Advertisement

ನಾಳೆಯಿಂದ ವಾಹನ ವಿಮೆ ದುಬಾರಿ

06:00 AM Aug 31, 2018 | |

ಮುಂಬಯಿ: ಮುಂದಿನ ತಿಂಗಳಿನಿಂದ (ಸೆ. 1) ಕಾರು ಮತ್ತು ದ್ವಿಚಕ್ರ ವಾಹನ ಖರೀದಿ ಮಾಡುವವರು ಗಮನಿಸಲೇಬೇಕಾದ ಸುದ್ದಿ ಇದು. ಥರ್ಡ್‌ ಪಾರ್ಟಿ ವಿಮೆ ಮೊತ್ತ ಗಣನೀಯ ಹೆಚ್ಚಾಗಲಿದೆ. ಕಾರುಗಳಿಗೆ ಮೂರು ವರ್ಷ ಮತ್ತು ಬೈಕ್‌ಗಳಿಗೆ 5 ವರ್ಷಗಳ ವಿಮೆ ಮೊತ್ತದಲ್ಲಿ ಶೇ.2.45ರಿಂದ 5.61ರ ವರೆಗೆ ಹೆಚ್ಚಾಗಲಿದೆ. ಆದರೆ ಪ್ರತೀ ವರ್ಷ ವಿಮೆಯ ಮರು ನವೀಕರಣ ಮಾಡುವ ಸಮಸ್ಯೆ ವಾಹನಗಳ ಮಾಲಕರಿಗೆ ಇರುವುದಿಲ್ಲ. ಜೂ.20ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ವಿಮೆಯ ಮೊತ್ತದಲ್ಲಿ ಪರಿಷ್ಕರಣೆ ಆಗಲಿದೆ.

Advertisement

1,500 ಸಿಸಿ ಮೀರಿದ ಕಾರುಗಳಿಗೆ ವಿಮೆ ಮೊತ್ತ 24,305 ರೂ.ಆಗಿದ್ದು, ಸದ್ಯ ಅದು 7,890 ರೂ. ಆಗಿದೆ. 350 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಬೈಕ್‌ಗಳಿಗೆ ಹಾಲಿ 2,323 ರೂ.ಇದ್ದು, ಮುಂದೆ 13,024 ರೂ. ಪಾವತಿ ಮಾಡಬೇಕಾಗುತ್ತದೆ.  ವಾಹನಗಳ ಮಾಡೆಲ್‌ಗ‌ಳನ್ನು ಆಧರಿಸಿ ವಿಮೆಯ ಮೊತ್ತ ಬದಲಾವಣೆಯಾಗಲಿದೆ. ವರ್ಷ ಕಳೆದಂತೆ ವಾಹನಗಳ ಮೌಲ್ಯ ಕಡಿಮೆಯಾಗುವುದರಿಂದ ಮಾಲಕರು ವಿಮೆ ನವೀಕರಣಕ್ಕೆ ಮುಂದಾಗುವುದಿಲ್ಲ ಅಥವಾ ರಿಸ್ಕ್ ಫ್ಯಾಕ್ಟರ್‌ ಇಲ್ಲದ ಪಾಲಿಸಿ ಖರೀದಿ ಮಾಡುತ್ತಾರೆ. ಹೊಸ ಕ್ರಮದಿಂದ ವಾಹನ ವಿಮೆಯು ಎಲ್ಲ ವಾಹನಗಳನ್ನು ಒಳಗೊಳ್ಳುವಂತಾಗುತ್ತದೆ ಎಂದು ವಾಹನೋದ್ಯಮ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರಕಾರ ಅಪಘಾತಗಳಿಂದ ಉಂಟಾದ ಸಾವು ನೋವಿನ ಬಗ್ಗೆ ಸಿದ್ಧಪಡಿಸಿದ ವರದಿಯ ಪ್ರಕಾರ ಪ್ರತಿದಿನ 1,374 ಅಪಘಾತಗಳು ಉಂಟಾಗಿ, 400 ಮಂದಿ ಅಸುನೀಗುತ್ತಿದ್ದಾರೆ. ಅಪಘಾತಗಳಿಗೆ ಸಂಬಂಧಿಸಿದ ಕ್ಲೇಮ್‌ಗಳು ತಪ್ಪಾಗಿದ್ದರೆ ಸಿಗುವ ವಿಮಾ ಮೊತ್ತ ಕಡಿಮೆಯಾಗುತ್ತದೆ. ಸೆ.1ರಿಂದ ವಿಮಾ ಕಂಪೆನಿಗಳು ದೀರ್ಘಾವಧಿಯ ವಾಹನ ವಿಮೆ ಪಾಲಿಸಿ ನೀಡುವಂತೆ ಸೂಚನೆ ನೀಡಲಾಗಿದೆ. ಹೊಸ ಕಾರುಗಳಿಗೆ 3 ವರ್ಷ ಮತ್ತು ಹೊಸ ಬೈಕ್‌ಗಳಿಗೆ 5ವರ್ಷದ ಅವಧಿಗೆ ವಿಮಾ ಮೊತ್ತ ಸಂಗ್ರಹಿಸುವ ಬಗ್ಗೆ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ ವಿಮಾ ಕಂಪೆನಿಗಳಿಗೆ ಸೂಚಿಸಿದೆ. ಸ್ವಂತ ಅಪಘಾತದಿಂದ ಉಂಟಾದ ಹಾನಿ ಮತ್ತು ಇತರರಿಂದ ಉಂಟಾದ (ಥರ್ಡ್‌ ಪಾರ್ಟಿ) ಅಥವಾ ಎರಡೂ ವಿಚಾರ ಸೇರಿರುವ ವಿಮೆ ಒದಗಿಸುವಂತೆ ಸೂಚಿಸಿದೆ. ವಿಮೆ ಹೊಂದಿರುವ ವ್ಯಕ್ತಿ ವಿಮಾ ಅವಧಿಯಲ್ಲಿ ಥರ್ಡ್‌ ಪಾರ್ಟಿ ವಿಚಾರವನ್ನು ರದ್ದು ಮಾಡಲು ಸಾಧ್ಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next