ಬೆಂಗಳೂರು: ಪಶ್ಚಿಮ ಬಂಗಾಳ ಮೂಲದ ಶಂಕಿತ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ “ಶಮಿ ವಿಟ್ನೆಸ್’ ಹೆಸರಿನ ಟ್ವಿಟರ್ ಅಕೌಂಟ್ ನಿರ್ವಹಣೆ ಮೂಲಕ ಐಸಿಸ್ ಉಗ್ರ ಸಂಘಟನೆ ಬೆಂಬಲಿಸಿ ಕೆಲಸ ಮಾಡುತ್ತಿದ್ದ ಆರೋಪ ಪ್ರಕರಣಕ್ಕೆ ಮತ್ತೂಂದು ತಿರುವು ಸಿಕ್ಕಿದೆ. “ಶಮಿ ವಿಟ್ನೆಸ್’ ಟ್ವಿಟರ್ ಅಕೌಂಟ್ ನಿರ್ವಹಿಸುತ್ತಿದೆ ಎಂದು ಆರೋಪಿ ಮೆಹದಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂಬ ತನಿಖಾಧಿಕಾರಿಯ ಸಾಕ್ಷ್ಯವನ್ನು ಪ್ರಕರಣದ ದಾಖಲೆಗಳಿಂದ ಕೈ ಬಿಡುವಂತೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ಪಾಟಿ ಸಾವಾಲಿನ ವೇಳೆ ಟ್ವಿಟರ್ ಖಾತೆ ನಿರ್ವಹಣೆ ಬಗ್ಗೆ ಆರೋಪಿಯ ತಪ್ಪೊಪ್ಪಿಗೆ ಸಾಬೀತು ಪಡಿಸಲು ಪ್ರಾಸಿಕ್ಯೂಶನ್‌ನ 2ನೇ ಸಾಕ್ಷಿಯಾಗಿರುವ ತನಿಖಾಧಿಕಾರಿಗೆ ನೀಡಿದ್ದ ಮತ್ತೂಂದು ಅವಕಾಶ ಹಾಗೂ ತಪ್ಪೊಪ್ಪಿಗೆ ಕುರಿತು ಅಂತಿಮ ಆದೇಶ ನಿರ್ಧರಿಸಬಹುದು ಎಂಬ 2016ರ ನ. 19ರ ಸೆಷನ್ಸ್ ಕೋರ್ಟ್ ಆದೇಶ ರದ್ದುಪಡಿಸಿ ಹೈಕೋರ್ಟ್ ಈ ಆದೇಶ ನೀಡಿದೆ.
ಸೆಷನ್ಸ್ ಕೋರ್ಟ್‌ನ ಕ್ರಮ ಪ್ರಶ್ನಿಸಿ ಮೆಹದಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಜಾನ್ ಮೈಕೆಲ್ ಡಿ ಕುನ್ಹಾ ಅವರಿದ್ದ ಏಕಸದಸ್ಯ ಪೀಠ, ಸಾಕ್ಷ್ಯಾಧಾರಗಳ ಕಾಯಿದೆ ಕಲಂ 25ರ ಅನ್ವಯ “ಆರೋಪಿಯ ತಪ್ಪೊಪ್ಪಿಗೆ ಹೇಳಿಕೆ ಕುರಿತು ಪೊಲೀಸ್ ಅಧಿಕಾರಿ ನುಡಿಯುವ ಸಾಕ್ಷಿ, ಪ್ರಕರಣದ ಸಾಕ್ಷ್ಯ ಎಂದು ಪರಿಗಣಿತವಾಗುವುದಿಲ್ಲ. ಅಂತಿಮ ಆದೇಶದ ವೇಳೆ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ಬಗ್ಗೆ ನಿರ್ಧರಿಸಬಹುದು ಎಂಬ ಅಧೀನ ನ್ಯಾಯಲಯದ ಆದೇಶದಿಂದ ಆರೋಪಿಯ ಕಾನೂನು ಹಕ್ಕು ಮೊಟಕುಗೊಳಿಸಿದಂತಾಗುತ್ತದೆ ಎಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣದ ದೂರುದಾರ ಹಾಗೂ ಪ್ರಾಸಿಕ್ಯೂಶನ್‌ನ 2ನೇ ಸಾಕ್ಷಿದಾರ ಆಗಿರುವ ಪೊಲೀಸ್ ಅಧಿಕಾರಿ, 2014ರ ಡಿ.13ರಂದು ಆರೋಪಿ ಮೆಹದಿ ” ಶಮಿ ವಿಟ್ನೆಸ್’ ಟ್ವಿಟರ್ ಅಕೌಂಟ್ ನಿರ್ವಹಣೆ ಮಾಡುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖೀಸಿದ್ದಾರೆ.ಜತೆಗೆ, ಪಾಟಿ ಸವಾಲಿನ ವೇಳೆಯೂ ಈ ಕುರಿತು ಸಾಕ್ಷಿ ನುಡಿದಿದ್ದರು. ಈ ತಪ್ಪೊಪ್ಪಿಗೆ ಹೇಳಿಕೆಯನ್ನು ಮೆಹದಿ ನಿರಾಕರಿಸಿದ್ದ.
