ಮೌಂಟ್ ಮೌಂಗನುಯಿ: ಪ್ರವಾಸಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ 101 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಸಾಧಿಸಿದೆ. ಜತೆಗೆ ಇದೇ ಮೊದಲ ಬಾರಿಗೆ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಬೇ ಓವಲ್’ ಮೈದಾನದಲ್ಲಿ ಬುಧವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಪಾಕಿಸ್ತಾನ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 271 ರನ್ನಿಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ನೀಡಿದ 373 ರನ್‌ಗಳ ಗೆಲುವಿನ ಸವಾಲಿಗೆ 4ನೇ ದಿನ 3 ವಿಕೆಟಿಗೆ 71 ರನ್ ಮಾಡಿತ್ತು.
ಫವಾದ್ ಆಲಂ (102) ಅವರ ಜವಾಬ್ದಾರಿಯುತ ಶತಕ ಮತ್ತು ಮೊಹಮ್ಮದ್ ರಿಜ್ವಾನ್ (60) ಅವರ ಅರ್ಧ ಶತಕದ ಹೋರಾಟದ ಹೊರತಾಗಿಯೂ ಪಾಕಿಗೆ ಸೋಲು ತಪ್ಪಿಸಿಕೊಳ್ಳಲಾಗಲಿಲ್ಲ. ಕಿವೀಸ್ ಪರ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಕೈಲ್ ಜಾಮೀಸನ್, ನೀಲ್ ವ್ಯಾಗ್ನರ್ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ ಎರಡು ವಿಕೆಟ್ ಕಬಳಿಸಿದರು.
ಕಿವೀಸ್‌ನ ಮೊದಲ ಇನ್ನಿಂಗ್ಸ್‌ನ 431ಕ್ಕೆ ಉತ್ತರವಾಗಿ ಪಾಕಿಸ್ತಾನ 239ಕ್ಕೆ ಆಲೌಟ್ ಆಗಿತ್ತು. ಇದರಿಂದ 192 ರನ್ ಮುನ್ನಡೆ ಸಾಧಿಸಿದ ನ್ಯೂಜಿಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟಿಗೆ 180 ರನ್ ಪೇರಿಸಿ ಡಿಕ್ಲೇರ್ ಮಾಡಿತು. ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜ. 3 ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್-431 ಮತ್ತು 5 ವಿಕೆಟಿಗೆ 180 ಡಿಕ್ಲೇರ್. ಪಾಕಿಸ್ತಾನ: 239 ಮತ್ತು 217 (ಫವಾದ್ ಆಲಂ 102, ಮೊಹಮ್ಮದ್ ರಿಜ್ವಾನ್ 60, ಸೌಥಿ 33ಕ್ಕೆ 2, ಜಾಮೀಸನ್ 35ಕ್ಕೆ 2, ಸ್ಯಾಂಟ್ನರ್ 52ಕ್ಕೆ 2).
ಪಂದ್ಯಶ್ರೇಷ್ಠ: ಕೇನ್ ವಿಲಿಯಮ್ಸನ್.