ಕಲಬುರಗಿ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಬುಧವಾರ ಪೊಲೀಸರು ಶ್ವಾನದಳ, ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು.
ನಗರದ ರೈಲು, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ದಟ್ಟಣೆ ಪ್ರದೇಶಗಳಲ್ಲಿ ವಸ್ತುಗಳು ಮತ್ತು ವಾಹನಗಳನ್ನು ತಪಾಸಣೆ ಮಾಡಿದರು. ಈ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಕಂಡ ವ್ಯಕ್ತಿಗಳನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದರು.
ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಬಹುತೇಕವಾಗಿ ಮನೆಗಳಲ್ಲೇ ವರ್ಷಾಚರಣೆ ಮಾಡುವಂತೆ ನಗರ ಪೊಲೀಸ್ ಆಯುಕ್ತ ಡಾ| ವೈ.ಎಸ್. ರವಿಕುಮಾರ ಹೇಳಿದ್ದಾರೆ.
ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಎಲ್ಲ ರೀತಿಯ ಹೋಟೆಲ್ ಮತ್ತು ಇತರೆ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ರಾತ್ರಿ ಕರ್ಫ್ಯೂ ಜಾರಿಯಾಗಿದ್ದರಿಂದ ಹೊರ ಹೊರಡುವ ಸಂದರ್ಭದಲ್ಲಿ ಅತ್ಯಂತ ಕಡಿಮೆ ಜನರೊಂದಿಗೆ ವಾಹನದಲ್ಲಿ ಪ್ರಯಾಣಿಸುವುದು, ಗುರುತಿನ ಚೀಟಿ ಇಟ್ಟುಕೊಳ್ಳುವುದು. ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಮತ್ತು ತೆರೆದ ಸ್ಥಳಗಳಲ್ಲಿ ಗುಂಪುಗೂಡಿ ವರ್ಷ ಹೊಸ ವರ್ಷಾಚರಣೆ ಮಾಡುವಂತಿಲ್ಲ ಎಂದು ಎಚ್ಚರಿಸಿದ್ದಾರೆ.
ಮನೆಯ ಹೊರಗೆ ಬಂದಂತಹ ಸಾರ್ವಜನಿಕರು ಕಡ್ಡಾಯವಾಗಿ ರಾತ್ರಿ 10 ಗಂಟೆ ಒಳಗೆ ವಾಪಸ್ ಆಗಬೇಕು. ತುರ್ತು ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸುಡುವಂತಿಲ್ಲ. ಅಲ್ಲದೇ, ರಾತ್ರಿ ಗಸ್ತಿನಲ್ಲಿರುವ ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದಷ್ಟು ಸಾರ್ವಜನಿಕರು ತಮ್ಮ ಮನೆಗಳಲ್ಲೇ ವರ್ಷಾಚರಣೆ ಮಾಡಬೇಕು. ರಾತ್ರಿ ಕರ್ಫ್ಯೂ ಜಾರಿಯಾಗಿದ್ದರಿಂದ ರಾತ್ರಿ 10 ಗಂಟೆ ನಂತರ ಅನಗತ್ಯವಾಗಿ ಯಾರೂ ಓಡಾಡುವಂತಿಲ್ಲ.
-ಡಾ| ವೈ.ಎಸ್.ರವಿಕುಮಾರ, ನಗರ ಪೊಲೀಸ್ ಆಯುಕ್ತ