Advertisement

ಪಂಚಮಹಾವೈಭವದಲ್ಲಿ  ನವಯುಗಾರಂಭ, ಬಾಲಲೀಲೋತ್ಸವ

01:00 AM Feb 12, 2019 | Harsha Rao |

ಬೆಳ್ತಂಗಡಿ: ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಪಂಚಮಹಾವೈಭವ ಎಂಬ ವಿನೂತನ ಧಾರ್ಮಿಕ – ಕಲಾಕಾರ್ಯಕ್ರಮ ಸೋಮವಾರ ಆರಂಭಗೊಂಡಿತು. ಭಗವಾನ್‌ ಬಾಹುಬಲಿಯ ಜೀವನ ವೃತ್ತಾಂತವನ್ನು ಹಂತಹಂತವಾಗಿ ನಿರೂಪಿಸುವ ಈ ಕಾರ್ಯಕ್ರಮವು ಮುಂದಿನ ನಾಲ್ಕು ದಿನಗಳ ಕಾಲ ಬೆಳಗ್ಗೆ ಮತ್ತು ಸಂಜೆ ನಡೆಯಲಿದೆ.

Advertisement

ಸೋಮವಾರ ಬೆಳಗ್ಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಮೊದಲ ದಿನದ ಕಾರ್ಯಕ್ರಮವು ಭರತ-ಬಾಹುಬಲಿಯವರ ತಂದೆ ಶ್ರೀ ಆದಿನಾಥ ಮಹಾರಾಜರ ಆಡಳಿತ, ಮಕ್ಕಳ ಬಾಲಲೀಲೋತ್ಸವಕ್ಕೆ ಮೀಸಲಾಗಿತ್ತು. ಇದಕ್ಕಾಗಿ ಆದಿನಾಥರ ಆಳ್ವಿಕೆಯಿದ್ದ ಅಯೋಧ್ಯೆ ಮತ್ತು ಪೌದನಪುರ ನಗರಗಳ ಮರುಸೃಷ್ಟಿ ಶ್ರೀಕ್ಷೇತ್ರದಲ್ಲಿ ನಡೆದಿದ್ದು, ಅಲ್ಲಿ ನವಯುಗಾರಂಭದ ಲಕ್ಷಣಗಳು ಮೂಡಿಬರುವುದನ್ನು ಪ್ರದರ್ಶಿಸಲಾಯಿತು.

ಗೋಚರವಾದ ಲಕ್ಷಣಗಳ ಬಗ್ಗೆ ಪ್ರಜೆಗಳು ಅರಸ ಆದಿನಾಥರ ಬಳಿ ಹೇಳಿಕೊಂಡಾಗ, ಅವು ನೂತನ ಯುಗಾರಂಭದ ಸಂಕೇತಗಳು ಎಂದು ಅವರು ಸಂಶಯ ನಿವಾರಣೆ  ಮಾಡುವ ಸನ್ನಿವೇಶಗಳನ್ನು ಕಲಾವಿದರು ಪ್ರದರ್ಶಿಸಿದರು. ತಿನ್ನಲು ಆಹಾರವಿಲ್ಲದೆ, ವಿಷ ಜಂತುಗಳ ಕಾಟದಿಂದ ಬಳಲಿದ್ದ ಅಯೋಧ್ಯಾ ನಗರಿಯ ಪ್ರಜೆಗಳು ತಮ್ಮ ಶಂಕೆ ನಿವಾರಣೆಗೊಂಡಾಗ ಸಂತಸಗೊಂಡರು. ಹೀಗೆ ಬಾಹುಬಲಿಯ ಚರಿತ್ರೆ ಸಾರುವ ಪಂಚಮಹಾವೈಭವವು ಜನರನ್ನು ಶತಮಾನಗಳ ಹಿಂದಿನ ಲೋಕಕ್ಕೆ ಕೊಂಡೊಯ್ದಿತ್ತು. 

