Advertisement

ಮ್ಯೂಸಿಕ್‌ ಟ್ರ್ಯಾಕ್‌ನಲ್ಲಿ ಭಟ್ಟರ ಹೊಸ ಪ್ರಯೋಗ

09:36 AM May 01, 2020 | mahesh |

ಕೋವಿಡ್ ಲಾಕ್‌ಡೌನ್‌ ನಿಂದಾಗಿ ಸದ್ಯಕ್ಕೆ ಎಲ್ಲರೂ ಮನೆಯಲ್ಲೇ ಉಳಿಯುವಂತಾಗಿದೆ. ಇನ್ನು ಚಿತ್ರರಂಗದ ಮಂದಿ ಈ ಲಾಕ್‌ ಡೌನ್‌ ನಡುವೆಯೇ ಒಂದಷ್ಟು ಸಮಾಜಿಕ
ಕಾರ್ಯಗಳು, ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇನ್ನು ಈ ಲಾಕ್‌ ಡೌನ್‌ ವೇಳೆಯಲ್ಲಿ, ನಿರ್ದೇಶಕ ಯೋಗರಾಜ್‌ ಭಟ್‌, ಸಂಗೀತ ಸಂಯೋಜಕ ಅರ್ಜುನ್‌ ಜನ್ಯಾ ಮತ್ತು ಗಾಯಕ ವಿಜಯ್‌ ಪ್ರಕಾಶ್‌ ಮೂವರೂ ಸೇರಿ ಮ್ಯೂಸಿಕ್‌ ವಿಡಿಯೋ ಒಂದನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದಾರೆ. ಯೋಗರಾಜ್‌ ಭಟ್‌ ಈ ಮ್ಯೂಸಿಕ್‌ ವಿಡಿಯೋಗೆ ಸಾಹಿತ್ಯ ನೀಡುತ್ತಿದ್ದಾರೆ.

Advertisement

ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸುತ್ತಿರುವ ಈ ಹಾಡಿಗೆ ಗಾಯಕ ವಿಜಯ್‌ ಪ್ರಕಾಶ್‌ ಧ್ವನಿಯಾಗುತ್ತಿದ್ದಾರೆ. ಈ ಟ್ರ್ಯಾಕ್‌ ಲಾಕ್‌ಡೌನ್‌ ಅವಧಿಯಲ್ಲಿ ಗಾರ್ಡನ್‌ ಸಿಟಿ ಬೆಂಗಳೂರಿನ ಔಟ್‌ ಲುಕ್‌ ಅನ್ನು ಅನಾವರಣಗೊಳಿಸಲಿದೆಯಂತೆ. ಇನ್ನು ಮ್ಯೂಸಿಕ್‌ಗೆ ಎಂದಿಗೂ ಬೇಡಿಕೆ ಇದ್ದೇ ಇರುತ್ತದೆ ಎಂಬ ಕಾರಣಕ್ಕೆ ಈ ಹಾಡಿನ ಚಿತ್ರೀಕರಣ ಮಾಡಲು ತೀರ್ಮಾನಿಸಲಾಗಿದೆಯಂತೆ. ಮೆಲೋಡಿ ಮ್ಯೂಸಿಕ್‌, ಅದಕ್ಕೆ ತಕ್ಕಂತ ಪಂಚಿಂಗ್‌ ಸಾಲುಗಳು, ವಿಜಯ ಪ್ರಕಾಶ್‌ ವಾಯ್ಸ ಎಲ್ಲವೂ ಈ ಲಾಕ್‌ಡೌನ್‌ ಟ್ರ್ಯಾಕ್‌ಗೆ ಹೊಸರಂಗು ತರಲಿದೆ ಅನ್ನೊದು ಅಭಿಮಾನಿಗಳ ಲೆಕ್ಕಾಚಾರ. ಇನ್ನು ಕೋವಿಡ್ ಲಾಕ್‌ ಡೌನ್‌ ಬಗ್ಗೆ, ಈಗಿನ ಪರಿಸ್ಥಿತಿಯ ಬಗ್ಗೆ ಮಾತನಾಡುವ ನಿರ್ದೇಶಕ ಯೋಗರಾಜ ಭಟ್‌, ನಾವ್ಯಾರು ಇಂಥದ್ದೊಂದು ಪರಿಸ್ಥಿತಿ ಬರುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಕೋವಿಡ್ ಎಲ್ಲದಕ್ಕೂ ಬ್ರೇಕ್‌ ಹಾಕಿ ನಿಲ್ಲಿಸಿದೆ. ನಾವೆಲ್ಲ ಎಲ್ಲಿಗೆ ಓಡುತ್ತಿದ್ದೇವೆ ಅನ್ನೊದನ್ನ ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡಿದೆ. ಈ ವೇಳೆ ಎಲ್ಲರೂ ಮನೆಯಲ್ಲಿರುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ಎಲ್ಲರೂ ಅನಿವಾರ್ಯವಾಗಿ ಮನೆಯಲ್ಲಿರಬೇಕಾದ ಪರಿಸ್ಥಿತಿ ಬಂದಿದೆ. ಇಂಥ ಸಮಯದಲ್ಲಿ ಸಿಕ್ಕಿರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಒಂದಷ್ಟು ಕೆಲಸಗಳನ್ನು ನಾವೇ ಹುಡುಕಿಕೊಂಡು ಮಾಡಬೇಕಾಗಿದೆ. ಮನೆಯಲ್ಲಿ ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆಯೋದು, ಪುಸ್ತಕಗಳನ್ನು
ಓದೋದು, ವೆಬ್‌ ಸೀರಿಸ್‌ – ಸಿನಿಮಾಗಳನ್ನು ನೋಡೋದು ಹೀಗೆ ಸಮಯ ಕಳೆಯುವಂತಾಗಿದೆ ಎನ್ನುತ್ತಾರೆ.

