Advertisement

Politics: ಬಿಜೆಪಿ, ಜೆಡಿಎಸ್‌ನಲ್ಲಿ ಹೊಸ ಹುರುಪು

12:19 PM Jun 23, 2024 | Team Udayavani |

ಬೆಂಗಳೂರು: ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್‌ನ‌ ಹೊರಗೆ ಎಲ್ಲೆಲ್ಲೂ ಬಿಜೆಪಿ ಬಾವುಟ, ಘಟಾನುಘಟಿ ನಾಯಕರ ಭಾವಚಿತ್ರಗಳು ರಾರಾಜಿಸಿದರೆ, ನವವಧುವಿನಂತೆ ಸಿಂಗಾರಗೊಂಡಿದ್ದ ಸಭಾಮಂಟಪಕ್ಕೆ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಹೊಸ ಹುರುಪಿನೊಂದಿಗೆ ಆಗಮಿಸಿದ್ದರು. ಒಟ್ಟಾರೆ ಈ ಸಮಾರಂಭದಲ್ಲಿ ಸಂಭ್ರಮದ ಜತೆಗೆ ಒಗ್ಗಟ್ಟಿನ ಪ್ರದರ್ಶನವನ್ನೂ ಮಾಡಿ ಸಂದೇಶವನ್ನು ರವಾನೆ ಮಾಡಿದಂತಾಗಿದೆ.

Advertisement

ವೇದಿಕೆಯ ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಎತ್ತರದ ಕಟೌಟ್‌ ಇದ್ದರೆ, ಇನ್ನೊಂದು ಬದಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಅಷ್ಟೇ ಎತ್ತರದ ಕಟೌಟ್‌ ರಾರಾಜಿಸುತ್ತಿತ್ತು. ಮೇಲ್ಭಾಗದಲ್ಲಿ ಒಂದೆಡೆ ಬಿಜೆಪಿಯ ಲಾಂಛನ, ಮತ್ತೂಂದೆಡೆ ಜೆಡಿಎಸ್‌ ಲಾಂಭನಗಳೂ ಇದ್ದವು. ಮಧ್ಯದಲ್ಲಿ 19 ಸಂಸದರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ವೇದಿಕೆಯಲ್ಲಿದ್ದ ನಾಯಕರೂ ಕೇಸರಿ ಮತ್ತು ಹಸಿರು ಮಿಶ್ರಿತವಾದ ಶಾಲು ಹೊದ್ದು “ಮೈತ್ರಿ’ಯ ಶಕ್ತಿ ಪ್ರದರ್ಶನ ಮಾಡಿದರು.

ವಂದೇ ಮಾತರಂ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಲಾಯಿತಲ್ಲದೆ, ಭಾರತಮಾತೆ, ಶ್ಯಾಮಾಪ್ರಸಾದ್‌ ಮುಖರ್ಜಿ ಹಾಗೂ ದೀನದಯಾಳ್‌ ಉಪಾಧ್ಯಾಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಇತ್ತೀಚೆಗೆ ಅಗಲಿದ ಬಿಜೆಪಿ ಮುಖಂಡ ಭಾನುಪ್ರಕಾಶ್‌ ಅವರಿಗೆ ಶ್ರದ್ಧಾಂಜಲಿಯನ್ನೂ ಅರ್ಪಿಸಲಾಯಿತು.

ಪ್ರತಿಯೊಬ್ಬ ನಾಯಕರು ವೇದಿಕೆ ಆಗಮಿಸುವಾಗ ಕಾರ್ಯಕರ್ತರು, ಶಿಳ್ಳೆ-ಚಪ್ಪಾಳೆಗಳ ಮೂಲಕ ಸಂಭ್ರಮಿಸಿದರು. ಅದರಲ್ಲೂ ಕಾರ್ಯಕ್ರಮ ಆರಂಭವಾದ ನಂತರ ಆಗಮಿಸಿದ ಕೇಂದ್ರ ಸಚಿವರಾದ ವಿ.ಸೋಮಣ್ಣ ಹಾಗೂ ಎಚ್‌.ಡಿ. ಕುಮಾರಸ್ವಾಮಿ, ಸಂಸದ ಡಾ.ಸಿ.ಎನ್‌. ಮಂಜುನಾಥ್‌ ಅವರಿಗಂತೂ ಚಪ್ಪಾಳೆ, ಜೈಕಾರಗಳ ಸುರಿಮಳೆಯೇ ಬಿತ್ತು.

ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದ ನಾಯಕರು:

Advertisement

ಇಡೀ ಕಾರ್ಯಕ್ರಮದ ತುಂಬಾ ಒಗ್ಗಟ್ಟಿನ ಮಂತ್ರ ಪಠಿ ಸಿದ ಬಿಜೆಪಿ-ಜೆಡಿಎಸ್‌ ನಾಯಕರು, ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದಟಛಿವೂ ಮುಗಿಬಿದ್ದರು. ಮುದ್ರಾಂಕ, ನೋಂದಣಿ ಶುಲ್ಕು, ವಿದ್ಯುತ್‌ ದರ, ಹಾಲಿನ ದರ, ಮದ್ಯದ ಬೆಲೆ ಹೆಚ್ಚಿಸಿದ ಸರ್ಕಾರ, ಇದೀಗ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಸಿದೆ. ಇದು ಬಡವರ ವಿರೋಧಿ ಸರ್ಕಾರ ಎಂದು ಜರಿದರಲ್ಲದೆ, ಗ್ಯಾರಂಟಿ ನೆಪದಲ್ಲಿ ಬೆಲೆ ಏರಿಕೆಗೆ ಖಂಡನೆ ವ್ಯಕ್ತಪಡಿಸಿದರು.

ಜಂಟಿ ಹೋರಾಟಕ್ಕೆ ತಯಾರಾಗೋಣ

ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ ಯಲ್ಲೂ ಬಿಜೆಪಿ-ಜೆಡಿಎಸ್‌ಗೆ ಲೋಕಸಭೆಯಂತೆ ಬಹುಮತ ಕೊಡಬೇಕು. ಈಗಿನಿಂದಲೇ ಮೈತ್ರಿ ಹೋರಾಟಕ್ಕೆ ತಯಾರಾಗೋಣ. ಬೆಲೆ ಏರಿಕೆ ಯುಗ ಆರಂಭಿಸಿದ್ದಾರೆ. ಇದರ ವಿರುದ್ಧ ಜಂಟಿ ಹೋರಾಟ ಮಾಡೋಣ. – ಆರ್‌.ಅಶೋಕ್‌, ವಿಧಾನಸಭೆ ವಿಪಕ್ಷ ನಾಯಕ

ಪಂಚಾಯಿತಿ ಎಲೆಕ್ಷನ್ನ‌ಲ್ಲಿ ನಮ್ಮ ಶಕ್ತಿ ತೋರಿಸೋಣ

ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಂಸದರನ್ನು ಆಯ್ಕೆ ಮಾಡಿ ಕೊಡುಗೆ ಕೊಟ್ಟ ಎರಡೂ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ. ಜೆಡಿಎಸ್‌ ಜತೆ ಒಂದಾಗಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಿ ನಮ್ಮ ಶಕ್ತಿ ತೋರಿಸೋಣ. – ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಗ್ಯಾರಂಟಿಯೇ ಬೆಲೆ ಏರಿಕೆ ಮೂಲ

ಆಸೆಯೇ ದುಃಖಕ್ಕೆ ಮೂಲ ಎಂದು ಆ ಬುದ್ಧ ಸಂದೇಶ ನೀಡಿದರೆ, ಗ್ಯಾರಂಟಿಯೇ ಬೆಲೆ ಏರಿಕೆಯ ಮೂಲ ಎಂದು ನಮ್ಮ ಸಿದ್ದ ಸಂದೇಶ ಕೊಟ್ಟಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ನ್ನು ತಿರಸ್ಕರಿಸಬೇಕು. ನಾಡಿನ ಜನತೆಯ ಋಣ ತೀರಿಸಲು ಸಿದ್ಧರಿದ್ದೇವೆ. -ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ಗೆಲುವಿನಲ್ಲಿ ಜೆಡಿಎಸ್‌ ಕೊಡುಗೆಯೂ ಇದೆ

ರಾಜ್ಯದಲ್ಲಿ 19 ಸ್ಥಾನ ಗೆಲ್ಲುವಲ್ಲಿ ಬಿಜೆಪಿ ಕೊಡುಗೆ ಎಷ್ಟಿದೆಯೋ ಜೆಡಿಎಸ್‌ ಕೊಡುಗೆ ಕೂಡ ಅಷ್ಟೇ ಇದೆ. ನಮ್ಮಪ್ಪನಾಣೆ ಈ ಸರ್ಕಾರ ಬಿಬಿಎಂಪಿ ಚುನಾವಣೆಯನ್ನಂತೂ ಮಾಡುವುದಿಲ್ಲ. ಪಂಚಾಯಿತಿ ಚುನಾವಣೆಯಲ್ಲಿ ಕಾಯ, ವಾಚಾ, ಮನಸಾ ಒಟ್ಟಾಗಿ ಕೆಲಸ ಮಾಡೋಣ. – ವಿ.ಸೋಮಣ್ಣ, ಕೇಂದ್ರ ಸಚಿವ

