ಜೇವರ್ಗಿ: ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ಹೊಸ ವರ್ಷವೆಂದರೆ ಮೋಜು-ಮಸ್ತಿ ಮಾಡುವುದು ಎನ್ನುವ ಭಾವನೆ ಇಟ್ಟುಕೊಳ್ಳಬೇಡಿ. ಸಮಾಜದಲ್ಲಿನ ಮಹನೀಯರನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಸಿಬಿಸಿ ಉಪಾಧ್ಯಕ್ಷ ರವಿ ಕೋಳಕೂರ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಕಾಲೇಜಿನಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ಕಾಲೇಜಿನ ಪ್ರಾಚಾರ್ಯರಿಗೆ ಗೌರವಿಸುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಡವರು, ಶೋಷಿತ ವರ್ಗಕ್ಕೆ ಸೇವೆ ಸಲ್ಲಿಸಬೇಕು. ಅನ್ನದಾತ ರೈತ, ರಕ್ಷಣೆದಾತ ಸೈನಿಕ, ಜ್ಞಾನದಾತ ಗುರುಗಳನ್ನು ಗೌರವಿಸುವ ಮೂಲಕ ಹೊಸ ವರ್ಷಾಚರಣೆ ಮಾಡಿದರೆ ಅದು ನಿಜವಾಗಿಯೂ ಸ್ಮರಣೀಯ, ಅರ್ಥಪೂರ್ಣವಾಗುತ್ತದೆ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ಪ್ರಾಚಾರ್ಯ ಮೊಹಮ್ಮದ್ ಅಲ್ಲಾ ಉದ್ದೀನ್ ಸಾಗರ, ಕಾಲೇಜಿನ ಸಿಬ್ಬಂದಿ ಸಹಕಾರದೊಂದಿಗೆ ತಮ್ಮ ಕಾಲೇಜು ಜಿಲ್ಲೆಯಲ್ಲಿ ಮಾದರಿಯಾಗುವತ್ತ ದೃಢ ಹೆಜ್ಜೆ ಇರಿಸಿದೆ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ಎಚ್.ಬಿ.ಪಾಟೀಲ, ಮಂಜುನಾಥ ಎ.ಎಂ., ಪ್ರಕಾಶ ಪಾಟೀಲ, ನೇಸರ ಎಂ.ಬೀಳಗಿ, ಅತಿಥಿ ಉಪನ್ಯಾಸಕರಾದ ರಂಜಿತಾ ಠಾಕೂರ, ಸಹಾಯಕ ಸಿಬ್ಬಂದಿ ಭಾಗಣ್ಣ, ಮೆಹಬೂಬ್ ಹಾಗೂ ವಿದ್ಯಾರ್ಥಿಗಳು ಇದ್ದರು.