Advertisement

ಶೀಘ್ರವೇ ಕಾರ್ಡ್‌ರಹಿತ ಎಟಿಎಂ ನಗದು ವಿತ್‌ಡ್ರಾ ಸಾಧ್ಯ

01:45 AM Apr 09, 2022 | Team Udayavani |

ಮುಂಬಯಿ: ಇನ್ನು ಮುಂದೆ ಎಟಿಎಂಗಳಿಂದ ಹಣ ವಿತ್‌ಡ್ರಾ ಮಾಡಲು ಡೆಬಿಟ್‌ ಕಾರ್ಡ್‌ ಅಗತ್ಯವಿರದು. ಯುಪಿಐ ಐಡಿ ಬಳಸಿ ಎಲ್ಲ ಬ್ಯಾಂಕ್‌ಗಳ ಎಟಿಎಂ ಜಾಲಗಳಿಂದ ಕಾರ್ಡ್‌ರಹಿತವಾಗಿ ಹಣ ಪಡೆಯುವ ವ್ಯವಸ್ಥೆ ಜಾರಿಯಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ.

Advertisement

ಶುಕ್ರವಾರ ದ್ವೈ ಮಾಸಿಕ ಹಣಕಾಸು ನೀತಿ ಪರಾಮರ್ಶೆಯ ವಿವರಗಳನ್ನು ಘೋಷಿಸಿ ಮಾತನಾಡಿದ ಅವರು, “ದೇಶಾದ್ಯಂತ ಎಟಿಎಂ ನೆಟ್‌ವರ್ಕ್‌ಗಳಲ್ಲಿ ಕಾರ್ಡ್‌ರಹಿತ ನಗದು ವಿತ್‌ಡ್ರಾ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ವಹಿವಾಟು ಸರಳಗೊಳ್ಳುವುದು. ಜತೆಗೆ ಕಾರ್ಡ್‌ ಸ್ಕಿಮ್ಮಿಂಗ್‌, ಕ್ಲೋನಿಂಗ್‌ ಮುಂತಾದ ವಂಚನೆಯನ್ನೂ ತಪ್ಪಿಸಬಹುದು. ಸದ್ಯದಲ್ಲೇ ಈ ಕುರಿತು ಎನ್‌ಪಿಸಿಐ, ಎಟಿಎಂ ಜಾಲಗಳು ಮತ್ತು ಬ್ಯಾಂಕ್‌ಗಳಿಗೆ ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗುವುದು’ ಎಂದು ಹೇಳಿದ್ದಾರೆ.

ಹೇಗೆ ಕೆಲಸ ಮಾಡುತ್ತದೆ?
ಪ್ರಸ್ತುತ ಕೆಲವೇ ಕೆಲವು ಬ್ಯಾಂಕುಗಳು ಕಾರ್ಡ್‌ಲೆಸ್‌ ಕ್ಯಾಶ್‌ ವಿತ್‌ಡ್ರಾವಲ್‌ ಸೌಲಭ್ಯವನ್ನು ಒದಗಿಸುತ್ತಿವೆ. ಅದರಂತೆ, ಗ್ರಾಹಕರು ಎಟಿಎಂ ಕೇಂದ್ರಕ್ಕೆ ಹೋಗುವಾಗ ಕಾರ್ಡ್‌ ಒಯ್ಯಬೇಕಾಗಿಲ್ಲ. ತಮ್ಮ ಮೊಬೈಲ್‌ನಲ್ಲಿ ಭೀಮ್‌, ಪೇಟಿಎಂ, ಜಿಪೇ ಮುಂತಾದ ಯುಪಿಐ ಆ್ಯಪ್‌ ಗಳಿದ್ದರೆ ಸಾಕು. ಗ್ರಾಹಕನು ಮೊದಲು ಎಟಿಎಂ ಯಂತ್ರದಲ್ಲಿ ಮೂಡುವ ಕ್ಯು ಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಬೇಕ. ಅನಂತರ ತನ್ನ ಮೊಬೈಲ್‌ನಲ್ಲಿ ಮೊತ್ತವನ್ನು ದೃಢಪಡಿಸಿದರೆ ನಗದು ಹೊರಬರುತ್ತದೆ.

ಇದನ್ನೂ ಓದಿ:ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ 31 ವರ್ಷಗಳ ಜೈಲು ಶಿಕ್ಷೆ

ಎಲ್‌ಟಿವಿ ನಿಯಮ ವಿಸ್ತರಣೆ:
ರಿಯಲ್‌ ಎಸ್ಟೇಟ್‌ಗೆ ಪೂರಕ
ಗೃಹ ಸಾಲವನ್ನು ಅಗ್ಗವಾಗಿಸುವ ಉದ್ದೇಶದಿಂದ, ಆರ್‌ಬಿಐ ಲೋನ್‌ ಟು ವ್ಯಾಲ್ಯೂ(ಎಲ್‌ಟಿವಿ) ನಿಯಮದ ವಿನಾಯಿತಿಯನ್ನು 2023ರ ಮಾ.31ರವರೆಗೆ ಮುಂದುವರಿಸಲು ನಿರ್ಧರಿಸಿದೆ. ಹೀಗಾಗಿ ಆಸ್ತಿಯ ಒಟ್ಟು ಮೌಲ್ಯದ ಶೇ.80ಕ್ಕೂ ಹೆಚ್ಚು ಮೊತ್ತದ ಸಾಲ ಸಿಗುವ ವ್ಯವಸ್ಥೆ ಇನ್ನೊಂದು ವರ್ಷ ಮುಂದುವರಿಯಲಿದೆ. 2020ರ ಅಕ್ಟೋಬರ್‌ನಲ್ಲಿ ಈ ನಿಯಮ ಜಾರಿಯಾಗಿತ್ತು. ಇದರಿಂದ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗುವ ನಿರೀಕ್ಷೆ ಇದೆ. ಇದೇ ವೇಳೆ, ರೆಪೋ ದರ ಶೇ.4ರಲ್ಲೇ ಮುಂದುವರಿದಿರುವ ಕಾರಣ ಗೃಹ ಸಾಲ ಪಡೆದವರು ಪಾವತಿಸುವ ಬಡ್ಡಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Advertisement

ಪ್ರಮುಖಾಂಶಗಳು
– ಸತತ 11ನೇ ಬಾರಿಗೆ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧಾರ.
– ಪ್ರಸ್ತುತ ವಿತ್ತ ವರ್ಷದ ಆರ್ಥಿಕ ಪ್ರಗತಿ ದರದ ಅಂದಾಜು ಶೇ.7.8ರಿಂದ ಶೇ.7.2ಕ್ಕಿಳಿಕೆ. ಉಕ್ರೇನ್‌-ರಷ್ಯಾ ಯುದ್ಧ, ತೈಲ ದರ ಏರಿಕೆ, ಪೂರೈಕೆ ಸರಪಳಿ ವ್ಯತ್ಯಯ ಹಿನ್ನೆಲೆ ಈ ಕ್ರಮ
– ಈ ವರ್ಷದ ಹಣದುಬ್ಬರದ ಅಂದಾಜು ಶೇ.5.7ಕ್ಕೇರಿಕೆ. ಈ ಹಿಂದೆ ಶೇ.4.5 ಎಂದು ಅಂದಾಜಿಸಲಾಗಿತ್ತು
– ರಷ್ಯಾದ ರೂಬಲ್‌ ಮತ್ತು ಭಾರತದ ರೂಪಾಯಿ ನಡುವೆ ಪಾವತಿ ವ್ಯವಸ್ಥೆ ಜಾರಿ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next