ಏನಿದು ಪ್ರಕರಣ?: ಬೆಂಗಳೂರಿನಲ್ಲಿ ” ಶಮಿ ವಿಕ್ಲೃಸ್’ ಟ್ವಿಟರ್ ಅಕೌಂಟ್ ಮೂಲಕ ಐಸಿಸ್ ಬೆಂಬಲಿಸಿ, ಐಸಿಸ್ ಪರ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಬ್ರಿಟನ್‌ನ ನ್ಯೂಸ್ 4 ಚಾನೆಲ್ ವರದಿ ಬಿತ್ತರಿಸಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಿಸಿಬಿ ಪೊಲೀಸರು, ಶಮಿ ವಿಟ್ನೆಸ್ ನಿರ್ವಹಣೆ ಮಾಡುತ್ತಿದ್ದ ಆರೋಪದ ಮೇಲೆ ಜಾಲಹಳ್ಳಿ ಎಸ್.ಎಂ ರೋಡ್‌ನಲ್ಲಿ ವಾಸವಿದ್ದ ಪಶ್ಚಿಮ ಬಂಗಾಳದ ಟೆಕ್ಕಿ ಮೆಹದಿ ಮಸ್ರೂರ್ ಬಿಸ್ವಾಸ್ ನನ್ನು 2014ರ ಡಿ. 12ರಂದು ಮುಂಜಾನೆ ಬಂಧಿಸಿದ್ದರು.
ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರಿಗೆ, ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಟೆಕ್ಕಿಯಾಗಿರುವ ಮೆಹದಿ, ಐಸಿಸ್ ಹಾಗೂ ಮಧ್ಯಪ್ರಾಚ್ಯಗಳ ದೇಶಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, 2013ರಲ್ಲಿ ಶಮಿ ವಿಟ್ನೆಸ್ ಟ್ವಿಟರ್ ಖಾತೆ ತೆರೆದು ಅದರಲ್ಲಿ ಐಸಿಸ್ ಹಾಗೂ ಐಎಸ್‌ಎಲ್ ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದ, ಈತನಿಗೆ 17 ಸಾವಿರಕ್ಕಿಂತಲೂ ಅಧಿಕ ಮಂದಿ ಫಾಲೋವರ್ಸ್ ಇದ್ದರು, ಜತೆಗೆ, ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 1,22,203 ಟ್ವೀಟ್ 15446 ಚಿತ್ರಗಳು ಪೋಸ್ಟ್ ಮಾಡಿದ್ದ ಸಂಗತಿ ಬಯಲಾಗಿತ್ತು.
ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ: ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯಾಗಿರುವ ಮೆಹದಿ, ವಿರುದ್ಧ ದೇಶದ್ರೋಹ, ಸೈಬರ್ ಭಯೋತ್ಪಾದನೆ, ಐಪಿಸಿ ಕಲಂ 3, 13, 18, 39ರ ಇನ್ನಿತರೆ ಆರೋಪಗಳ ಕುರಿತು ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿ ಅನ್ವಯ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
* ಮಂಜುನಾಥ ಲಘುಮೇನಹಳ್ಳಿ