Advertisement

ಇಷ್ಟಾರ್ಥ ಸಿದ್ಧಿರಸ್ತು! 

07:26 AM Dec 29, 2018 | |

ಪ್ರತಿಯೊಂದು ಮಹಾನಗರಕ್ಕೂ ಅದರದ್ದೇ ಆದ ವ್ಯಕ್ತಿತ್ವವಿದೆ. ಅದು ತನ್ನ ನಾಗರಿಕರನ್ನೂ ಪ್ರಭಾವಿಸಿರುತ್ತದೆ. ಬೆಂಗಳೂರು ಕೂಡಾ ಇದಕ್ಕೆ ಹೊರತಾಗಿಲ್ಲ. ಹೊಸ ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲಿ ಬೆಂಗಳೂರಿಗರು ಕೈಗೊಳ್ಳಬಹುದಾದ 6 ರೆಸೊಲ್ಯೂಷನ್ನುಗಳನ್ನು ನೀಡಿದ್ದೇವೆ.

Advertisement

ಹಾರ್ನ್ ಮಾಡದೆ ಶಾಂತಿ ಕಾಪಾಡಿ
ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದರೆ ತಡವಾಗುವುದೇನೋ ನಿಜ, ಆದರೆ ಅದಕ್ಕಿಂತ ಹೆಚ್ಚಿನ ಯಾತನೆ ಅಲ್ಲಿ ಕೇಳಿಬರುವ ಸಹಿಸಲಸಾಧ್ಯವಾದ ಹಾನುìಗಳಿಂದ ಉಂಟಾಗುತ್ತದೆ. ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಸವಾರರೆಲ್ಲರೂ ಸಂಗೀತ ನಿರ್ದೇಶಕರು! ಪೈಪೋಟಿಗೆ ಬಿದ್ದವರಂತೆ ನಮ್ಮದೂ ಒಂದು ಸದ್ದು ಕೇಳಲಿ ಎಂಬ ಧಾಟಿಯಲ್ಲಿ ಹಾರ್ನ್ ಒತ್ತುತ್ತಿರುತ್ತಾರೆ. ನಿಧಾನಗತಿಯ ಟ್ರಾಫಿಕ್‌ ಅಥವಾ ಟ್ರಾಫಿಕ್‌ ಜಾಮ್‌ ಆಗಿದ್ದಾಗಲೂ ಹಾರ್ನ್ ಒತ್ತುವ ಅವಶ್ಯಕತೆ ಏನಿದೆಯೋ ಗೊತ್ತಿಲ್ಲ. ನಾವು ಹಾರ್ನ್ ಒತ್ತಿದ ಮಾತ್ರಕ್ಕೆ ಟ್ರಾಫಿಕ್‌ ಕರಗಿಬಿಡುವುದಿಲ್ಲವಲ್ಲ! ಹಾರ್ನನ್ನು ಎಚ್ಚರಿಕೆಯಿಂದ, ಅವಶ್ಯಕತೆ ಬಿದ್ದಾಗ ಮಾತ್ರ ಉಪಯೋಗಿಸಬೇಕಿದೆ. ದಿನಕ್ಕೆ ಇಂತಿಷ್ಟು ಬಾರಿ ಮಾತ್ರ ಹಾರ್ನ್ ಬಾರಿಸುತ್ತೇನೆ ಎಂಬ ನಿರ್ಧಾರ ಕೈಗೊಂಡರೂ ಸಾಕು. 

ದಿನಕ್ಕೊಂದು “ಕನ್ನಡ್‌’ ಪದ ಕಲಿಸಿ
ಯಾವುದೇ ಒಂದು ಪ್ರಾಂತ್ಯದ ಸಂಸ್ಕೃತಿ ಅಸ್ತಿತ್ವಕ್ಕೆ ಅಲ್ಲಿನ ಭಾಷೆಯ ಕೊಡುಗೆ ಅನನ್ಯವಾದುದು. ಹೀಗಾಗಿಯೇ ಬೆಂಗಳೂರಿನಂಥ ಕಾಸ್ಮೋಪಾಲಿಟನ್‌ ನಗರಗಳಲ್ಲಿ ನೆಲೆಸಿರುವ ಪರಭಾಷಿಕರಿಗೆ ನೆಲದ ಭಾಷೆಯನ್ನು ಕಲಿಸಬೇಕಾದ ಅಗತ್ಯವಿದೆ. ಹೀಗಾಗಿ ಇನ್ನು ಮುಂದೆ “ಕನ್ನಡ್‌ ಗೊತ್ತಿಲ್ಲ’ ಎಂಬುದನ್ನಷ್ಟೇ ಕಲಿತಿರುವ ನಿಮ್ಮ ಪರಭಾಷಿಕ ಸ್ನೇಹಿತರಿಗೆ, ಪರಿಚಿತರಿಗೆ, ಸಹೋದ್ಯೋಗಿಗಳಿಗೆ ದಿನಕ್ಕೊಂದು ಕನ್ನಡ ಪದ ಕಲಿಸಿ. “ಹನಿ ಹನಿಗೂಡಿದರೆ ಹಳ್ಳ’ ಎಂದು ಹಿರಿಯರೇ ಹೇಳಿಲ್ಲವೇ! 

