Advertisement

ಎಲ್ಲದರ ಹಿಂದೆ ಅಗೋಚರ ಶಕ್ತಿ: ಡಾ|ಸಂಧ್ಯಾ ಎಸ್‌. ಪೈ

03:56 AM Jan 13, 2019 | |

ಉಡುಪಿ: ಜೀವನದ ಪ್ರತಿಯೊಂದು ಘಟನೆಗಳ ಹಿಂದೆ ಒಂದು ಅಗೋಚರ ಶಕ್ತಿಯ ಕೈವಾಡ ಇರುತ್ತದೆ ಎಂದು “ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅಭಿಪ್ರಾಯಪಟ್ಟಿದ್ದಾರೆ. 

Advertisement

ಮಣಿಪಾಲದ ಮಾಹೆ ವಿ.ವಿ., ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌, ಸಿಂಡಿಕೇಟ್‌ ಬ್ಯಾಂಕ್‌ ಆಶ್ರಯದಲ್ಲಿ ಮಣಿಪಾಲದ ಹೊಟೇಲ್‌ ವ್ಯಾಲಿವ್ಯೂ ಸಭಾಂಗಣದಲ್ಲಿ ಶನಿವಾರ ನಡೆದ ಹೊಸ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಂದು ಚಟುವಟಿಕೆಗಳ ಹಿಂದೆ ಅದನ್ನು ನಿಯಂತ್ರಿಸುವ ಶಕ್ತಿ ಕುತೂಹಲಕರವಾದುದು ಎಂದರು. 


ಒಂದು ಚಿತ್ರ ರಚಿಸುವಾಗ ಪೆನ್ಸಿಲ್‌, ಬೆರಳು, ಬುದ್ಧಿ ಮತ್ತು ಭಾವ ತಾನು ಮೇಲು ತಾನು ಮೇಲು ಎನ್ನುತ್ತದೆ. ಬುದ್ಧಿ ಮತ್ತು ಭಾವಗಳ ಸಮ್ಮಿಲನದಿಂದ ಪೆನ್ಸಿಲ್‌ ಮೂಲಕ ಚಿತ್ರ ಮೂಡುತ್ತದೆ. ನನಗೆ ಗೌರವಗಳು ದೊರೆತಾಗ ಈ ಕಥೆ ನೆನಪಿಗೆ ಬರುತ್ತದೆ. ಆದರೆ ಇದರ ಹಿಂದಿರುವ ಶಕ್ತಿಯ ಬಗೆಗೆ ಗೊತ್ತಿರುವುದಿಲ್ಲ. ನಮ್ಮ ಪರಂಪರೆ ಬದುಕೊಂದು ಕರ್ಮ ಶಾಲೆ ಎನ್ನುತ್ತದೆ. ಪ್ರಾರಬ್ಧ ಕರ್ಮಕ್ಕೆ ಅನುಸಾರವಾಗಿ ಸುಖವೋ, ದುಃಖವೋ ಪ್ರಾಪ್ತವಾಗುತ್ತದೆ.

ಅದೃಷ್ಟವಶಾತ್‌ ನನಗೆ ಸೌಖ್ಯಪ್ರಾರಬ್ಧವಾಯಿತು. ಹುಟ್ಟಿದ ಮನೆಯಿಂದ ಸೇರಿದ ಮನೆಯವರೆಗೆ ಎಲ್ಲರೂ ಬದುಕಿಗೆ ಬಣ್ಣ ನೀಡಿದರು. ಹೀಗೆ ನನ್ನ ಬದುಕು ಭಗವಂತನ ದೇಣಿಗೆಯಾಯಿತು. ಬದುಕಿನಲ್ಲಿ ತನ್ನಲ್ಲಿ ಪರರನ್ನು, ಪರರಲ್ಲಿ ತನ್ನನ್ನು ಕಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಸಂಧ್ಯಾ ಪೈ ಹೇಳಿದರು. 

