Advertisement

ಬೆಂಗಳೂರು ಭವಿಷ್ಯಕ್ಕೆ ಹೊಸ ದೃಷ್ಟಿ

11:47 AM Nov 04, 2018 | |

ಬೆಂಗಳೂರು: ಭವಿಷ್ಯತ್ತಿನ ಬೆಂಗಳೂರು ದೃಷ್ಟಿಯಿಂದ “ವಿಷನ್‌ ಬೆಂಗಳೂರು -2050’ಯೋಜನೆ ಸಿದ್ಧಪಡಿಸಲು ತೀರ್ಮಾನಿಸಲಾಗಿದ್ದು ದೊಡ್ಡಬಳ್ಳಾಪುರ, ಹೊಸಕೋಟೆ,ಅನೇಕಲ್‌,ರಾಮನಗರ, ದಾಬಸ್‌ಪೇಟೆ ವ್ಯಾಪ್ತಿಯ ಪ್ರದೇಶಗಳಿಗೆ ರಿಂಗ್‌ ರಸ್ತೆ ಮೂಲಕ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

Advertisement

ಶನಿವಾರ ಬಿಡಿಎ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರು ಹಾಗೂ ಸಂಚಾರ ದಟ್ಟಣೆಯನ್ನು ಪ್ರಮುಖವಾಗಿರಿಸಿಕೊಂಡು “ವಿಷನ್‌ ಬೆಂಗಳೂರು -2050′ ಯೋಜನೆ ಸಿದ್ದಪಡಿಸಲಾಗುವುದು ಎಂದು ತಿಳಿಸಿದರು.

ಈ ಸಂಬಂಧ ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಬೆಂಗಳೂರು ಮಹಾನಗರ ಪ್ರಾದೇಶಾಭಿವೃದ್ದಿ ಪ್ರಾಧಿಕಾರದ (ಬಿಎಂಆರ್‌ಡಿ) ಮೂಲಕ ಯೋಜನೆ ಅನುಷ್ಠಾನಗೊಳಿಸಲಾಗುವುದು.ಪೆರಿಫೆರಲ್‌ ರಿಂಗ್‌ (ಪಿಪಿಆರ್‌) ರಸ್ತೆ ಮೂಲಕ ಈ ಭಾಗಗಳಿಗೆ ಸಂಪರ್ಕ ಕಲ್ಪಿಸಿ ಅಲ್ಲಿಯೇ ಟೌನ್‌ಶಿಪ್‌ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು,

ಇದರಿಂದಾಗಿ ಜನರು ಬೆಂಗಳೂರು ನಗರವನ್ನು ಹೆಚ್ಚು ಅವಲಂಬನೆ ಮಾಡುವುದು ಕಡಿಮೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ “2031ರ ಮಾಸ್ಟರ್‌ ಪ್ಲಾನ್‌’ ಸಿದ್ಧಪಡಿಸಲಾಗಿತ್ತು. ಇದೇ ಯೋಜನೆಯನ್ನು ಪರಿಷ್ಕರಿಸಿ ಈಗ “ವಿಷನ್‌ ಬೆಂಗಳೂರು 2050′ ಮಾಡಲು ನಿರ್ಧರಿಸಲಾಗಿದ್ದು, ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಹೇಳಿದರು.

ಬಿಡಿಎ ಆಸ್ತಿಗಳ ಸರ್ವೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಸಿ ¤-ಕಟ್ಟಡಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕುವ ಹಿನ್ನೆಲೆಯಲ್ಲಿ  “ಭೂ ಸರ್ವೆ’ ಕಾರ್ಯಕ್ಕೆ ಯೋಜನೆ ರೂಪಿಸಲಾಗಿದೆ.ಸದ್ಯದಲ್ಲೆ ಟೆಂಡರ್‌ ಪ್ರಕ್ರಿಯೆ ಮುಗಿಯಲಿದ್ದು ಇದಾದ ಬಳಿಕ ಮೂರು ತಿಂಗಳೊಳಗೆ ಸಮೀಕ್ಷೆ ಕಾರ್ಯ ಮುಗಿಯಲಿದೆ. ಆ ನಂತರ ಬಿಡಿಎ ವ್ಯಾಪ್ತಿಯಲ್ಲಿ ಎಷ್ಟು ಎಕರೆ ಭೂಮಿ ಇದೆ ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿಸಿದರು.

