Advertisement

ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಸಂಭ್ರಮ

09:35 PM Jan 01, 2020 | Lakshmi GovindaRaj |

ಯಳಂದೂರು: ತಾಲೂಕಿನಲ್ಲಿ 2020ರ ಹೊಸ ವರ್ಷಾಚರಣೆ ಪ್ರಯುಕ್ತ ಬುಧವಾರ ಯುವ ಸಮುದಾಯದ ಸಂಭ್ರಮ ಮುಗಿಲು ಮುಟ್ಟಿತು. ಮಂಗಳವಾರ ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಪಟ್ಟಣ ಬಸ್‌ ನಿಲ್ದಾಣ, ಬಳೇಪೇಟೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಯುವಕರು ಪಟಾಕಿ ಸಿಡಿಸಿ, ನೃತ್ಯ ಮಾಡಿ ಸಂಭ್ರಮಿಸಿ ನೂತನ ವರ್ಷಕ್ಕೆ ಸ್ವಾಗತ ಕೋರಿದರು.

Advertisement

ಬಿಆರ್‌ಟಿಗೆ ಭಕ್ತರ ದಂಡು: ತಾಲೂಕಿನ ಪ್ರಸಿದ್ಧ ಗಿರಿಧಾಮವಾಗಿರುವ ಬಿಳಿಗಿರಿರಂಗನ ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬಂದಿತು. ಮಂಗಳವಾರ ಸಂಜೆ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ಮಾಡಿ, ವಾಹನಗಳನ್ನು ಬಿಟ್ಟಿದ್ದರೂ. ಮದ್ಯಕ್ಕೆ ಕಡಿವಾಣ ಹಾಕಲು ಪೊಲೀಸ್‌ ಮತ್ತು ಅರಣ್ಯ ಇಲಾಖೆಯಿಂದ ಸಾಧ್ಯವಾಗಲಿಲ್ಲ. ಬೆಟ್ಟದ ಬಸ್‌ ನಿಲ್ದಾಣ, ದೊಡ್ಡ ತೇರಿನ ಬೀದಿ, ಬಿಳಿಗಿರಿ ಭವನದ ಮುಂಭಾಗವೂ ಸೇರಿದಂತೆ ಇದಕ್ಕಾಗಿಯೇ ಪ್ಲಾನ್‌ ಮಾಡಿಕೊಂಡು ಬಂದಿದ್ದ ಸಾವಿರಾರು ಯುವಕರು ಕುಡಿದು, ಕುಣಿದು ಕುಪ್ಪಳಿಸುವ ಮೂಲಕ ನೂತನ ವರ್ಷವನ್ನು ಸಂಭ್ರಮಿಸಿದರು. ಬೆಟ್ಟದಲ್ಲಿರುವ ಬಹುತೇಕ ಎಲ್ಲಾ ಪ್ರವಾಸಿ ಮಂದಿರಗಳು, ಲಾಡ್ಜ್ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು.

ದೇಗುಲ ದರ್ಶನಕ್ಕೆ ಸರತಿ ಸಾಲು: ಮಂಗಳವಾರದಿಂದಲೇ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿತು. ವಾಹನ ದಟ್ಟಣೆಯಿಂದ ಕೆಲ ಕಾಲ ಸವಾರರು ಟ್ರಾಫಿಕ್‌ ಜಾಮ್‌ ಕಿರಿಕಿರಿ ಅನುಭವಿಸುವಂತಾಯಿತು. ವಾಹನವನ್ನು ಪಾರ್ಕಿಂಗ್‌ ಮಾಡಲು ಕೆಲವರು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬಿಳಿಗಿರಿರಂಗನಾಥ ಸ್ವಾಮಿಗೆ ವಿಶೇಷ ಅಲಂಕಾರ: ಬಿಳಿಗಿರಿ ರಂಗನಾಥ ಸ್ವಾಮಿ ದೇಗುಲದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ನಿಂತ ಭಕ್ತರು ದೇವರ ದರ್ಶನ ಪಡೆದುಕೊಳ್ಳುತ್ತಿದ್ದರು. ಯಳಂದೂರು ಪಟ್ಟಣದಲ್ಲೂ ಹೊಸ ವರ್ಷದ ನಿಮಿತ್ತ ಗೌರೇಶ್ವರ, ಭೂ ಲಕ್ಷ್ಮೀ ವರಾಹಸ್ವಾಮಿ, ಗೋಡೆ ಗಣೇಶ, ಬಲಮುರಿ ವಿನಾಯಕ ಸೇರಿದಂತೆ ವಿವಿಧ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಏರುಮುಖವಾಗಿತ್ತು. ಇದಕ್ಕಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಿ, ಸಿಂಗರಿಸಲಾಗಿತ್ತು. ತಾಲೂಕಿನ ಕಂದಹಳ್ಳಿ ಮಹದೇಶ್ವರ ದೇಗುಲದಲ್ಲೂ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರಾಜಕೀಯ ಮುಖಂಡರ ಭೇಟಿ: ಮಾಜಿ ಸಂಸದ ಆರ್‌. ಧ್ರುವನಾರಾಯಣ, ಜಿಪಂ ಸದಸ್ಯ ಜೆ.ಯೋಗೇಶ್‌, ಮಾಜಿ ಉಪಾಧ್ಯಕ್ಷೆ ಕೇತಮ್ಮ, ಸದಸ್ಯ ವಡಗೆರೆ ದಾಸ್‌, ತಾಪಂ ಸದಸ್ಯ ವೈ.ಕೆ.ಮೋಳೆ ನಾಗರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ವಿ. ಚಂದ್ರು ಸೇರಿದಂತೆ ಹಲವು ರಾಜಕೀಯ ಮುಖಂಡರು ಬಿಳಿಗಿರಿರಂಗನಾಥ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.

Advertisement

ಹೊಸ ವರ್ಷದ ನಿಮಿತ್ತ ಯಳಂದೂರು ಪಟ್ಟಣದ ವೈನ್‌ ಅಂಗಡಿಗಳ ಮುಂದೆ ಜನ ಸಂದಣಿ ಅಧಿಕವಾಗಿತ್ತು. ಬೇಕರಿಗಳಲ್ಲಿ ಕೇಕ್‌ಗಳ ಮಾರಾಟ ಜೋರಾಗಿತ್ತು. ಹಣ್ಣಿನ ಅಂಗಡಿಗಳಲ್ಲಿ ಜನ ಜಂಗುಳಿ ಹೆಚ್ಚಾಗಿ ಕಂಡು ಬಂದಿದ್ದರಿಂದ ಇಲ್ಲಿನ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next