ಸರಿಯಾಗಿ ಅಡ್ರೆಸ್‌ ಹೇಳ್ಳೋ ಕಲೆ
ಬೆಂಗಳೂರಿನಲ್ಲಿ ಕಡು ಕಷ್ಟದ ಕೆಲಸವೆಂದರೆ ವಿಳಾಸ ಹುಡುಕುವುದು. ಮೊದಲ ಬಾರಿ ಬಂದವರಂತೂ ತಲುಪಬೇಕಾದ ಜಾಗ ಸಿಗುವಷ್ಟರಲ್ಲಿ ಹೈರಾಣಾಗಿಬಿಡುತ್ತಾರೆ. ಕೆಲ ಬಾರಿ ದಾರಿಯಲ್ಲಿ ಸಿಕ್ಕವರೂ ಸರಿಯಾಗಿ ವಿಳಾಸ ಹೇಳಿರುವುದಿಲ್ಲ. ಅಂದರೆ ಅವರು ಹೇಳಿದ್ದು ಯಾತ್ರಿಗೆ ಅರ್ಥವಾಗಿರುವುದಿಲ್ಲ. ಸಾಮಾನ್ಯವಾಗಿ ವಿಳಾಸ ಹೇಳುವವರು ಆ ಪ್ರದೇಶದ ಗಲ್ಲಿಗಳನ್ನು, ಓಣಿಗಳನ್ನು ಬಲ್ಲವರಾಗಿದ್ದರೆ ಅಷ್ಟೇ ಕ್ಲಿಷ್ಟಕರವಾಗಿ ಮಾರ್ಗ ಹೇಳಿಬಿಡುತ್ತಾರೆ. ರಸ್ತೆಯಲ್ಲಿ ಸಿಕ್ಕವರಿಗೆ ಸರಿಯಾದ ವಿಳಾಸ ಹೇಳುವುದು ಕೂಡಾ ಒಂದು ಕಲೆ, ಬುದ್ಧಿವಂತಿಕೆ. ಬಹುಮಂದಿಗೆ ಗೊತ್ತಿರುವ ಆಸ್ಪತ್ರೆ, ದೇವಸ್ಥಾನ, ವಾಟರ್‌ಟ್ಯಾಂಕ್‌, ಶಾಪಿಂಗ್‌ ಮಾರ್ಕೆಟ್‌, ಮಿಲ್ಕ್ ಡೈರಿ… ಇಂಥಾ ಲ್ಯಾಂಡ್‌ಮಾರ್ಕ್‌ಗಳನ್ನು ಬಳಸಿ ಅಡ್ರೆಸ್‌ ಹೇಳಿದರೆ ಪತ್ತೆ ಹಚ್ಚುವುದು ಸುಲಭ.  