Advertisement

ಶಿವರಾಂ ಕಾರಂತ್‌ಬಡಾವಣೆಯ ಸಂಬಂಧ ಸುಪ್ರೀಂ ಕೋರ್ಟ್‌ ಡಿನೋಟಿಫಿಕೇಶನ್‌ ಮಾಡಿ ಮೂರು ತಿಂಗಳ ಒಳಗೆ ನಿವೇಶನ ಹಂಚಿಕೆ ಮಾಡುವಂತೆ ಬಿಡಿಎಗೆ ಸೂಚಿಸಿದೆ.ಒಟ್ಟು 3,546 ಎಕರೆ ಭೂಮಿ ಇದ್ದು, ಇದರಲ್ಲಿ 800 ಎಕರೆ ಬಿಡಿಎಗೆ ಸಂದಾಯವಾಗಿದೆ.ಉಳಿದ ಜಾಗವನ್ನು ಗುರುತು ಮಾಡಿ ಈಗಿನ ಮಾರುಕಟ್ಟೆ ಬೆಲೆಯ ಆಧಾರದ ಮೇಲೆ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ರಿಂಗ್‌ರಸ್ತೆ ಬಗ್ಗೆ ಗೊಂದಲ ಬೇಡ: ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣ ಮಾಡುವುದರ ಬಗ್ಗೆ ಯಾವುದೇ ಗೊಂದಲ ಬೇಡ.65 ಕಿ.ಮೀ.ರಸ್ತೆ ನಿರ್ಮಾಣಕ್ಕೆ 17 ಸಾವಿರ ಕೋಟಿ ರೂ.ವೆಚ್ಚ ವಾಗಲಿದ್ದು,ಭೂ ಸ್ವಾದೀನಕ್ಕೆ 6,200 ಕೋಟಿ ರೂ.ಇರಿಸಲಾಗಿದೆ. ಎಂಟು ಪಥದ ರಸ್ತೆಯ ಮಧ್ಯ ಭಾಗದಲ್ಲಿ ಮೆಟ್ರೋ ರಸ್ತೆ ಹಾದು ಹೋಗಲಿದ್ದು, ಈ ಬಗ್ಗೆ ಶೀಘ್ರದಲ್ಲೆ ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗುವುದು ಎಂದರು.

ಕೆಂಪೇಗೌಡ ಬಡಾವಣೆಯಲ್ಲಿ 5 ಸಾವಿರ ನಿವೇಶನಗಳ ಪೈಕಿ 4,971ನಿವೇಶನಗಳಿಗೆ ಹಕ್ಕು ಪತ್ರ ನೀಡಲಾಗಿದೆ. ನಿವೇಶ ಹಂಚಿಕೆದಾರರಿಗೆ ಹಣ ಕಟ್ಟಲು 3 ತಿಂಗಳು ಅವಕಾಶ ಕಲ್ಪಿಸಲಾಗಿದ್ದು, ಮತ್ತೂಂದು ತಿಂಗಳು ಹೆಚ್ಚುವರಿ ಕಲಾವಕಾಶ ನೀಡುವಂತೆ ನಿವೇಶನ ಹಂಚಿಕೆದಾರರು ಬಿಡಿಎಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಿಡಿಎಗೆ ಆರ್ಥಿಕ ನಷ್ಟ: ಅರ್ಕಾವತಿ ಬಡಾವಣೆಯಲ್ಲಿನ 3,600 ಮಂದಿ ಪರ್ಯಾಯ ನಿವೇಶನ ಕೇಳಿದ್ದು, ಅವರಿಗೆ ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ. ಇದರಿಂದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟವಾಗಲಿದೆ ಎಂದರು. 

ಬಿಡಿಎ ನಿರ್ಮಿಸಿದ ಬಹುತೇಕ ನಿವೇಶನಗಳು ಮಾರಾಟವಾಗಿದ್ದು, ಮೈಸೂರು ರಸ್ತೆ ಬಳಿ ನಿರ್ಮಿಸಲಾಗಿರುವ ನಿವೇಶನಗಳನ್ನು ಪೋಲಿಸ್‌ ಇಲಾಖೆಗೆ ನೀಡಲಾಗುವುದು.ಈ ಬಗ್ಗೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.  ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಡಿಎ ಭವನ ನಿರ್ಮಾಣ: ಬಿಡಿಎಗೆ ಸಂಬಂಧಿಸಿದ ದಾಖಲೆಗಳ ಡಿಜಿಟಲೀಕರಣ ಕಾರ್ಯ ಸಂಪೂರ್ಣಗೊಂಡಿದ್ದು ಹಳೆಯ ಕಡತಗಳು ಕಟ್ಟಡದೊಳಗೆ ಹಾಗೇ ಇವೆ.ಸಣ್ಣ ಕಟ್ಟಡ ಇದಾಗಿರುವುದರಿಂದ ಹೆಚ್ಚು ಸುರಕ್ಷಿತವಿಲ್ಲ.ಈ ದೃಷ್ಟಿಯಿಂದ ಬಿಡಿಎ ಭವನ ನಿರ್ಮಾಣದ ಚಿಂತನೆ ಮಾಡಿದ್ದು, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.

ದೂರು ಕೊಟ್ಟರೆ ಕ್ರಮ: ನಿವೇಶನದ ನಕಾಶೆ ಸೇರಿದಂತೆ ಇನ್ನಿತರ ಮೂಲ ದಾಖಲಾತಿ ನೀಡಲು ಬೆಂಗಳೂರು ಅಭಿವೃದ್ದಿಪ್ರಾಧಿಕಾರದ ಅಧಿಕಾರಿಗಳು ಗ್ರಾಹಕರಿಂದ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್‌, ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈಗಿನ ಆಯುಕ್ತರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು,ಬದಲಾವಣೆ  ಅವಶ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next