Advertisement

ಕಾಲೇಜಿನಲ್ಲೇ ನಡೆಯಲಿದೆ ನವ ಮತದಾರರ ನೋಂದಣಿ!

01:19 AM Dec 16, 2021 | Team Udayavani |

ಮಂಗಳೂರು: ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ 18 ವರ್ಷ ಮೇಲ್ಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ಅವರ ಹೆಸರನ್ನು ಕಾಲೇಜು ಮೂಲಕವೇ ನೋಂದಣಿ ಮಾಡುವ ಮಹತ್ವದ ಕಾರ್ಯಯೋಜನೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಂದಾಗಿದೆ.

Advertisement

ದ.ಕ. ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 18 ವರ್ಷ ಪೂರ್ಣಗೊಂಡು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೆ ಇರುವವರ ಪಟ್ಟಿಯನ್ನು ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಯಾರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರನ್ನು ನೋಡಲ್‌ ಅಧಿಕಾರಿಗಳಾಗಿ ನೇಮಿಸಲಾಗಿದೆ. ರಾಜ್ಯದಲ್ಲಿಯೇ ಅಪರೂಪದ ಈ ಅಭಿಯಾನದ ಮೂಲಕ 25 ಸಾವಿರ ನವ ಮತದಾರರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ.

ಶಿಕ್ಷಣ ಸಂಸ್ಥೆಯಲ್ಲಿ 2022ರ ಜ.1ಕ್ಕೆ 18 ವರ್ಷ ಪೂರ್ಣಗೊಳ್ಳುವ ಎಲ್ಲ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ತಪ್ಪದೇ ಆನ್‌ಲೈನ್‌ ಮೂಲಕ ನೋಂದಾಯಿಸಬೇಕಾಗಿದೆ. ಜತೆಗೆ “ವೋಟರ್‌ ಹೆಲ್ಫ್ಲೈನ್‌’ ಆ್ಯಪ್‌ ಮೂಲಕ ವಿದ್ಯಾರ್ಥಿಗಳೇ ನೋಂದಣಿ ಮಾಡಲೂ ಅವಕಾಶವಿದೆ. ಈ ಬಗ್ಗೆ ಒಂದು ವಾರದೊಳಗೆ ಜಿಲ್ಲೆಯ ಎಲ್ಲ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರಿಗೆ ಒಂದು ದಿನದವಿಶೇಷ ತರಬೇತಿಯನ್ನು ಜಿಲ್ಲಾಡಳಿತ ನೀಡಲಿದೆ.

ಮೇಲುಸ್ತುವಾರಿಗೆ ನೋಡಲ್‌ ಅಧಿಕಾರಿಗಳು
ಜಿಲ್ಲೆಯ ಅನುದಾನರಹಿತ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಮಂಗಳೂರು ವಿ.ವಿ. ರಿಜಿಸ್ಟ್ರಾರ್‌ ಡಾ| ಕಿಶೋರ್‌, ಸರಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ನೋಂದಣಿ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ದ.ಕ. ವಿಶೇಷಾಧಿಕಾರಿ ದೇವಿಪ್ರಸಾದ್‌, ಜಿಲ್ಲೆಯ ಎಲ್ಲ ಎಂಜಿನಿಯರಿಂಗ್‌, ವೈದ್ಯಕೀಯ ಕಾಲೇಜುಗಳಿಗೆ ಕಾಲೇಜು ಶಿಕ್ಷಣ ಇಲಾಖೆಯ ದ.ಕ.ವಿಶೇಷಾಧಿಕಾರಿ ಜಯಕರ ಭಂಡಾರಿ ಹಾಗೂ ಜಿಲ್ಲೆಯ ಎಲ್ಲ ಪಾಲಿಟೆಕ್ನಿಕ್‌ ಹಾಗೂ ಐಟಿಐ ಸಂಸ್ಥೆಗಳಿಗೆ ಕರ್ನಾಟಕ ಪಾಲಿಟೆಕ್ನಿಕ್‌ ಮಂಗಳೂರಿನ ಪ್ರಾಂಶುಪಾಲರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ.

