Advertisement

New Year ಕಡಲ ನಗರಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ

11:28 PM Dec 31, 2023 | Team Udayavani |

ಮಂಗಳೂರು/ಉಡುಪಿ: ಕಡಲ ನಗರಿ ಮಂಗಳೂರು ಸಹಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಸಡಗರದಿಂದ ನಡೆಯಿತು.

Advertisement

ಜಿಲ್ಲೆಯ ವಿವಿಧೆಡೆ ಸಂಗೀತ, ನೃತ್ಯ ಸಹಿತ ಮನೋರಂಜನ ಚಟುವಟಿಕೆಗಳು, ಸಂಭ್ರಮ ಕೂಟಗಳು ರವಿವಾರ ಸಂಜೆಯಿಂದಲೇ ಆರಂಭಗೊಂಡು ತಡರಾತ್ರಿವರೆಗೂ ಮುಂದುವರಿಯಿತು. ಸಂಜೆ ವೇಳೆ ಬೀಚ್‌ಗಳಲ್ಲಿ ಪ್ರವಾಸಿಗರ ದಂಡು ಕಂಡು ಬಂತು. ಹೊಟೇಲ್‌, ರೆಸಾರ್ಟ್‌, ಹೋಂ ಸ್ಟೇಗಳು ಬಹುತೇಕ ಭರ್ತಿಯಾಗಿದ್ದವು.

ಕೆಲವು ದೇವಸ್ಥಾನ, ಮಂದಿರಗಳಲ್ಲಿ ವಿಶೇಷ ಪೂಜೆ ನಡೆಯಿತು. ಚರ್ಚ್‌ಗಳಲ್ಲಿ ವಿಶೇಷ ಬಲಿ ಪೂಜೆ ಸಂಪನ್ನಗೊಂಡಿತು.

ಮಂಗಳೂರಿನ ಕೆಲವು ಸ್ಟಾರ್‌ ಹೊಟೇಲ್‌ನಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಜತೆಗೆ ವಿವಿಧ ಹೊಟೇಲ್‌, ಹಾಲ್‌, ಮಾಲ್‌ಗ‌ಳಲ್ಲಿ ವಿಶೇಷ ಆತಿಥ್ಯ-ಸಂಭ್ರಮ ಕೂಟಗಳು ನಡೆಯಿತು.

ಮಂಗಳೂರು ವ್ಯಾಪ್ತಿಯಲ್ಲಿ ಬೀಚ್‌, ಪಾರ್ಕ್‌ ಮೊದಲಾದ ಹೊರಾಂಗಣಗಳಲ್ಲಿ ಹೊಸ ವರ್ಷಾಚರಣೆಯನ್ನು ರವಿವಾರ ರಾತ್ರಿ 10 ಗಂಟೆಯವರೆಗೆ ಹಾಗೂ ಚರ್ಚ್‌, ಹೊಟೇಲ್‌, ರೆಸಾರ್ಟ್‌, ಸಭಾಂಗಣ ಇತ್ಯಾದಿ ಒಳಾಂಗಣಗಳಲ್ಲಿ ರಾತ್ರಿ 12.30ರವರೆಗೆ ವರ್ಷಾಚರಣೆಗೆ ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಅವಕಾಶ ನೀಡಲಾಗಿತ್ತು.

Advertisement

ಈ ಮಧ್ಯೆ, 2023ರ ಕೊನೆಯ ಸೂರ್ಯಾಸ್ತವನ್ನು ರವಿವಾರ ಸಂಜೆ ಕಂಡು ಹಲವರು ಸಂಭ್ರಮಿಸಿದರು. ವಿಶೇಷವಾಗಿ ಬೀಚ್‌, ಪ್ರವಾಸಿ ತಾಣಗಳಲ್ಲಿ ಸೂರ್ಯಾಸ್ತಮಾನದ ಸುಂದರ ಕ್ಷಣವನ್ನು ಪ್ರವಾಸಿಗರು ಕಣ್ತುಂಬಿಕೊಂಡರು. ಸಾರ್ವಜನಿಕ ಪಾರ್ಟಿ, ಡಿಜೆ ನೈಟ್‌ಗಳನ್ನು ಆಯೋಜಿಸಲಾಗಿತ್ತು. ನಗರ ಭಾಗದ ಕೆಲವೆಡೆ ರಾತ್ರಿ 12 ಗಂಟೆಯಾಗುತ್ತಿದ್ದಂತೆ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ನೂತನ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸಿದರು.