ಕ್ಷೇತ್ರದಲ್ಲಿ ನಿರ್ಮಾಣಗೊಂಡ ಸುಂದರ ಸಭಾಂಗಣ ಅಯೋಧ್ಯಾ ನಗರಿ ಅರಮನೆಗಿಂತಲೂ ಸುಂದರವಾ ಗಿದೆ ಎಂದು ಮುನಿಶ್ರೇಷ್ಠರು ಮೆಚ್ಚುಗೆ ಪ್ರದರ್ಶನಗೊಂಡ ಕಥಾನಕದಲ್ಲಿ ಕಲಾವಿದರ ಅಭಿನಯ, ನಾಟ್ಯ ಅತ್ಯಂತ ಮನೋಜ್ಞವಾಗಿತ್ತು. ಇಲ್ಲಿನ ವಿಶಾಲ ವೇದಿಕೆಯನ್ನು ಅರಮನೆ ಹಾಗೂ ಸಭಾಂಗಣವನ್ನು ರಾಜ್ಯವಾಗಿ ತೋರಿಸಲಾಗಿತ್ತು.

ಅಸಿ-ಮಸಿ-ಕೃಷಿ…
ಅಯೋಧ್ಯಾ ನಗರಿಯಲ್ಲಿ ಉಂಟಾಗಿ ರುವ ಕಷ್ಟಗಳನ್ನು ಪ್ರಜೆಗಳು ರಾಜನಾದ ಆದಿನಾಥನಲ್ಲಿ ಹೇಳಿಕೊಂಡಾಗ, ಇದು ನವಯುಗಾರಂಭದ ಲಕ್ಷಣ, ಉತ್ಸರ್ಪಿಣಿ ಕಾಲ ಕಳೆದು ಅವಸರ್ಪಿಣಿ ಆರಂಭವಾಗುತ್ತಿದೆ. ಇನ್ನು ಮುಂದೆ ನೀನು ಬದುಕು ಇನ್ನೊಬ್ಬರನ್ನು ಬದುಕಲು ಬಿಡು ಎನ್ನುವ ಕಾಲ ಎಂಬುದಾಗಿ ಸೂಚಿಸುವ ಮಹಾರಾಜರು; ಅಸಿ, ಮಸಿ, ಕೃಷಿ, ವಾಣಿಜ್ಯ, ವಿದ್ಯೆ, ಶಿಲ್ಪಕ್ಕೆ ಸಂಬಂಧಿಸಿದ ವಸ್ತುಗಳನ್ನು ನೀಡಿ ಅದರಿಂದ ಜೀವನ ನಡೆಸಲು ಸೂಚಿಸುತ್ತಾರೆ.

Advertisement

ರಾಜ್ಯವನ್ನು ಗ್ರಾಮ, ನಗರ, ಖೇದ, ಖಾರ್ವಾಡ, ಪಟ್ಟಣವಾಗಿ ವಿಂಗಡಿಸಿ, ಪುರು ಉತ್ತರ ಹರಿ ಮತ್ತು ನಾಗವಂಶವೆಂದು ಮಾಡಿ ಮುಖ್ಯಸ್ಥರನ್ನು ನೇಮಿಸಲಾಗುತ್ತದೆ. ಸಮಾನರಾದ ಪ್ರಜೆಗಳು ಕಾಯಕದಲ್ಲಿ ತೊಡಗಿ ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ಸೂಚಿಸಲಾಗುತ್ತದೆ. 

