Advertisement

ಟಿ-ಟ್ವೆಂಟಿಯಲ್ಲೂ ವಿಂಡೀಸ್‌ ಪಲ್ಟಿ

06:15 AM Dec 30, 2017 | |

ನೆಲ್ಸನ್‌ (ನ್ಯೂಜಿಲ್ಯಾಂಡ್‌): ನ್ಯೂಜಿಲ್ಯಾಂಡ್‌ ವಿರುದ್ಧ ಟೆಸ್ಟ್‌ ಹಾಗೂ ಏಕದಿನ ಸರಣಿಯಲ್ಲಿ ವೈಟ್‌ವಾಶ್‌ ಅನುಭವಿಸಿದ ಪ್ರವಾಸಿ ವೆಸ್ಟ್‌ ಇಂಡೀಸ್‌, ಟಿ-20ಯಲ್ಲೂ ಸೋಲಿನ ಆರಂಭ ಕಂಡುಕೊಂಡು ದಿಕ್ಕೆಟ್ಟಿದೆ. ಮೊದಲ ಪಂದ್ಯವನ್ನು ಕಿವೀಸ್‌ 47 ರನ್ನುಗಳ ಅಂತರದಿಂದ ಗೆದ್ದಿದೆ.

Advertisement

ನೆಲ್ಸನ್‌ನ “ಸ್ಯಾಕ್ಸ್‌ಟನ್‌ ಓವಲ್‌’ನಲ್ಲಿ ಶುಕ್ರವಾರ ನಡೆದ ಮೇಲಾಟದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್‌ 7 ವಿಕೆಟಿಗೆ 187 ರನ್‌ ಪೇರಿಸಿ ಸವಾಲೊಡ್ಡಿದರೆ, ವಿಶ್ವ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ 19 ಓವರ್‌ಗಳಲ್ಲಿ 140 ರನ್ನಿಗೆ ಆಲೌಟ್‌ ಆಯಿತು.

ಆರಂಭಕಾರ ಮಾರ್ಟಿನ್‌ ಗಪ್ಟಿಲ್‌ (5) ಅವರನ್ನು ಬೇಗನೇ ಕಳೆದುಕೊಂಡ ನ್ಯೂಜಿಲ್ಯಾಂಡಿಗೆ ಕಾಲಿನ್‌ ಮುನ್ರೊ ಮತ್ತು ಕೀಪರ್‌ ಗ್ಲೆನ್‌ ಫಿಲಿಪ್ಸ್‌ ಆಧಾರವಾದರು. ಇಬ್ಬರೂ ಬಿರುಸಿನ ಆಟಕ್ಕಿಳಿದು ಅರ್ಧ ಶತಕ ಬಾರಿಸಿದರು. ಸರಿಯಾಗಿ 10 ಓವರ್‌ಗಳ ಜತೆಯಾಟ ನಿಭಾಯಿಸಿದ ಮುನ್ರೊ-ಫಿಲಿಪ್ಸ್‌ ದ್ವಿತೀಯ ವಿಕೆಟಿಗೆ 86 ರನ್‌ ಒಟ್ಟುಗೂಡಿಸಿದರು. ಮುನ್ರೊ 37 ಎಸೆತಗಳಿಂದ 53 ರನ್‌ ಹೊಡೆದರೆ (6 ಬೌಂಡರಿ, 2 ಸಿಕ್ಸರ್‌), ಫಿಲಿಪ್ಸ್‌ 52 ಎಸೆತಗಳಿಂದ 55 ರನ್‌ ಬಾರಿಸಿದರು. ಇದರಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿತ್ತು. ಕೀಪಿಂಗ್‌ ವೇಳೆ 4 ಕ್ಯಾಚ್‌ ಕೂಡ ಮಾಡಿದ ಫಿಲಿಪ್ಸ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸ್ಯಾಂಟ್ನರ್‌ (23), ರಾಸ್‌ ಟಯ್ಲರ್‌ (20) ಕಿವೀಸ್‌ ಸರದಿಯ ಉಳಿದ ಪ್ರಮುಖ ಸ್ಕೋರರ್. ವಿಂಡೀಸ್‌ ಪರ ಜೆರೋಮ್‌ ಟಯ್ಲರ್‌ ಮತ್ತು ಬ್ರಾತ್‌ವೇಟ್‌ ತಲಾ 2 ವಿಕೆಟ್‌ ಕಿತ್ತರು.

ರ್ಯಾನ್ಸ್‌ ಸ್ಮರಣೀಯ ಪಾದಾರ್ಪಣೆ
ದೊಡ್ಡ ಮೊತ್ತವನ್ನು ಬೆನ್ನಟ್ಟಲಿಳಿದ ವಿಂಡೀಸಿಗೆ ಗೇಲ್‌ (12)-ವಾಲ್ಟನ್‌ (7) ಜೋಡಿಯಿಂದ ಸ್ಫೋಟಕ ಆರಂಭ ಲಭಿಸಲಿಲ್ಲ. ಇವರಿಬ್ಬರನ್ನೂ ಮೊದಲ ಪಂದ್ಯವಾಡಲಿಳಿದ ಮಧ್ಯಮ ವೇಗಿ ಸೆತ್‌ ರ್ಯಾನ್ಸ್‌ ಸತತ ಎಸೆತಗಳಲ್ಲಿ ಕೆಡವಿದರು. ಆಂಡ್ರೆ ಫ್ಲೆಚರ್‌ (27)-ಶೈ ಹೋಪ್‌ (15) 3ನೇ ವಿಕೆಟಿಗೆ 42 ರನ್‌ ಪೇರಿಸಿ ಭರವಸೆ ಮೂಡಿಸಿದರೂ ಈ ಜೋಡಿ ಬೇರ್ಪಟ್ಟೊಡನೆ ಕೆರಿಬಿಯನ್ನರ ಕುಸಿತ ತೀವ್ರಗೊಂಡಿತು. 94 ರನ್‌ ಆಗುವಷ್ಟರಲ್ಲಿ 7 ವಿಕೆಟ್‌ ಹಾರಿಹೋಯಿತು.

Advertisement

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-7 ವಿಕೆಟಿಗೆ 187 (ಫಿಲಿಪ್ಸ್‌ 55, ಮುನ್ರೊ 53, ಸ್ಯಾಂಟ್ನರ್‌ 23, ಬ್ರಾತ್‌ವೇಟ್‌ 38ಕ್ಕೆ 2, ಜೆ. ಟಯ್ಲರ್‌ 41ಕ್ಕೆ 2). ವೆಸ್ಟ್‌ ಇಂಡೀಸ್‌-19 ಓವರ್‌ಗಳಲ್ಲಿ 140 (ಫ್ಲೆಚರ್‌ 27, ಬ್ರಾತ್‌ವೇಟ್‌ 21, ನರ್ಸ್‌ 20, ಜೆ. ಟಯ್ಲರ್‌ 20, ರ್ಯಾನ್ಸ್‌ 30ಕ್ಕೆ 3, ಸೌಥಿ 36ಕ್ಕೆ 3, ಬ್ರೇಸ್‌ವೆಲ್‌ 10ಕ್ಕೆ 2).

ಪಂದ್ಯಶ್ರೇಷ್ಠ: ಗ್ಲೆನ್‌ ಫಿಲಿಪ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next