Advertisement

ಹೊಸ ನೋಟದ ಕಲಾಕೃತಿಗಳು

06:00 AM Nov 23, 2018 | |

ಉಪ್ಪುಂದದ ಸೃಜನಶೀಲ ಕಲಾವಿದ ಯು. ಮಂಜುನಾಥ ಮಯ್ಯ ಸದಾ ಹೊಸತನದ ಹುಡುಕಾಟದಲ್ಲಿರುವವರು. ಇವರು ” ಮೈ ರೀಸೆಂಟ್‌ ಪೈಂಟಿಂಗ್ಸ್‌’ ಎನ್ನುವ ಶೀರ್ಷಿಕೆಯೊಂದಿಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಆಕ್ರಲಿಕ್‌ ಮಾಧ್ಯಮದ ಕಲಾಕೃತಿಗಳನ್ನು ರಚಿಸಿ ಉತ್ತಮ ಚೌಕಟ್ಟಿನೊಂದಿಗೆ ಕುಂದಾಪುರದ ಸಾಧನಾ ಕಲಾ ಸಂಗಮದ ಮೋಹನ ಮುರಳಿ ಕಲಾ ಗ್ಯಾಲರಿಯಲ್ಲಿ ಒಂದು ವಾರಗಳ ಕಾಲ ಪ್ರದರ್ಶಿಸಿದ್ದರು. ಈ ಬಾರಿ ಅವರು ಆಯ್ಕೆ ಮಾಡಿದ್ದು ಕಲ್ಲು ಬಂಡೆಗಳ ವಿಭಿನ್ನ ನೋಟಗಳನ್ನು. ವಿವಿಧ ವರ್ಣಗಳ ಬಂಡೆಗಳಿಗೆ ಮೆತ್ತಿಕೊಂಡಿರುವ ಪಾಚಿಗಳು, ಅಂಟಿಕೊಂಡಿರುವ ಶಂಖ ಚಿಪ್ಪುಗಳು, ಬಂಡೆಗಳ ಓರೆ ಕೋರೆ ರೇಖಾ ವಿನ್ಯಾಸಗಳು ಮತ್ತು ಮೇಲಿನ ಮೈವಳಿಕೆಗಳ ಜೊತೆಗೆ ಆಯಾಯ ಪರಿಸರದ ವರ್ಣ ವೈವಿಧ್ಯತೆ ಹಾಗೂ ನೆರಳು ಬೆಳಕಿನ ವಿನ್ಯಾಸದೊಂದಿಗೆ ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸಿದ್ದರು. ಎಲ್ಲಾ ಕೃತಿಗಳ ಮುಖ್ಯ ವಿಷಯ ಒಂದೇ ಆದರೂ ಕೃತಿಯಿಂದ ಕೃತಿಯು ತೀರ ಭಿನ್ನವಾಗಿದ್ದು, ನೋಡುತ್ತಾ ಸಾಗಿದಂತೆ ಮನಸ್ಸನ್ನು ಬಹಳಷ್ಟು ಸೆಳೆಯುತ್ತದೆ. ಕೆಲವರು ಈ ಕಲಾಕೃತಿಗಳಲ್ಲಿ ಮಾನವಾಕೃತಿಗಳನ್ನೋ, ಪ್ರಾಣಿ ಪಕ್ಷಿಗಳನ್ನೋ ಅಥವಾ ಇನ್ನಿತರ ಆಕೃತಿಗಳನ್ನೋ ಹುಡುಕುವ ಪ್ರಯತ್ನದಲ್ಲಿರುತ್ತಾರೆ. ಕಾಣಲು ಒರಟಾದ ಬಂಡೆಗಳನ್ನೂ ಸುಂದರ ಕಲಾಕೃತಿಯನ್ನಾಗಿಸಿ ಆ ಮೂಲಕ ವೀಕ್ಷಕರ ಮನದಲ್ಲೂ ಮಧುರ ಭಾವನೆಗಳನ್ನು ಅರಳಿಸಿದ ಮಯ್ಯರ ಈ ಹೊಸ ನೋಟ ಮೆಚ್ಚುವಂತಹುದು. ಸಂಗೀತದಲ್ಲಿನ ಶ್ರುತಿ, ಲಯ, ತಾಳ ಮುಂತಾದವುಗಳು ಒಟ್ಟಾಗಿ ಹೇಗೆ ನಮ್ಮ ಮನದ ಮೇಲೆ ಪ್ರಭಾವ ಬೀರಿ ಖುಷಿ ನೀಡುತ್ತದೋ, ಅದೇ ರೀತಿ ಇಂತಹ ಕಲಾಕೃತಿಗಳನ್ನು ಸೂಕ್ಷ್ಮವಾಗಿ ಅನುಭವಿಸಿದಾಗ ಅದೇ ತೆರನ ಖುಷಿ ನೀಡುತ್ತದೆ ಎನ್ನುತ್ತಾರೆ ಮಯ್ಯರು. 

Advertisement

 ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next