ಈ ಸಂದರ್ಭ ಅರಮನೆಯಲ್ಲೂ ಬದಲಾವಣೆಯ ಗಾಳಿ ಬೀಸಿ, ರಾಣಿಯರಾದ ಯಶಸ್ವತಿ ದೇವಿ-ಸುನಂದಾ ದೇವಿಯವರಿಗೆ ಬಿದ್ದ ಕನಸನ್ನು ಆದಿನಾಥರಿಗೆ ವಿವರಿಸುತ್ತಾರೆ. ಯಶಸ್ವತಿ ದೇವಿ ಕನಸಿನ ಪ್ರಕಾರ ಆಕೆಯ ಪುತ್ರ ಚಕ್ರವರ್ತಿಯಾಗಿ ಜಗತ್ತನ್ನು ಗೆಲ್ಲಲಿದ್ದು, ಸುನಂದಾ ದೇವಿ ಕನಸಿಗೆ ಪುತ್ರ ಪರಾಕ್ರಮಿ, ತ್ಯಾಗಿಯಾಗಿ, ಕೇವಲ ಜ್ಞಾನ ಪಡೆಯುತ್ತಾನೆ ಎಂದು ತಿಳಿಯಲಾಗುತ್ತದೆ. 

ಪ್ರಜೆಗಳಿಗೆ ತಿಳಿಸುವ ಸಂದರ್ಭ ಅಸಿ, ಮಸಿ, ಕೃಷಿ, ವಾಣಿಜ್ಯ, ವಿದ್ಯೆ, ಶಿಲ್ಪಕ್ಕೆ ಸಂಬಂಧಿಸಿದ ವಸ್ತುಗಳನ್ನು ನೀಡಿ ಜೀವನದ ದಾರಿಯನ್ನು ತಿಳಿಸಲಾಗುತ್ತದೆ. ಅಸಿ ಎಂದರೆ ಆತ್ಮ ರಕ್ಷಣೆ, ದೇಶ ರಕ್ಷಣೆಗಾಗಿ ಉಪಯೋಗಿಸುವ ಆಯುಧಗಳು. ರಕ್ತಪಾತಕ್ಕಿಂತಲೂ ಕ್ಷತ್ರಿಯರಾಗಿ ಧರ್ಮ ರಕ್ಷಣೆಗಾಗಿ ಇದರ ಉಪಯೋಗವಾಗಬೇಕು ಎಂದು ವಿವರಿಸಲಾಗುತ್ತದೆ. ಮಸಿ ಎಂದರೆ ಬರವಣಿಗೆಯ ಸಾಧನವಾಗಿದ್ದು, ಲೆಕ್ಕಪತ್ರ ಇದರ ಉದ್ಯೋಗವಾಗಿದೆ. ಕೃಷಿ ಎಂದರೆ ಬೇಸಾಯವಾಗಿದ್ದು, ಗೊಬ್ಬರ, ನೀರಿನಿಂದ ಆಹಾರ ವಸ್ತುಗಳನ್ನು ತಯಾರಿಸುವುದು. ವಾಣಿಜ್ಯ ಎಂದರೆ ವ್ಯಾಪಾರವಾಗಿದ್ದು, ಪ್ರಾಮಾಣಿಕ ವ್ಯವಹಾರವನ್ನು ಇಲ್ಲಿ ಕಲಿಸಲಾಗುತ್ತದೆ. 

ವಿದ್ಯೆ ಎಂದರೆ ಅಧ್ಯಯನ, ಅಧ್ಯಾಪನದ ಮೂಲಕ ಸಂಸ್ಕಾರ, ಗುಣನಡತೆಯನ್ನು ತಿಳಿಸುವುದಕ್ಕಾಗಿ ಉಪಾಧ್ಯಾಯ, ಪಂಡಿತ, ಗುರು, ಶಾಸಿŒ ಎಂದು ಹೆಸರಿಸಲಾಗುತ್ತದೆ. ಶಿಲ್ಪ ಎಂದರೆ ಚಿತ್ರ, ಸಂಗೀತ, ನೃತ್ಯ, ಹಾಡು, ವಾದನ, ಶಿಲ್ಪಕಲೆ ಮೂಲಕ ಉದ್ಯೋಗ ಮಾಡುವುದಾಗಿದ್ದು, ಜೀವನ ರೂಪಿಸುವುದಕ್ಕಾಗಿ ಜನರ ಮನಸ್ಸನ್ನು ಅರಳಿಸಿ ಶಾಂತಿ ನೆಲೆಸುವಂತೆ ಮಾಡುವುದು ಎಂಬುದನ್ನು ರಾಜ ಪ್ರಜೆಗಳಿಗೆ ವಿವರಿಸುತ್ತಾನೆ.