ಸಿಎಂ, ಡಿಸಿಎಂ ಧೂರ್ತ ರಾಜಕಾರಣಿಗಳು

ವಾಲ್ಮೀಕಿ ನಿಗಮದ ನೂರಾರು ಕೋಟಿ ರೂ.ಗಳನ್ನು ತೆಲಂಗಾಣಕ್ಕೆ ಕಳುಹಿಸಿ ಸಚಿವರ ರಾಜೀನಾಮೆ ಕೊಡಿಸಿದ್ದಾರೆ. ಸಿಎಂ, ಡಿಸಿಎಂಗೆ ಮಾನ ಮರ್ಯಾದೆ ಇದೆಯೇ? ಇವರೆಂತಹ ಧೂರ್ತ ರಾಜಕಾರಣಿಗಳು? ಈ ಜನವಿರೋಧಿ ಸರ್ಕಾರವನ್ನು ಕಿತ್ತೆಸೆಯಲು ಜನ ಸಿದ್ಧರಿದ್ದಾರೆ. ನಾವು ದಾರಿ ತೋರಬೇಕು. -ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

ಕಡಿಮೆ ಸ್ಥಾನ ಕಾಂಗ್ರೆಸ್‌ನ ನೈತಿಕ ಸೋಲು

ಕೇಂದ್ರದಲ್ಲಿ ಅತ್ಯಂತ ಪ್ರಬಲ ಸರ್ಕಾರವಿದೆ. ಪ್ರಪಂಚದ ಮೂರನೇ ಶಕ್ತಿಶಾಲಿ ಆರ್ಥಿಕತೆಯನ್ನು ಭಾರತ ಸಾಧಿಸಲಿದೆ. ಲೋಕಸಭೆಯಲ್ಲಿ ಕಡಿಮೆ ಸ್ಥಾನ ಪಡೆದಿರುವುದು ಕಾಂಗ್ರೆಸ್‌ನ ನೈತಿಕ ಸೋಲು. ಕಾರ್ಯಕರ್ತರು ಇದೇ ಉತ್ಸಾಹದಿಂದ ಕೆಲಸ ಮಾಡಬೇಕು. -ಸುಧಾಕರರೆಡ್ಡಿ, ಬಿಜೆಪಿ ಸಹ ಉಸ್ತುವಾರಿ

ಈಶ್ವರಪ್ಪ ಕರೆ ತರುವುದು ಗೊತ್ತಿಲ್ಲ

ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಈಗಷ್ಟೇ ಗೆದ್ದಿದ್ದೇನೆ, ಇನ್ನೂ ಪ್ರಮಾಣವಚನ ಕೂಡ ಸ್ವೀಕರಿಸಿಲ್ಲ. ಈಶ್ವರಪ್ಪರನ್ನು ಕರೆತರುವಂತಹ ದೊಡ್ಡ ವಿಚಾರಗಳು ದೊಡ್ಡವರ ಸಮ್ಮುಖದಲ್ಲಿ ಚರ್ಚೆ ಆಗುವಂತಹದ್ದು. ನನ್ನ ಗಮನಕ್ಕೆ ಬಂದಿಲ್ಲ. -ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ

ನಿರ್ಮಲಾ, ಜಿಗಜಿಣಗಿ ಗೈರು

ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ, ಎಚ್‌.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಸಂಸದರಾದ ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಬ್ರಿಜೇಶ್‌ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಪಿ.ಸಿ. ಮೋಹನ್‌, ತೇಜಸ್ವಿ ಸೂರ್ಯ, ಡಾ.ಸಿ.ಎನ್‌.ಮಂಜುನಾಥ್‌, ಯದುವೀರ್‌ ಒಡೆಯರ್‌, ಪಿ.ಸಿ. ಗದ್ದಿಗೌಡರ್‌, ಡಾ.ಕೆ. ಸುಧಾಕರ್‌, ಬಿ.ವೈ. ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಗೋವಿಂದ ಕಾರಜೋಳ, ಮಲ್ಲೇಶ್‌ ಬಾಬು ಅವರಿಗೆ ಅಭಿನಂದಿಸಲಾಯಿತು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ ಗೈರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next