ಬೀಚ್‌ಗಳಲ್ಲಿ ಜನಜಾತ್ರೆ
ವರ್ಷಾಂತ್ಯದ ಹಿನ್ನೆಲೆಯಲ್ಲಿ ಕರಾವಳಿಯ ವಿವಿಧ ಬೀಚ್‌ಗಳಲ್ಲಿ ಜನಜಾತ್ರೆಯೇ ಕಂಡುಬಂತು. ಪಣಂಬೂರು, ತಣ್ಣೀರುಬಾವಿ ಮಲ್ಪೆ ಸೇರಿದಂತೆ ವಿವಿಧ ಬೀಚ್‌ಗಳಲ್ಲಿ ಹೊಸ ವರ್ಷಾಚರಣೆಯ ಸಂಭ್ರಮವನ್ನು ಆಚರಿಸಿದರು. ಹೊರ ಜಿಲ್ಲೆ/ರಾಜ್ಯದ ಪ್ರವಾಸಿಗರು ಭಾಗವಹಿಸಿದ್ದರು.

ಮಂಗಳೂರಿನಲ್ಲಿ ಬಿಗಿ ಪೊಲೀಸ್‌ ನಿಯೋಜನೆ
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ರವಿವಾರ ಸಂಜೆಯಿಂದಲೇ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸುಮಾರು 850 ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಚೆಕ್‌ಪೋಸ್ಟ್‌ಗಳಲ್ಲಿ ಸಿವಿಲ್‌ ಮತ್ತು ಸಂಚಾರ ಪೊಲೀಸರು ಕರ್ತವ್ಯದಲ್ಲಿದ್ದು ಮದ್ಯ ಸೇವಿಸಿ ಚಾಲನೆ ಮಾಡುವವರ ಬಗ್ಗೆ ತಪಾಸಣೆ ನಡೆಸಿದರು.

ಉಡುಪಿ ಜಿಲ್ಲೆಯಲ್ಲೂ ಸಂಭ್ರಮ
ಉಡುಪಿ: ಹೊಸ ವರ್ಷದ ಪ್ರಯುಕ್ತ ಜಿಲ್ಲೆಯಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ಉಡುಪಿಯಲ್ಲಿ ಸಾವಿರಾರು ಜನತೆ ಹೊಸ ವರ್ಷಕ್ಕೆ ಭವ್ಯ ಸ್ವಾಗತ ಕೋರಿದರು. ರಾತ್ರಿ 12 ಆಗುತ್ತಿದ್ದಂತೆ ಕೇಕ್‌ ಕತ್ತರಿಸಿ ಕುಣಿದು ಸಂಭ್ರಮಿಸಿದರು. ಸಂಜೆ ವೇಳೆ ಮಲ್ಪೆ, ಪಡುಕರೆ, ಕುಂದಾಪುರ, ಕಾಪು, ಪಡುಬಿದ್ರಿ ಬೀಚ್‌ ಗಳಲ್ಲಿ ಪ್ರವಾಸಿಗರ ದಂಡು ಹೆಚ್ಚಳವಾಗಿತ್ತು. ನಗರದ ಸುತ್ತಮುತ್ತ ಸೇರಿದಂತೆ ಹೊಟೇಲ್‌, ರೆಸಾರ್ಟ್‌, ಹೋಂ ಸ್ಟೇಗಳು ಬಹುತೇಕ ಭರ್ತಿಯಾಗಿದ್ದವು. ಬೀಚ್‌ ಭಾಗದಲ್ಲಿ ರೆಸಾರ್ಟ್‌, ಹೋಂಸ್ಟೇಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು.

ಹೊಸವರ್ಷಾಚರಣೆಗೆ ರಾತ್ರಿ 12.30ರವರೆಗೆ ಸಮಯಾವಕಾಶ ನಿಗದಿಪಡಿಸಲಾಗಿದ್ದು, ಲೌಡ್‌ ಸ್ಪೀಕರ್‌, ಡಿಜೆ ಸೌಂಡ್‌ 10 ಗಂಟೆ ಬಳಿಕ ನಿರ್ಬಂಧವಿತ್ತು. ಸಮುದ್ರ ತೀರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಹಾಗೂ ಹೋಂ ಗಾರ್ಡ್‌ ಸಿಬಂದಿ ನಿಗಾ ವಹಿಸಿದ್ದರು. ಜಿಲ್ಲೆಯ ಪ್ರಮುಖ ಜಂಕ್ಷನ್‌, ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ಪೊಲೀಸರು ತಪಾಸಣೆ, ಬಂದೋಬಸ್ತ್ ನಡೆಸಿದ್ದು ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next