ಬೆಂಗಳೂರು: ದಿಲ್ಲಿಯ ಪರಿಸ್ಥಿತಿ ಬೆಂಗಳೂರಿಗೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಹೊಸ ವಾಹನಗಳ ನೋಂದಣಿ ರದ್ದುಪಡಿ ಸಲು ಸರಕಾರ ಚಿಂತನೆ ನಡೆಸಿದೆ. ಶುಕ್ರವಾರ ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಸುದ್ದಿಗೋಷ್ಠಿ ನಡೆಸಿ, ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಮುಂದಿನ 2-3 ವರ್ಷ ಹೊಸ ವಾಹನಗಳ ನೋಂದಣಿ ರದ್ದುಪಡಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಈಗಾಗಲೇ 74 ಲಕ್ಷ ಮೀರಿದ್ದು, ನಿತ್ಯ ಸಾವಿರಾರು ವಾಹನ ಗಳು ರಸ್ತೆಗಿಳಿಯುತ್ತಿವೆ. ಅದರಂತೆ ಸಾರಿಗೆ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.