Advertisement

ಅಡ್ಡಹೊಳೆ-ಬಿ.ಸಿ. ರೋಡ್‌ ಹೆದ್ದಾರಿಗೆ ಹೊಸ ಟೆಂಡರ್‌

10:28 AM Jan 22, 2020 | mahesh |

ಮಂಗಳೂರು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದು, ಆಕ್ರೋಶಕ್ಕೆ ಗುರಿಯಾಗಿದ್ದ ಬಿ.ಸಿ. ರೋಡ್‌-ಅಡ್ಡಹೊಳೆ ಚತುಷ್ಪಥ ಕಾಂಕ್ರೀಟ್‌ ರಸ್ತೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದ ಎಲ್‌ ಆ್ಯಂಡ್‌ ಟಿ ಕಂಪೆನಿಯನ್ನು ಕೈಬಿಟ್ಟು ಹೊಸ ಟೆಂಡರ್‌ ಪ್ರಕ್ರಿಯೆ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

Advertisement

2017ರಲ್ಲಿ ಪ್ರಾರಂಭಗೊಂಡಿದ್ದ ಈ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು
ಎಲ್‌ ಆ್ಯಂಡ್‌ ಟಿ ಕಂಪೆನಿಯು ವರ್ಷದ ಹಿಂದೆ ಅರ್ಧಕ್ಕೆ ನಿಲ್ಲಿಸಿತ್ತು. ಹೀಗಾಗಿ ಗುತ್ತಿಗೆ ರದ್ದುಪಡಿಸುವ ಬಗ್ಗೆ ರಾ.ಹೆ. ಅಧಿಕಾರಿಗಳು ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಿ ಹೊಸದಿಲ್ಲಿಯ ಕೇಂದ್ರ ಕಚೇರಿಗೆ ಸಲ್ಲಿಸಿದ್ದು, ಅಂತಿಮ ಪ್ರಕ್ರಿಯೆ ನಡೆಯುತ್ತಿದೆ. ಮರು ಟೆಂಡರ್‌ಗೆ ಅವಕಾಶ ಮಾಡಿಕೊಡುವಂತೆ ಮತ್ತೂಂದು ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಒಪ್ಪಿಗೆ ದೊರೆಯುವ ನಿರೀಕ್ಷೆಯಿದೆ.

ಬಳಿಕವಷ್ಟೇ ಹೊಸ ಟೆಂಡರ್‌ ಕರೆಯ ಲಾಗುತ್ತದೆ. ಅದನ್ನು ಅಂತಿಮಗೊಳಿಸಲು 4-5 ತಿಂಗಳು ಬೇಕು. ಜತೆಗೆ ಗುತ್ತಿಗೆ ಪಡೆದ ಕಂಪೆನಿ ಪೂರಕ ಪ್ರಕ್ರಿಯೆ ನಡೆಸಲು ಸಮಯಾವಕಾಶ ಅಗತ್ಯವಿದೆ. ಆ ವೇಳೆಗೆ ಮತ್ತೆ ಮಳೆಗಾಲ ಆರಂಭವಾಗಲಿದ್ದು, ಆಗ ಕಾಮಗಾರಿ ಅಸಾಧ್ಯ. ಹೀಗಾಗಿ ಮುಂದಿನ ಮಳೆಗಾಲದ ಅನಂತರವೇ ನಡೆಯಬಹುದು.  ಆದರೆ ಭೂಸ್ವಾಧೀನ, ಸಮತಲಗೊಳಿಸುವಿಕೆ ಯಂತಹ ಅನೇಕ ಪ್ರಾಥಮಿಕ ಕೆಲಸಗಳನ್ನು ಈಗಿನ ಗುತ್ತಿಗೆದಾರರು ಮಾಡಿರುವುದರಿಂದ ಮುಂದಿನ ಕೆಲಸ ವೇಗ ಪಡೆಯಬಹುದು ಎಂಬುದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಅಭಿಪ್ರಾಯ.

ಕಳೆದ ಮಳೆಗಾಲದಲ್ಲಿ ಅಡ್ಡಹೊಳೆ-ಬಿ.ಸಿ. ರೋಡ್‌ ನಡುವೆ ರಸ್ತೆ ಸಂಪೂರ್ಣ ಹದಗೆಟ್ಟು, ಕೆಲವು ದಿನಗಳ ಹಿಂದೆಯಷ್ಟೇ ಕೆಲವೆಡೆ ತೇಪೆ ಹಾಕಲಾಗಿದೆ. ಮುಂದೆ ಇನ್ನಷ್ಟು ಹದಗೆಡುವ ಅಪಾಯವಿದ್ದು, ಮಳೆಗಾಲದಲ್ಲಿ ಪ್ರಯಾಣಿಕರಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ.

