ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಮೂಲಕ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿಯ ಸಂಚಲನ ಸೃಷ್ಟಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ತಾನು ಕಲಿತ ಕೆರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನೇ ದತ್ತು ಪಡೆದು ಅದಕ್ಕೆ ಹೊಸ ಕಳೆ ನೀಡಿದ್ದಾರೆ. ಕಾಂತಾರ ಚಿತ್ರದ ನಟನೆಗಾಗಿ ಶ್ರೇಷ್ಠ ನಟ ಪ್ರಶಸ್ತಿ ಪಡೆದಿರುವ ಅವರು ಕಳೆದ ಸ್ವಾತಂತ್ರೊéàತ್ಸವ ದಿನದಂದೂ ಶಾಲೆಗೆ ಭೇಟಿ ನೀಡಿದ್ದರು.
71 ವರ್ಷಗಳ ಇತಿಹಾಸವಿರುವ ಕೆರಾಡಿ ಸರಕಾರಿ ಕನ್ನಡ ಹಿ.ಪ್ರಾ. ಶಾಲೆಯನ್ನು ಈ ಶೈಕ್ಷಣಿಕ ವರ್ಷದಿಂದ ಮುಂದಿನ ಐದು ವರ್ಷಗಳವರೆಗೆ ರಿಷಬ್ ಫೌಂಡೇಶನ್ ದತ್ತು ಪಡೆದಿದೆ. ಹೀಗಾಗಿ ಮುಚ್ಚುವ ಭೀತಿಯಲ್ಲಿದ್ದ ಶಾಲೆಗೆ ಮರುಜೀವ ಸಿಕ್ಕಿದೆ. ಶಿಕ್ಷಕರ ಕೊರತೆ, ಇನ್ನಿತರ ಸಮಸ್ಯೆಗಳಿಂದ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದ್ದ ಮಕ್ಕಳ ಸಂಖ್ಯೆ ಈ ವರ್ಷದಿಂದ ಏರುಗತಿಯಲ್ಲಿದೆ.
ಕಳೆದ ವರ್ಷ 71, ಈ ವರ್ಷ 93: ಕಳೆದ ವರ್ಷ ಈ ಶಾಲೆಯಲ್ಲಿ 71 ಮಕ್ಕಳು ಕಲಿಯುತ್ತಿದ್ದರು. ಈ ಬಾರಿ ಎಲ್‌ಕೆಜಿ, ಯುಕೆಜಿ, 1ರಿಂದ 8ನೇ ತರಗತಿಯವರೆಗೆ ವಿವಿಧ ತರಗತಿಗಳಿಗೆ ಒಟ್ಟಾರೆ 25 ಮಕ್ಕಳು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ 93 ಮಕ್ಕಳು ಕಲಿಯುತ್ತಿದ್ದಾರೆ. ಮುಂದಿನ ವರ್ಷದಿಂದ ಈ ಸಂಖ್ಯೆ ನೂರರ ಗಡಿ ದಾಟುವ ನಿರೀಕ್ಷೆಯಿದೆ. 1ನೇ ತರಗತಿಗೆ 12 ಮಕ್ಕಳು ಸೇರ್ಪಡೆಯಾಗಿದ್ದು, ಹೊಸದಾಗಿ ಆರಂಭಿಸಲಾದ ಎಲ್‌ಕೆಜಿ – ಯುಕೆಜಿಯಲ್ಲಿ 21 ಮಕ್ಕಳಿದ್ದಾರೆ. ತಲಾ ಇಬ್ಬರು ಸರಕಾರಿ, ಅತಿಥಿ ಶಿಕ್ಷಕರಿದ್ದು, ರಿಷಬ್ ಫೌಂಡೇಶನ್‌ನಿಂದ 4 ಗೌರವ ಶಿಕ್ಷಕರು ಸೇರಿದಂತೆ ಒಟ್ಟು 8 ಮಂದಿ ಶಿಕ್ಷಕರು ಬೋಧಿಸುತ್ತಿದ್ದಾರೆ.