ಇದನ್ನೂ ಓದಿ:ಡಬಲ್‌ ಎಂಜಿನ್‌ ಸರ್ಕಾರ ಪರಿಹಾರ ಕೊಡಿಸಲಿ: ಬಂಡೆಪ್ಪ ಕಾಶಂಪೂರ್‌

Advertisement

35 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು
ದ.ಕ. ಜಿಲ್ಲೆಯ ಮೆಡಿಕಲ್‌, ಎಂಜಿನಿಯರಿಂಗ್‌, ನರ್ಸಿಂಗ್‌, ಪದವಿ, ಪಾಲಿಟೆಕ್ನಿಕ್‌, ಐಟಿಐ ಸಂಸ್ಥೆ ಸೇರಿದಂತೆ 170ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 35 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಶೇ.70ಕ್ಕೂ ಅಧಿಕ ವಿದ್ಯಾರ್ಥಿಗಳ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿಲ್ಲ ಎಂದು ದ.ಕ. ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

“ಕಾಲೇಜಿನಲ್ಲಿ ವಿಶೇಷ ಅಭಿಯಾನ’
ದ.ಕ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು ಇದರ ಪ್ರಕಾರ ನವಮತದಾರರ ನೋಂದಣಿಗೆ ದ.ಕ. ಜಿಲ್ಲಾಡಳಿತವು ಬೃಹತ್‌ ನೋಂದಣಿ ವಿಶೇಷ ಅಭಿಯಾನ ಆಯೋಜಿಸಿದೆ. ಇದರಂತೆ ಜಿಲ್ಲೆಯ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿರುವ ಶಿಕ್ಷಣ ಸಂಸ್ಥೆಯಲ್ಲಿಯೇ ನೋಂದಣಿ ನಡೆಸಲು ಉದ್ದೇಶಿಸಲಾಗಿದೆ.
– ಡಾ| ರಾಜೇಂದ್ರ ಕೆ.ವಿ. ಜಿಲ್ಲಾಧಿಕಾರಿ, ದ.ಕ

ಉಡುಪಿಯಲ್ಲಿ ಜಾಗೃತಿ, ಅರಿವು
ಮೂಡಿಸುವ ಕಾರ್ಯಕ್ರಮ
ಉಡುಪಿ ಜಿಲ್ಲೆಯಲ್ಲಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಜಾಗೃತಿ, ಅರಿವು ಮೂಡಿಸುವ ಕಾರ್ಯಕ್ರಮ ಜಿಲ್ಲೆಯ 40 ಕಾಲೇಜುಗಳಲ್ಲಿಯೂ ನಡೆಯುತ್ತಿದೆ. ಕಾಲೇಜಿನಲ್ಲಿರುವ ಮತದಾರರ ಸಾಕ್ಷರತಾ ಕ್ಲಬ್‌ನಲ್ಲಿ ಚುನಾವಣೆ ಆಯೋಗದ ನಿರ್ದೇಶನದಂತೆ ಚಟುವಟಿಕೆ ನಡೆಯುತ್ತಿದೆ. ಗರಿಷ್ಠ ಸಂಖ್ಯೆಯಲ್ಲಿ ಯುವಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಲ್ಲಿ ವಿಶೇಷ ಬಗೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
– ಡಾ| ಗಣನಾಥ ಎಕ್ಕಾರು, ಪ್ರಾಂಶುಪಾಲರು, ಲೀಡ್‌ ಕಾಲೇಜು, ಸ. ಪ್ರ.ದ. ಕಾಲೇಜು, ತೆಂಕನಿಡಿಯೂರು.

Advertisement

Udayavani is now on Telegram. Click here to join our channel and stay updated with the latest news.

Next