ಆಚಾರ್ಯ ಶ್ರೀ 108 ವರ್ಧಮಾನ ಸಾಗರ ಮುನಿ ಮಹಾರಾಜರು, ಆಚಾರ್ಯ ಶ್ರೀ 108 ಪುಷ್ಪದಂತ ಮುನಿ ಮಹಾರಾಜರು, ಸಮಸ್ತ ಮುನಿ ವರ್ಗ, ಮಾತಾಜಿಗಳು, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಡಿ. ಹಷೇìಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌, ಶ್ರೇಯಸ್‌ ಕುಮಾರ್‌, ನಿಶ್ಚಲ್‌ ಕುಮಾರ್‌, ಮಾನ್ಯ, ಡಾ| ಬಿ. ಯಶೋವರ್ಮ ಮೊದಲಾದವರು ಉಪಸ್ಥಿತರಿದ್ದು, ಪಂಚಮಹಾವೈಭವ  ಕಾರ್ಯಕ್ರಮವನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.

ಸಂತೆ ಸುತ್ತಿದ ಹೆಗ್ಗಡೆ ಕುಟುಂಬಿಕರು!
ಪಂಚಮಹಾವೈಭವದ ಮುಂದಿನ ಭಾಗವಾಗಿ, ಇತ್ತ ಕಡೆ ರಾಜನ ಆಜ್ಞೆಯಂತೆ ಪ್ರಜೆಗಳು ನವಯುಗದ ಜೀವನ ಆರಂಭಿಸುತ್ತಾರೆ. ಇದಕ್ಕಾಗಿ ಸಭಾಂಗಣದಲ್ಲಿ ಸಂತೆಯ ಚಿತ್ರಣ ಮಾಡಲಾಗಿದ್ದು, ಡಾ| ಡಿ. ವೀರೇಂದ್ರ ಹೆಗ್ಗಡೆ 
ಸೇರಿದಂತೆ ಅವರ ಮನೆತನದವರು ಸಂತೆಯಲ್ಲಿ ಸುತ್ತಾಡುತ್ತಾರೆ. ಸಂತೆಯಲ್ಲಿ ಜನತೆ ತಾವು ಬೆಳೆದ, ಉತ್ಪಾದಿಸಿದ ವಸ್ತುಗಳನ್ನು ರೈತರು ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಈ ವೇಳೆ “ಸುಗ್ಗಿ ಹಾಡೋಣ ಬಾರಣ್ಣ’ ಹಾಡಿಗೆ 
ರೈತರೇ ನರ್ತಿಸುತ್ತಾರೆ.

ಮುಂದಿನ ದೃಶ್ಯದಲ್ಲಿ ಅರಮನೆಯಲ್ಲಿ ರಾಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡು ಪ್ರಸೂತಿಕ ಸ್ತ್ರೀಯರು ಆಗಮಿಸುತ್ತಾರೆ. ಇದರಿಂದ ವೃಷಭದೇವನ ಅಂತಃಪುರದಲ್ಲಿ ಸಂಭ್ರಮ ನೆಲೆಸುತ್ತದೆ. ಈ ಸಂದರ್ಭದಲ್ಲಿ ನೃತ್ಯ 
ನಡೆದಿದ್ದು, ಹೆಗ್ಗಡೆ ಅವರ ಪುತ್ರಿ ಶ್ರದ್ಧಾ ಅಮಿತ್‌ ಅವರೂ ಹೆಜ್ಜೆ ಹಾಕಿದ್ದು, ವಿಶೇಷವಾಗಿತ್ತು.