ಕೈರಂಗಳ ಶಾಲೆಯನ್ನೂ ದತ್ತು ಪಡೆದಿದ್ದರು
ಗಡಿನಾಡು ಕಾಸರಗೋಡಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದನ್ನು “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಮೂಲಕ ಮನೋಜ್ಞವಾಗಿ ಚಿತ್ರಿಸಿದ್ದರು. ಆ ಬಳಿಕ ರಾಜ್ಯದಲ್ಲಿಯೂ ಕೆಲವೆಡೆಗಳಲ್ಲಿ ಕನ್ನಡ ಶಾಲೆಗಳ ಉಳಿಸುವ ಅಭಿಯಾನ ಆರಂಭಗೊಂಡವು. ಬಂಟ್ವಾಳ ತಾಲೂಕಿನ ಕೈರಂಗಳ ಕನ್ನಡ ಮಾಧ್ಯಮ ಹಿ.ಪ್ರಾ. ಶಾಲೆಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿತ್ತು. ಆಗ ಈ ಶಾಲೆಯಲ್ಲಿ 42 ಮಕ್ಕಳಿದ್ದು, ಆ ಬಳಿಕ ಮಕ್ಕಳ ಸಂಖ್ಯೆ 17ಕ್ಕೆ ಕುಸಿದು, ಮುಚ್ಚುವ ಹಂತದಲ್ಲಿತ್ತು. ಆದರೆ ತನ್ನ ಸಿನೆಮಾಕ್ಕಾಗಿ ಬಳಸಿ, ಕೈ ಕಟ್ಟಿ ಕುಳಿತುಕೊಳ್ಳದ ರಿಷಬ್ ಶೆಟ್ಟರು, ಈ ಕೈರಂಗಳ ಶಾಲೆಯನ್ನು ದತ್ತು ಪಡೆದು, ಮಾದರಿ ಶಾಲೆಯಾಗಿ ರೂಪಿಸುವ ಪಣ ತೊಟ್ಟಿದ್ದರು. ಮುಂದೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದೊಳಗೆ 84ಕ್ಕೆ ಏರಿತ್ತು.
ಮಾದರಿ ಶಾಲೆ ಗುರಿ
ಸರಕಾರಿ ಹಿ.ಪ್ರಾ. ಶಾಲೆಯ ಕಾಸರಗೋಡು ಚಿತ್ರದ ಮುಂದುವರಿದ ಭಾಗವಾಗಿ ಈ ಕೈಂಕರ್ಯ ಕೈಗೊಂಡಿದ್ದೇವೆ. ಶಾಲೆಯ ತುರ್ತು ಬೇಡಿಕೆಗಳನ್ನು ಈಗಾಗಲೇ ಪೂರೈಸಲಾಗಿದೆ. ಎಲ್ಲ ರೀತಿಯ ಸೌಕರ್ಯ ಒದಗಿಸಲಾಗುವುದು. ಮಕ್ಕಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು. ಅದಕ್ಕೆ ಪೋಷಕರು, ಗ್ರಾಮಸ್ಥರ ಸಹಕಾರವೂ ಬೇಕು.
– ರಿಷಬ್ ಶೆಟ್ಟಿ, ನಟ, ನಿರ್ದೇಶಕ
ಹೆಮ್ಮೆಯ ಸಂಗತಿ
ಈ ಬಾರಿ ಮಕ್ಕಳ ದಾಖಲಾತಿಯೂ ಹೆಚ್ಚಾಗಿದೆ. ಬೆಳ್ಳಾಲ, ಚಿತ್ತೂರು ಭಾಗಕ್ಕೆ ಹೋಗುತ್ತಿದ್ದ ಮಕ್ಕಳು ಇಲ್ಲಿಗೆ ಬಂದಿದ್ದಾರೆ. ಗ್ರಾಮೀಣ ಭಾಗದ ಶಾಲೆಗೆ ರಿಷಬ್ ಫೌಂಡೇಶನ್ ಸಕಲ ವ್ಯವಸ್ಥೆಯನ್ನು ನೀಡುತ್ತಿದೆ.
– ಭಾಸ್ಕರ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯರು
ಏನೆಲ್ಲ ಅಭಿವೃದ್ಧಿ?
ಆಟದ ಮೈದಾನ ವಿಸ್ತರಣೆ,
ಕಟ್ಟಡಕ್ಕೆ ಸುಣ್ಣಬಣ್ಣ
ಮಕ್ಕಳನ್ನು ಕರೆತರಲು 2 ಶಾಲಾ ವಾಹನ ವ್ಯವಸ್ಥೆ
ಶಾಲೆ ಪಕ್ಕದ ಇಬ್ಬರನ್ನು ಬಿಟ್ಟು 91 ಮಕ್ಕಳಿಗೂ ವಾಹನ ಸೌಲಭ್ಯ
ಎರಡು ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ, ನಲಿ-ಕಲಿ ಪರಿಕರಗಳು
ಶುದ್ಧ ನೀರಿನ ಘಟಕ, ಎಲ್‌ಕೆಜಿ- ಯುಕೆಜಿ ಮಕ್ಕಳಿಗೆ ಸಮವಸ್ತ್ರ
ಹೊಸದಾಗಿ ಶೌಚಾಲಯ ನಿರ್ಮಾಣ
ಕಂಪ್ಯೂಟರ್ ಲ್ಯಾಬ್, ಪ್ರಿಂಟರ್, ಪ್ರಾಜೆಕ್ಟರ್ ಶೀಘ್ರ ಒದಗಣೆ
– ಪ್ರಶಾಂತ್ ಪಾದೆ