Advertisement

ಉರ್ವಸ್ಟೋರ್ ಅಂಗನವಾಡಿಗೆ ಹೊಸ ಕಳೆ

11:46 AM Dec 02, 2017 | |

ಉರ್ವಸ್ಟೋರ್‌: ಕುಸಿದು ಬೀಳುವ ಹಂತದಲ್ಲಿದ್ದ ಉರ್ವಸ್ಟೋರ್‌ ಅಂಗನವಾಡಿ ಕಟ್ಟಡ ಈಗ ದುರಸ್ತಿಗೊಂಡು ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. ಶಿಥಿಲಗೊಂಡಿದ್ದ ಕಿಟಕಿ ಗಾಜು, ಶೀಟ್‌ಗಳು ಸುಸ್ಥಿತಿಯಲ್ಲಿವೆ. ಜೀವ ಭಯದಲ್ಲಿ ಪಾಠ ಕೇಳುತ್ತಿದ್ದ ಪುಟಾಣಿಗಳು ನಿಶ್ಚಿಂತೆಯಿಂದಿದ್ದಾರೆ. ತುಕ್ಕು ಹಿಡಿದಿದ್ದ ಶೀಟ್‌ಗಳನ್ನು ಬದಲಾಯಿಸಿ, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಗೋಡೆಯಲ್ಲಿದ್ದ ಬಿರುಕುಗಳಿಗೆ ಸಿಮೆಂಟ್‌ ತುಂಬಿಸಿ ಸರಿಪಡಿಸಿ ಪೂರ್ತಿ ಕಟ್ಟಡಕ್ಕೆ ಪೈಂಟ್‌ ಬಳಿಯಲಾಗಿದೆ.

Advertisement

ಈ ಅಂಗನವಾಡಿಯು ಪೂರ್ಣವಾಗಿ ಸರಕಾರದ ಸುಪರ್ದಿಗೆ ಬರುವುದಿಲ್ಲ. ಅಂಗನವಾಡಿಯ ಕಾಮಗಾರಿಯ ಖರ್ಚು ವೆಚ್ಚವನ್ನು ಪ್ರಗತಿ ಮಹಿಳಾ ಮಂಡಲದ ಕಾರ್ಯಕರ್ತರು ನಿಭಾಯಿಸುತ್ತಿದ್ದಾರೆ. ಈಗ ಅವರೇ ಸ್ವಂತ ಹಣದಿಂದ ದುರಸ್ತಿ ಕಾಮಗಾರಿಯನ್ನೂ ನಡೆಸಿದ್ದಾರೆ.

ಸದ್ಯದಲ್ಲೇ ಮರದ ಸ್ಥಳಾಂತರ
ಅಂಗನವಾಡಿ ಪಕ್ಕದಲ್ಲಿಯೇ ದೊಡ್ಡದಾದ ಮರವಿದ್ದು, ಇದರ ರೆಂಬೆಗಳು ಬೀಳುವ ಸ್ಥಿತಿಯಲ್ಲಿವೆ. ಈ ಹಿಂದೆಯೂ ರೆಂಬೆ ಬಿದ್ದು, ಅನೇಕ ಶೀಟ್‌ಗಳು ಒಡೆದು ಹೋಗಿದ್ದವು. ಈ ಬಗ್ಗೆ ಮಹಿಳಾ ಮಂಡಳಿ ಕಾರ್ಯಕರ್ತೆಯರು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಅಂಗನವಾಡಿ ದುರಸ್ತಿಯಲ್ಲಿ ಪ್ರಗತಿ ಮಹಿಳಾ ಮಂಡಲದ ಸದಸ್ಯೆ ಪುಷ್ಪಾವತಿ ಸಹಿತ ಅಂಗನವಾಡಿ ಶಿಕ್ಷಕಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಅಲ್ಲದೆ, ಅಂಗನವಾಡಿ ಮಕ್ಕಳ ಪೋಷಕರು ಕೂಡ ಕೈಜೋಡಿಸಿದ್ದರು. ಕಾಮಗಾರಿ ವೇಳೆ ಮಕ್ಕಳ ಪಾಠಕ್ಕೆ ಯಾವುದೇ ತೊಂದರೆಯಾದಂತೆ ಕಾಮಗಾರಿ ನಿರ್ವಹಿಸಲಾಗಿತ್ತು.

‘ಸುದಿನ’ ಫಲಶ್ರುತಿ
ಅಂಗನವಾಡಿ ಕಟ್ಟಡದ ದುಃಸ್ಥಿತಿ ಬಗ್ಗೆ ‘ಸುದಿನ’ ಅ.17ರಂದು ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಇಲಾಖಾ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತತ್‌ಕ್ಷಣವೇ ಕಾಮಗಾರಿ ನಡೆಸುವಂತೆ ಆದೇಶಿಸಿದ ಪರಿಣಾಮ ಮೊದಲನೇ ಹಂತದ ಕಾಮಗಾರಿ ನಡೆದಿತ್ತು. ಬಳಿಕ ಮಳೆಯ ಕಾರಣದಿಂದಾಗಿ ಗೋಡೆಗಳಿಗೆ ಪೈಂಟ್‌ ಬಳಿಯಲು ಸಾಧ್ಯವಾಗಲಿಲ್ಲ. 

Advertisement

ತುರ್ತು ಕೆಲಸ ಪೂರ್ಣ
ಸದ್ಯ ಅಂಗನವಾಡಿಗೆ ಪೈಂಟ್‌ ಬಳಿದು ಕಿಟಕಿಗೆ ಗಾಜು ಅಳವಡಿಸಲಾಗಿದೆ. ಒಡೆದು ಹೋಗಿದ್ದ ಶೀಟ್‌ಗಳನ್ನು ಬದಲಾಯಿಸಲಾಗಿದೆ. ತುರ್ತು ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ನೆಲಕ್ಕೆ ಸಿಮೆಂಟ್‌ ಹಾಕುವ ಕೆಲಸ ಮಾಡಲಾಗುವುದು. ಪ್ರಗತಿ ಮಹಿಳಾ ಮಂಡಲದ ಕಾರ್ಯಕರ್ತೆಯರ ವಿಶೇಷ ಮುತು ವರ್ಜಿಯಿಂದ ಈ ಕಾರ್ಯಗಳು ನಡೆದಿವೆ. 
ಶೋಭಾ, ಮಹಿಳಾ ಮತ್ತು ಮಕ್ಕಳ
  ಅಭಿವೃದ್ಧಿ ಇಲಾಖೆ ಅಧಿಕಾರಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next