ಹಾವೇರಿ: ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸೇರಿಸಿ 2020ಕ್ಕೆ ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು. ಜಿಲ್ಲಾಧಿಕಾರಿ ಸಭಾಭವನದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರೇಕ್ಷಣೀಯ ಸ್ಥಳಗಳ ಜತೆಗೆ ಆಯಾ ಸ್ಥಳದ ಭಾಷೆ, ಆಹಾರ ಪದ್ಧತಿ, ಕಲೆ, ಸಂಸ್ಕೃತಿಯಿಂದಾಗಿಯೂ ಪ್ರವಾಸಿಗರನ್ನು ಸೆಳೆಯಬಹುದಾಗಿದೆ. ಕೇಂದ್ರ ಸರ್ಕಾರದ ಸಹಕಾರ, ಖಾಸಗಿಯವರ ಸಹಭಾಗಿತ್ವ, ಪ್ರವಾಸಿ ತಾಣಗಳ ದತ್ತು ನೀಡುವ ಯೋಜನೆ, ಪುರಾತನ ಸ್ಮಾರಕ ರಕ್ಷಣೆಗೆ “ಸಂರಕ್ಷಣೆ’ ಯೋಜನೆ, ಸ್ಥಳೀಯ ಇತಿಹಾಸ ತಿಳಿಸುವ “ನೋಡು ಬಾ ನಮ್ಮೂರ’ ಯೋಜನೆ ಇದೆಲ್ಲವೂ ಹೊಸ ನೀತಿಯಲ್ಲಿ ಒಳಗೊಂಡಿರುತ್ತದೆ ಎಂದರು.
ದಾರ್ಶನಿಕರ ಜಯಂತಿ ಆಚರಣೆ ಸ್ವರೂಪ ಹೇಗಿರಬೇಕು. ಜನರ ಸ್ಪಂದನೆ ಹೇಗಿದೆ ಎಂಬ ಬಗ್ಗೆ ರಾಜ್ಯದ ಎಲ್ಲ ಜಿಲ್ಲೆ ಗಳಿಂದ ವರದಿ ತರಿಸಿಕೊಂಡು ರಾಜ್ಯ ಮಟ್ಟದ ಸಮಾಲೋಚನೆ, ಸರ್ವಪಕ್ಷಗಳೊಂದಿಗೆ ಚರ್ಚೆ ಮಾಡಿದ ಬಳಿಕ ಜಯಂತಿ ಆಚರಣೆ ಬಗ್ಗೆ ಒಂದು ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಕೇಂದ್ರ ಸರ್ಕಾರ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಬಳಿಕ ಪ್ರತಿವರ್ಷ ಒಂದು ಕೋಟಿ ರೂ. ಅನುದಾನವನ್ನು 2012ರಿಂದ ನೀಡುತ್ತಿದೆ. ಆದರೆ, ಅದರ ಸದ್ಬಳಕೆ ಆಗುತ್ತಿಲ್ಲ. ಕೊಟ್ಟಿರುವ ಹಣ ಸದ್ಬಳಕೆ ಮಾಡಿಕೊಳ್ಳದೆ ಕೇಂದ್ರ ಸ್ಪಂದಿಸಿಲ್ಲ ಎಂದು ದೂರುವುದು ಸರಿಯಲ್ಲ ಎಂದರು.