ಅನಿರೀಕ್ಷಿತವಾಗಿ ಸಿಕ್ಕಿರುವ ಕೋವಿಡ್  ಬ್ರೇಕ್‌ ನಲ್ಲಿ ಏನಾದ್ರೂ ಮಾಡಬೇಕು ಅಂದುಕೊಳ್ಳುತ್ತಿದ್ದಾಗ ಇಂಥದ್ದೊಂದು ಮ್ಯೂಸಿಕ್‌ ವಿಡಿಯೋ ಮಾಡುವ ಐಡಿಯಾ ಭಟ್ಟರು ಮತ್ತವರ ತಂಡಕ್ಕೆ ಹೊಳೆದಿದೆ. ಸಂಗೀತ ನಿರ್ದೇಶಕ ಜನ್ಯಾ ಹಾಗೂ ಗಾಯಕ ವಿಜಯ್‌ ಪ್ರಕಾಶ್‌ ಜೊತೆ ಕೈ ಜೋಡಿಸಿದ್ದಾರೆ. ಕೋವಿಡ್ ಕುರಿತಾದ ಈ ಹಾಡಿನಲ್ಲಿ ಈಗಾಗಲೇ ಪೊಲೀಸ್‌ ಇಲಾಖೆ, ಮಾಧ್ಯಮ, ವೈದ್ಯರು ಸೇರಿದಂತೆ ಹಲವು ವಿಭಾಗಗಳನ್ನಿಟ್ಟುಕೊಂಡು ಚಿತ್ರೀಕರಣ ಕೂಡಾ ಮಾಡಿದ್ದಾರೆ. ಯಾರು ನೀ ಮಾನವ ಎಂದು ಕೇಳುತೈತೆ ಕೋವಿಡ್ ಎಂಬ ಸಾಲಿನೊಂದಿಗೆ ಈ ಹಾಡು ಆರಂಭವಾಗುತ್ತದೆ.

ಇನ್ನು ಯೋಗರಾಜ್‌ ಭಟ್‌ ಗಾಳಿಪಟ-2 ಚಿತ್ರವನ್ನು ರಮೇಶ್‌ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಗಣೇಶ್‌, ದಿಗಂತ್‌ ಮತ್ತು ಪವನ್‌ ಕುಮಾರ್‌ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಬಹುಭಾಗ ಶೂಟಿಂಗ್‌ ಮುಗಿದಿದ್ದು, ಅಂತಿಮ ಹಂತದ ಶೂಟಿಂಗ್‌ ಅಷ್ಟೇ ಬಾಕಿ ಉಳಿದಿದೆ. ಆದರೆ ಈಗ ಲಾಕ್‌ ಡೌನ್‌ ಆಗಿರುವ ಕಾರಣ ಶೂಟಿಂಗ್‌ ಅನಿರ್ದಿಷ್ಟವಧಿಗೆ ಮುಂದೂಡಲ್ಪಟ್ಟಿದೆ. ಈ ಗ್ಯಾಪ್‌ ನಲ್ಲಿ ಭಟ್ಟರು ಮ್ಯೂಸಿಕ್‌ ವಿಡಿಯೋ ಮಾಡಲು ಹೊರಟಿದ್ದು, ಲಾಕ್‌ ಡೌನ್‌ ಮ್ಯೂಸಿಕ್‌ ಟ್ರ್ಯಾಕ್‌ ಹೇಗಿರಲಿದೆ ಅನ್ನೊದು ಕೆಲ ದಿನಗಳಲ್ಲಿ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next