ಡಾ| ಸಂಧ್ಯಾ ಪೈ ಅವರಿಗೆ ಮಾಹೆ ಟ್ರಸ್ಟಿ ವಸಂತಿ ಆರ್‌. ಪೈ, ವಿಜಯ ಬ್ಯಾಂಕ್‌ ಮಾಜಿ ಅಧ್ಯಕ್ಷ ಎಚ್‌.ಎಸ್‌.ಉಪೇಂದ್ರ ಕಾಮತ್‌ ಅವರಿಗೆ ಸಿಂಡಿಕೇಟ್‌ ಬ್ಯಾಂಕ್‌ ಕ್ಷೇತ್ರೀಯ ಮಹಾಪ್ರಬಂಧಕ ಭಾಸ್ಕರ ಹಂದೆ ಮತ್ತು ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಆಡಳಿತ ನಿರ್ದೇಶಕ ಟಿ.ಸತೀಶ್‌ ಯು. ಪೈ, ಸಾಹಿತಿ ಅಂಬಾತನಯ ಮುದ್ರಾಡಿಯವರಿಗೆ ಮಾಹೆ ವಿ.ವಿ. ಕುಲಪತಿ ಡಾ| ಎಚ್‌.ವಿನೋದ್‌ ಭಟ್‌ ಹೊಸ ವರ್ಷದ ಪ್ರಶಸ್ತಿ ಪ್ರದಾನ ಮಾಡಿದರು. ಮಂಗಳೂರು ಕೆಎಂಸಿ ನಿವೃತ್ತ ಪ್ರಾಂಶುಪಾಲ ಡಾ| ಕೆ.ಆರ್‌. ಶೆಟ್ಟಿಯವರ ಪರವಾಗಿ ಮಂಗಳೂರು ಕೆಎಂಸಿ ಡೀನ್‌ ಡಾ| ವೆಂಕಟರಾಯ ಪ್ರಭು ಅವರಿಗೆ ಎಂಇಎಂಜಿ ಅಧ್ಯಕ್ಷ ಡಾ| ರಂಜನ್‌ ಪೈ ಪ್ರಶಸ್ತಿ ಪ್ರದಾನ ಮಾಡಿದರು. 


ತಾನು ಮಧ್ಯಮ ವರ್ಗದಿಂದ ಬಂದಿರುವುದರಿಂದ ಬ್ಯಾಂಕಿಂಗ್‌ ಸೇವೆ ಅವಧಿಯಲ್ಲಿ ಬಡತನದಲ್ಲಿರುವವರಿಗೆ ಸೇವೆ ಸಲ್ಲಿಸಲು ಅವಕಾಶವಾಯಿತು. ಅದೇ ರೀತಿ ಉದ್ಯಮ, ವಾಣಿಜ್ಯ ಕ್ಷೇತ್ರಗಳಿಗೂ ಸಹಕಾರ ನೀಡಲು ಸಾಧ್ಯವಾಯಿತು. ಇದಕ್ಕೆ ಹಿರಿಯರ ಮಾರ್ಗದರ್ಶನ, ಸಹಕಾರ ಕಾರಣ ಎಂದು ಉಪೇಂದ್ರ ಕಾಮತ್‌ ಹೇಳಿದರು. ಭಾಸ್ಕರ ಹಂದೆ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.  ಅಕಾಡೆಮಿ ಅಧ್ಯಕ್ಷ ಡಾ| ಎಚ್‌.ಎಸ್‌.ಬಲ್ಲಾಳ್‌ ಸ್ವಾಗತಿಸಿ ಕಾರ್ಯದರ್ಶಿ ಡಾ| ಎಚ್‌.ಶಾಂತಾರಾಮ್‌ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಕಳ ಭಂಡಾರ್‌ಕಾರ್ ಕಾಲೇಜಿನ ಪ್ರಾಂಶುಪಾಲ ಡಾ| ಮಂಜುನಾಥ ಕೋಟ್ಯಾನ್‌ ವಂದಿಸಿದರು.

ಅದೃಷ್ಟಕ್ಕೆ ಶರಣು: ಅಂಬಾತನಯ


ಬದುಕಿನಲ್ಲಿ ಬಯಸಿದ್ದೆಲ್ಲ ಬಂದೊದಗುವುದಿಲ್ಲ, ಒದಗುವುದೆಲ್ಲ ಬಯಸ್ಸಿದ್ದಾಗಿರುವುದಿಲ್ಲ. ಕೆಲವೊಮ್ಮೆ ಮಾತ್ರ ಬಯಸಿದ್ದು ಬಂದೊದಗುತ್ತದೆ. ಆಗ ಸಂತಸವಾಗುತ್ತದೆ. ಬಯಸದೆ ಬರುವುದೆಲ್ಲ ಅನಿರೀಕ್ಷಿತವಾಗಿ ಬರುತ್ತದೆ. ಆಗಲೂ ಪುಳಕವಾಗುತ್ತದೆ. ಹೀಗಾಗಿ ನಾನು ಅದೃಷ್ಟಕ್ಕೆ ಶರಣಾಗಿದ್ದೇನೆ. ಅದು ಕೊಡುವುದಕ್ಕೆ ಸಂತೋಷ ಪಡುತ್ತಿದ್ದೇನೆ ಎಂದು ಹೊಸ ವರ್ಷದ ಪ್ರಶಸ್ತಿ ಪುರಸ್ಕೃತ ಅಂಬಾತನಯ ಮುದ್ರಾಡಿ ವಿಶ್ಲೇಷಿಸಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next