ಹುದ್ದೆ ಖಾಲಿ ಖಾಲಿ…: ಪ್ರವಾಸೋದ್ಯಮ ಇಲಾಖೆಯಲ್ಲಿ ಶೇ.81ರಷ್ಟು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ 62ರಷ್ಟು ಹುದ್ದೆಗಳು ಖಾಲಿ ಇವೆ. ಇನ್ನು ಸಕ್ಕರೆ ಇಲಾಖೆ ಕಚೇರಿ 39 ಹುದ್ದೆಗಳಲ್ಲಿ ಇರುವುದು 9 ಮಾತ್ರ. ನ.15 ರೊಳಗೆ ರಾಜ್ಯದ ಎಲ್ಲ ಜಿಲ್ಲೆಗಳ ಅಧ್ಯಯನ ಪ್ರವಾಸ ಪೂರ್ಣಗೊಳಿಸಿ ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಹುದ್ದೆ ಖಾಯಂ ಭರ್ತಿಗೆ ಇಲ್ಲವೇ ತಾತ್ಕಾಲಿಕ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಪುರಾತತ್ವ ಇಲಾಖೆ ಪ್ರಾದೇಶಿಕ ಕಚೇರಿ ಹಾವೇರಿಯಲ್ಲಿ ಮಾಡುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು ಎಂದರು.
ಸಕ್ಕರೆ ಕಾರ್ಖಾನೆಯವರು ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಲೆ ಕೊಡಲೇಬೇಕು. ಅದಕ್ಕಿಂತ ಹೆಚ್ಚು ಕೊಡುವುದಾದರೆ ಕಾರ್ಖಾನೆ ಮಾಲಿಕರು ಹಾಗೂ ರೈತರು ಒಪ್ಪಂದ ಮಾಡಿಕೊಳ್ಳಬೇಕು. ಒಪ್ಪಂದ ಮಾಡಿಕೊಂಡರೆ ಮಾತ್ರ ಅದು ಕಾನೂನು ಬದ್ಧವಾಗುತ್ತದೆ. ಬಾಯಿ ಮಾತಲ್ಲಿ ಮಾಡಿಕೊಂಡರೆ ಅದು ಕಾನೂನುಬದ್ಧವಾಗುವುದಿಲ್ಲ. ರಾಜ್ಯದ ಶೇ.99.5ರಷ್ಟು ಕಾರ್ಖಾನೆಗಳು ಕೇಂದ್ರ ಸಲಹೆ ಬೆಲೆ ಕೊಡುತ್ತಿವೆ ಎಂದರು. ಸಕ್ಕರೆ ಇಳುವರಿಯನ್ನು ಸಮರ್ಪಕವಾಗಿ ಗುರುತಿಸಲು ಆಸ್ಟ್ರೇಲಿಯಾದಿಂದ ಯಂತ್ರ ಆಮದು ಮಾಡಿಕೊಳ್ಳಬೇಕಾ ಗಿದ್ದು, ಇದಕ್ಕಾಗಿ ನಿಯಮದಲ್ಲಿ ತಿದ್ದುಪಡಿ ಮಾಡಿಕೊಳ್ಳ ಬೇಕಾಗಿದೆ. ಈ ಬಗ್ಗೆ ಕಬ್ಬು ನಿಯಂತ್ರಣ ಮಂಡಳಿಯೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ವಿಧಾನಸೌಧದಲ್ಲಿ “ರಾಜಕೀಯ’…: ಜಿಲ್ಲೆಯ ಸಮಸ್ಯೆಗಳ ಬಗ್ಗೆ ವಿಧಾನ ಸೌಧದಲ್ಲಿ ಚರ್ಚೆ ಯಾಗುವುದಿಲ್ಲ. ಅಲ್ಲಿ “ರಾಜಕೀಯ’ ಹೆಚ್ಚು ಚರ್ಚೆಯಾಗುತ್ತದೆ. “ನಾನು ಸತ್ತಂತೆ ಮಾಡ್ತೇನೆ. ನೀನು ಅತ್ತಂತೆ ಮಾಡು’ ಎಂಬಂಥ ವಾತಾವರಣ ವಿರುತ್ತದೆ. ಹೀಗಾಗಿ ನಾನು ಜಿಲ್ಲಾವಾರು ಪ್ರವಾಸ ಮಾಡಿ ಸ್ಥಳೀಯ ಸಮಸ್ಯೆ, ಬೇಡಿಕೆ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.