂಜಿಲ್ಯಾಂಡ್-23.5 ಓವರ್‌ಗಳಲ್ಲಿ 2 ವಿಕೆಟಿಗೆ 151 (ಗಪ್ಟಿಲ್ ಔಟಾಗದೆ 86, ಟಯ್ಲರ್ ಔಟಾಗದೆ 45, ಆಮಿರ್ 18ಕ್ಕೆ 1, ಫಾಹಿಮ್ 30ಕ್ಕೆ 1).
ಪಂದ್ಯಶ್ರೇಷ್ಠ: ಮಾರ್ಟಿನ್ ಗಪ್ಟಿಲ್.