ಏನಿದು ಯೋಜನೆ?
ನೆಲಮಂಗಲದಿಂದ ಹಾಸನದ ವರೆಗೆ ಇರುವ ಚತುಷ್ಪಥ ರಸ್ತೆಯನ್ನು ಮಂಗಳೂರಿನವರೆಗೂ ವಿಸ್ತರಿಸುವ ಯೋಜನೆ. ಶಿರಾಡಿ ಘಾಟಿಯಲ್ಲಿ ಎರಡು ಹಂತಗಳಲ್ಲಿ ಕಾಂಕ್ರೀಟ್‌ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಹಾಸನದಿಂದ ಶಿರಾಡಿಯ ಮಾರ್ನಹಳ್ಳಿಯವರೆಗೆ ಒಟ್ಟು 45 ಕಿ.ಮೀ. ಮತ್ತು ಶಿರಾಡಿಯ ಅಡ್ಡಹೊಳೆಯಿಂದ ಬಂಟ್ವಾಳದ ವರೆಗೆ ಒಟ್ಟು 63 ಕಿ.ಮೀ. ಚತುಷ್ಪಥಗೊಳ್ಳಲಿದೆ.

Advertisement

ಗುತ್ತಿಗೆ ಬದಲಾಗುವುದು ಯಾಕೆ?
ಅಡ್ಡಹೊಳೆಯಿಂದ ಬಿ.ಸಿ. ರೋಡ್‌ ಮಧ್ಯೆ 821 ಕೋ.ರೂ. ವೆಚ್ಚದಲ್ಲಿ ಚತುಷ್ಪಥ ಕಾಂಕ್ರೀಟ್‌ ರಸ್ತೆ ನಿರ್ಮಿಸುವ ಹೊಣೆಯನ್ನು ಎಲ್‌ ಆ್ಯಂಡ್‌ ಟಿಗೆ ನೀಡಲಾಗಿತ್ತು. ಭೂಸ್ವಾಧೀನ ವಿಳಂಬ, ಪರಿಸರ ಸಚಿವಾಲಯದಿಂದ ಕ್ಲಿಯರೆನ್ಸ್‌ ಸಕಾಲದಲ್ಲಿ ಸಿಗದಿರುವುದರಿಂದ ಅದು ಕೆಲಸ ಸ್ಥಗಿತಗೊಳಿಸಿತ್ತು. ಜತೆಗೆ ಅರಣ್ಯ ಇಲಾಖೆ ತಗಾದೆ ಇರುವ 16 ಕಿ.ಮೀ. ಭಾಗವನ್ನು ಟೆಂಡರ್‌ನಿಂದ ಕೈ ಬಿಡಲು ಪ್ರಾಧಿಕಾರ ಮುಂದಾಗಿದ್ದರಿಂದ ಕಂಪೆನಿ ಅಸಮಾಧಾನಗೊಂಡಿತ್ತು.

ಹೊಸ ಪ್ಯಾಕೇಜ್‌ನಲ್ಲಿ 16 ಕಿ.ಮೀ. ಹೊರಗೆ !
ಅಡ್ಡಹೊಳೆ ಮತ್ತು ಪೆರಿಯಶಾಂತಿ (ಧರ್ಮಸ್ಥಳ ಕ್ರಾಸ್‌) ಮಧ್ಯೆ 16 ಕಿ.ಮೀ. ಭಾಗವನ್ನು ಅಡ್ಡಹೊಳೆ-ಬಿ.ಸಿ. ರೋಡ್‌ ಪ್ಯಾಕೇಜ್‌ನಿಂದ ಹೊರಗಿರಿಸಲು ಸದ್ಯ ತೀರ್ಮಾನಿಸಲಾಗಿದೆ. ಈ ಭಾಗವು ಅರಣ್ಯ ಭಾಗದಲ್ಲಿ ಬರುತ್ತಿದ್ದು, ವನ್ಯಜೀವಿಗಳಿಗೆ ಸಮಸ್ಯೆಯಾಗದಂತೆ ಹಲವು ಪರಿಸರ ಕ್ಲಿಯರೆನ್ಸ್‌ ಪಡೆಯಬೇಕಾಗಿದೆ. ಇದಕ್ಕೆ ಹೆಚ್ಚಿನ ಸಮಯ ಬೇಕಾಗುವುದರಿಂದ ಸದ್ಯ ಪ್ಯಾಕೇಜ್‌ನಿಂದ ಹೊರಗಿಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಎಲ್‌ ಆ್ಯಂಡ್‌ ಟಿಯ ಗುತ್ತಿಗೆ ರದ್ದುಪಡಿಸುವಂತೆ ಕೇಂದ್ರ ಕಚೇರಿಗೆ ಶಿಫಾರಸು ಸಲ್ಲಿಸಲಾಗಿದೆ. ಹೊಸ ಟೆಂಡರ್‌ಗೆ ಅವಕಾಶ ನೀಡುವಂತೆಯೂ ಕೋರಲಾಗಿದೆ. ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನ ಹೊಸದಿಲ್ಲಿಯಲ್ಲಿ ಆಗಲಿದೆ.
– ಸೋಮಶೇಖರ್‌, ಯೋಜನಾ ನಿರ್ದೇಶಕರು, ರಾ.ಹೆ. ಪ್ರಾಧಿಕಾರ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next