ತಾಜ್ಯ ನಿರ್ವಹಣೆ
ನಗರದ ಸ್ವತ್ಛತೆಗೆಂದು ಮಹಾನಗರ ಪಾಲಿಕೆ ಒಂದು ವ್ಯವಸ್ಥೆಯನ್ನು ರೂಪಿಸಿದೆ. ಕಸದ ತೊಟ್ಟಿಗಳು, ಅದರ ನಿರ್ವಹಣೆಗೆ ನೌಕರರನ್ನು ನೇಮಿಸಿದೆ. ಬೆಳಿಗ್ಗೆ ಕಸವನ್ನು ಹೊತ್ತೂಯ್ಯಲು ವಾಹನವನ್ನೂ ನಿಗದಿಪಡಿಸಿದೆ. ನಗರದಾದ್ಯಂತ ಕಸವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆಡಳಿತ ಮಂಡಳಿ ಇಷ್ಟೊಂದು ಸವಲತ್ತನ್ನು ಒದಗಿಸುತ್ತಿರುವಾಗ ನಾವು ನಾಗರಿಕರು ಘನ ತ್ಯಾಜ್ಯ ಮತ್ತು ದ್ರವಯುಕ್ತ ತ್ಯಾಜ್ಯವನ್ನು ಮನೆ ಸುತ್ತಮುತ್ತ ಚೆಲ್ಲಾಡದೆ ನಿಗದಿತ ಸ್ಥಳದಲ್ಲಿ ತಂದು ಹಾಕಲೂ ಆಗದಿದ್ದರೆ ಹೇಗೆ?! ಅಷ್ಟನ್ನು ಮಾಡಿದರೆ ಸಾಕು; ನಮ್ಮೂರು ಗಾರ್ಡನ್‌ ಸಿಟಿಯಾಗಿಯೇ ಉಳಿಯುವುದು.

Advertisement

ಕನ್ನಡ ಸಿನಿಮಾ ನಾಟಕಗಳನ್ನು ನೋಡಿ
“ನಾವು ಕನ್ನಡಿಗರು ವಿಶಾಲ ಮನೋಭಾವದವರು’. ನಮ್ಮ ನೆಲದ ಸಂಸ್ಕೃತಿಯನ್ನಲ್ಲದೆ ಬೇರೆಯವರ ಸಂಸ್ಕೃತಿಯನ್ನೂ, ಭಾಷೆಯನ್ನು ಗೌರವಿಸುತ್ತೇವೆ. ಅವರ ಸಿನಿಮಾಗಳನ್ನು ನೋಡಿ ಖುಷಿಪಡುತ್ತೇವೆ. ಅದರ ನಡುವೆ ನಮ್ಮದೇ ಭಾಷೆಯ ಸಿನಿಮಾ, ನಾಟಕಗಳು, ಸಾಂಸ್ಕೃತಿಕ ಕಲಾಪ್ರಕಾರಗಳಿಗೆ ಪ್ರೋತ್ಸಾಹ ನೀಡುವುದನ್ನು ಮರೆಯಬಾರದು. ನಮ್ಮ ನೆಲದ ಸೊಗಡನ್ನು, ಸಂವೇದನೆಯನ್ನು ಪ್ರಚುರ ಪಡಿಸುವ ಯಾವುದೇ ಕಾರ್ಯಕ್ರಮಗಳಿಗೂ ಪರಭಾಷೆಯ ಗೆಳೆಯರನ್ನೂ ಕರೆದುಕೊಂಡು ಬರುವ ಪರಿಪಾಠ ರೂಢಿಸಿಕೊಳ್ಳಬೇಕು.

ಊರಿಗೆ ಹೋಗಿ ವೋಟ್‌ ಮಾಡಿ
ಒಮ್ಮೆ ಬೆಂಗಳೂರು ಸೇರಿಕೊಂಡು ಬಿಟ್ಟರೆ ಊರು, ನೆಂಟರಿಷ್ಟರ ನೆನಪೇ ಆಗದು ಎಂಬ ದೂರಿದೆ. ಇಲ್ಲಿಗೆ ಕಾಲಿಡುವ ಮನುಷ್ಯ ಉದ್ಯೋಗ, ಕನಸು, ಸಂಸಾರ ಹೀಗೆ ನಾನಾ ಕಾರಣಗಳಿಂದಾಗಿ ಬಂಧಿಯಾಗಿಬಿಡುತ್ತಾನೆ ಅನ್ನೋದು ನಿಜ. ಇದರ ನೇರ ಪರಿಣಾಮ ಕಾಣುವುದು ಚುನಾವಣೆಯ ಸಂದರ್ಭದಲ್ಲಿ. ದೇಶಕ್ಕೋಸ್ಕರ ಹೋರಾಡುವುದು ಹೇಗೆ ಸೈನಿಕನೊಬ್ಬನ ಕರ್ತವ್ಯವೋ ಅದೇ ರೀತಿ ದೇಶದ ಹಿತಕ್ಕಾಗಿ ಚುನಾವಣೆಯಲ್ಲಿ ಮತ ಚಲಾಯಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇದೆ. ವೋಟ್‌ ಮಾಡ್ತೀರಾ ಅಲ್ವಾ?

-ಹವನ

Advertisement

Udayavani is now on Telegram. Click here to join our channel and stay updated with the latest news.

Next