ವಿಜ್ಞಾನ ನಮ್ಮ ದಾಸನಾಗಲಿ
ಪಂಚಮಹಾವೈಭವದಲ್ಲಿ ನವಯುಗ ಆರಂಭದ ಮೂಲಕ ಜಗತ್ತಿನ ವೃದ್ಧಿಯನ್ನು ತೋರಿಸಲಾಗಿದ್ದು, ವಿಜ್ಞಾನದ ಬೆಳವಣಿಗೆ ಹೇಗಾಗಬೇಕು ಎಂಬುದನ್ನು ವಿವರಿಸಲಾಗುತ್ತದೆ. ನಮ್ಮ ಉಪಕಾರಕ್ಕೆಂದು ಹುಟ್ಟಿಕೊಂಡ ಅಣುಬಾಂಬಿನಂತಹ ವಸ್ತುಗಳು ಇಂದು ಜನತೆಗೆ ಭಯವನ್ನು ಸೃಷ್ಟಿಸುತ್ತವೆ. ಹೀಗಾಗಿ ವಿಜ್ಞಾನ ನಮ್ಮ ದಾಸನಾಗಬೇಕು ಎಂಬುದನ್ನು ಇಲ್ಲಿ ಚಿತ್ರಿಸಲಾಗಿದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮದ ಕೊನೆಯಲ್ಲಿ ತಿಳಿಸುತ್ತಾರೆ. 

ಇಂದಿನ ಕಾರ್ಯಕ್ರಮ 
ಬೆಳ್ತಂಗಡಿ
: ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದಲ್ಲಿ ಪಂಚಮಹಾವೈಭವದ 2ನೇ ದಿನವಾದ ಫೆ. 12ರಂದು ಬೆಳಗ್ಗೆ 10.30ಕ್ಕೆ ಸ್ತ್ರೀ ಶಿಕ್ಷಣ-ಕಲೆ- ಸಂಸ್ಕೃತಿ ವರ್ಣನೆ, ಸಂಜೆ 4.30ಕ್ಕೆ ಭೋಗದಿಂದ ತ್ಯಾಗದೆಡೆಗೆ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ 7ಕ್ಕೆ ಅಮೃತವರ್ಷಿಣಿ ಸಭಾಂಗಣದಲ್ಲಿ ಬೆಂಗಳೂರಿನ ಸುಕನ್ಯಾ ರಾಮ್‌ಗೊàಪಾಲ್‌ ಮತ್ತು ಬಳಗದಿಂದ ಸ್ವರ ಮಾಧುರ್ಯ, ಬಳಿಕ ಸೋಲಾಪುರದ ಸ್ವರ ನಿನಾದ ತಂಡದಿಂದ ಜಾಗೊ ಹಿಂದೂಸ್ತಾನಿ- ದೇಶ ಭಕ್ತಿ ಗೀತೆಗಳ ಗಾಯನ ನಡೆಯಲಿದೆ.

ಪೂಜಾ ಕಾರ್ಯಕ್ರಮ
ರತ್ನಗಿರಿ ಬೆಟ್ಟದಲ್ಲಿ ಬೆಳಗ್ಗೆ 8ರಿಂದ ನಿತ್ಯ ವಿಧಿ ಸಹಿತ ಅಗ್ರೋದಕ ಮೆರವಣಿಗೆ, 216 ಕಲಶಗಳಿಂದ ಪಾದಾಭಿಷೇಕ, ಮಧ್ಯಾಹ್ನ 2.30ಕ್ಕೆ ಯಜ್ಞ ಶಾಲೆಯಲ್ಲಿ ಯಾಗ ಮಂಡಲಾರಾಧನೆ, ಸಂಜೆ ಧ್ವಜ ಪೂಜೆ, ಶ್ರೀ ಬಲಿ ವಿಧಾನ ಮಹಾಮಂಗಳಾರತಿ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next