ನಿರ್ದೇಶಕ ಯೋಗರಾಜ್ ಭಟ್ಟರು ಸಂದರ್ಭಕ್ಕನುಸಾರವಾಗಿ ಹಾಡು ಬರೆಯುವಲ್ಲಿ ನಿಸ್ಸೀಮರು. ಅದೇ ಕಾರಣದಿಂದ ಅವರ ಹಾಡಿಗೆ ಸ್ವಲ್ಪ ಹೆಚ್ಚೇ ಬೇಡಿಕೆ ಇದೆ. ಈ ಬಾರಿ ಭಟ್ಟರಿಗೆ ದೊಡ್ಡ ಜವಾಬ್ದಾರಿಯೊಂದು ಸಿಕ್ಕಿದೆ. ಅದು ಮತದಾನದ ಕುರಿತಾಗಿ ಹಾಡು ಬರೆಯುವುದು. ಹೌದು, ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದೆ.
ಮೇ 12 ರಂದು ಚುನಾವಣೆ ನಡೆಯಲಿದ್ದು, ಅದಕ್ಕಿಂತ ಮುಂಚೆ ಹಾಡು ಬರೆದು, ಚಿತ್ರೀಕರಿಸುವ ಜವಾಬ್ದಾರಿ ಭಟ್ಟರಿಗೆ ಸಿಕ್ಕಿದೆ. ಭಟ್ಟರು ಯಾವುದೇ ಪಕ್ಷದ ಪರ ಹಾಡು ಬರೆಯುತ್ತಿಲ್ಲ. ಈ ಜವಾಬ್ದಾರಿಯನ್ನು ಅವರಿಗೆ ನೀಡಿರೋದು ಚುನಾವಣಾ ಆಯೋಗ. ಭಟ್ ಹಾಗೂ ಅವರ “ಪಂಚತಂತ್ರ’ ತಂಡಕ್ಕೆ ಮತದಾನದ ಮಹತ್ವದ ಕುರಿತಾಗಿ ಹಾಡು ಬರೆದು, ಚಿತ್ರಿಕರಿಸಲು ಹೇಳಿದೆ. ಇದರಿಂದ ಯೋಗರಾಜ ಭಟ್ಟರು ಖುಷಿಯಾಗಿದ್ದಾರೆ.
ಈ ಖುಷಿ ಹಂಚಿಕೊಳ್ಳುವ ಅವರು, “ಎಲೆಕ್ಷನ್ ಕಮಿಷನ್ “ಪಂಚತಂತ್ರ’ ಚಿತ್ರತಂಡವನ್ನು ಹಾಗೂ ನನ್ನನ್ನು ಈ ವರ್ಷದ ಅಸೆಂಬ್ಲಿ ಎಲೆಕ್ಷನ್‌ಗೆ ಒಂದು ಅದ್ಭುತ ಗೀತರಚನೆ ಮಾಡಲು ಹಾಗೂ ಆ ಹಾಡನ್ನು ಚಿತ್ರೀಕರಿಸಲು ಆಯ್ಕೆ ಮಾಡಿದೆ. ಇದು ನನ್ನ ಹಾಗೂ ನನ್ನ ತಂಡದ ಅತಿ ದೊಡ್ಡ ಹೆಮ್ಮೆಗಳಲ್ಲೊಂದು. ಗೀತರಚನೆ ನಡೆಯುತ್ತಿದೆ. ಚಿತ್ರೀಕರಣವನ್ನು ರಾಜ್ಯಾದ್ಯಂತ ಶುರು ಮಾಡಿದ್ದೇವೆ. ಸಂಗೀತ ನಿರ್ದೇಶನ ಹರಿಕೃಷ್ಣ ಅವರದ್ದಾಗಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಇದೆ.
ಈ ಹಾಡು ಜನಮಾನಸದಲ್ಲಿ ದೊಡ್ಡ ವೈರಲ್ ಆಗುವ ಪ್ರಬಲ ಸಾಧ್ಯತೆಗಳಿವೆ. ಈ ಒಂದು ಹಾಡಿನಿಂದಾಗಿ ವೋಟು ಮಾಡುವವರ ಸಂಖ್ಯೆ ಹೆಚ್ಚಿದಲ್ಲಿ ನಮ್ಮ ಶ್ರಮ ಸಾರ್ಥಕ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ ಭಟ್ರು. ಸದ್ಯ ಯೋಗರಾಜ್ ಭಟ್ “ಪಂಚತಂತ್ರ’ ಚಿತ್ರದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಅದರ ಜೊತೆಗೆ ಮತದಾನದ ಕುರಿತಾದ ಹಾಡನ್ನು ಚಿತ್ರೀಕರಿಸುವ ಜವಾಬ್ದಾರಿಯೂ ಅವರಿಗೆ ಸಿಕ್ಕಿದೆ.