ಸಿಡ್ನಿ: ಐಸಿಸಿ ಟಿ20 ವಿಶ್ವಕಪ್ ಸೂಪರ್ 12 ಹಂತದ ಆರಂಭಿಕ ಪಂದ್ಯದಲ್ಲೇ ಹಾಲಿ ಚಾಂಪಿಯನ್, ಆತಿಥೇಯ ಆಸ್ಟ್ರೇಲಿಯಾ ತಂಡ ಭಾರೀ ಮುಖಭಂಗ ಅನುಭವಿಸಿದೆ. ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ 89 ರನ್ ಅಂತರದ ಸೋಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 20 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 200 ರನ್ ಗಳಿಸಿದರೆ, ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಸೀಸ್ 17.1 ಓವರ್ ಗಳಲ್ಲಿ 111 ರನ್ ಗೆ ಆಲೌಟಾಯಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಕಿವೀಸ್ ಗೆ ಫಿನ್ ಅಲೆನ್ ಮತ್ತು ಡಿವೋನ್ ಕಾನ್ವೆ ಅದ್ಭುತ ಆರಂಭ ಒದಗಿಸಿದರು. ಅಲೆನ್ ಕೇವಲ 16 ಎಸೆತಗಳಲ್ಲಿ 42 ರನ್ ಮಾಡಿದರೆ, ಕಾನ್ವೇ ಅಜೇಯ 92 ರನ್ ಬಾರಿಸಿದರು. ಉಳಿದಂತೆ ನಾಯಕ ವಿಲಿಯಮ್ಸನ್ 23 ರನ್, ನೀಶಮ್ 26 ರನ್ ಗಳಿಸಿದರು. ಆಸೀಸ್ ಪರ ಹೇಜಲ್ ವುಡ್ ಎರಡು ವಿಕೆಟ್ ಕಿತ್ತರು.
ಇ
ದನ್ನೂ ಓದಿ:ವಿಡಿಯೋ: ಪೊಲೀಸರಿಂದ ಬಚಾವಾಗಲು ಹೋಗಿ ಕದ್ದ ಹಣವನ್ನೇ ರಸ್ತೆಗೆಸೆದ ದರೋಡೆಕೋರರು.!
201 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಆಸೀಸ್ ಬ್ಯಾಟರ್ ಗಳು ವಿಫಲರಾದರು. ಸತತ ವಿಕೆಟ್ ಕಳೆದುಕೊಂಡ ಆಸೀಸ್ ಕೇವಲ 111 ರನ್ ಮಾತ್ರ ಗಳಿಸಿತು. ಗ್ಲೆನ್ ಮ್ಯಾಕ್ಸ್ ವೆಲ್ 28 ರನ್ ಗಳಿಸಿದರೆ, ಪ್ಯಾಟ್ ಕಮಿನ್ಸ್ 21 ರನ್ ಮಾಡಿದರು.
ಬಿಗು ದಾಳಿ ಸಂಘಟಿಸಿದ ನ್ಯೂಜಿಲ್ಯಾಂಡ್ ಪರ ಟಿಮ್ ಸೌಥಿ ಮತ್ತು ಸ್ಯಾಂಟ್ನರ್ ತಲಾ ಮೂರು ವಿಕೆಟ್ ಕಿತ್ತರೆ, ಬೌಲ್ಟ್ ಎರಡು ವಿಕೆಟ್ ಪಡೆದರು. ಡಿವೋನ್ ಕಾನ್ವೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.