ಧಾರವಾಡ: ಕೃಷಿ ಚಟುವಟಿಕೆಯಲ್ಲಿ ಜಾನುವಾರುಗಳ ಪಾತ್ರ ಅಪಾರ. ಟ್ರ್ಯಾಕ್ಟರ್ ಭರಾಟೆ ಮಧ್ಯೆಯೂ ಗ್ರಾಮೀಣ ಭಾಗದಲ್ಲಿ ಈಗಲೂ ಎತ್ತಿನಗಾಡಿ (ಚಕ್ಕಡಿ ಬಂಡಿ) ಅಸ್ತಿತ್ವ ಉಳಿಸಿಕೊಂಡಿವೆ. ಈ ಬಂಡಿಯ ನೊಗ ಹೊತ್ತು ಎಳೆಯುವ ಎತ್ತುಗಳಿಗೆ ಭಾರ ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಮಾದರಿ ಸಿದ್ಧಗೊಂಡಿದೆ. ಕಾಲಮಾನಕ್ಕೆ ತಕ್ಕಂತೆ ಚಕ್ಕಡಿಗಳ ಬದಲಾವಣೆ ಆಗಿದ್ದು, ಆದರೆ ಎತ್ತಿನಗಾಡಿ ನೊಗ ಹೂಡುವ ಪದ್ಧತಿಯಲ್ಲಿ ಸುಧಾರಣೆ ಕಂಡಿಲ್ಲ.
ಈ ಕೊರತೆ ನೀಗಿಸಲು ಎಸ್‌ಡಿಎಂ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಡಾ| ಮೃತ್ಯುಂಜಯ ಕಪ್ಪಾಳಿ ಅವರು ಉನ್ನತ ಭಾರತ ಅಭಿಯಾನ ಯೋಜನೆಯಡಿ ಎತ್ತಿನ ಗಾಡಿ ನೊಗ ಹೂಡುವ ಸುಧಾರಿತ ಪದ್ಧತಿಯ ಮಾದರಿಯನ್ನುವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಕೇಂದ್ರ ಸರಕಾರದಿಂದ ಒಂದೂವರೆ ಲಕ್ಷ ರೂ. ಅನುದಾನವೂ ಸಿಕ್ಕಿದೆ. ಕವಲಗೇರಿಯ ಶೇಖಪ್ಪ ತಿರ್ಲಾಪುರ, ನಿಂಗಪ್ಪ ಉಪ್ಪಾರ ಹಾಗೂ ಚಿದಾನಂದ ಬಡಿಗೇರ, ಮೆಕ್ಯಾನಿಕ್ ದಾಮೋದರ ಆಚಾರ ಹಾಗೂ ಉಪನ್ಯಾಸಕ ಸಂಜೀತ ಅಮ್ಮಿನಬಾವಿ, ಮೌನೇಶ್ವರ ಬಡಿಗೇರ ಈ ಮಾದರಿಯ ನಿರ್ಮಾಣ ಮತ್ತು ಕ್ಷೇತ್ರ ಪ್ರಯೋಗದಲ್ಲಿ ಸಹಕಾರ ನೀಡಿದ್ದಾರೆ.
ಸುಧಾರಣೆ ಅಗತ್ಯ: ಕಟ್ಟಿಗೆ ಚಕ್ಕಡಿ ಹೋಗಿ ಈಗ ಸದ್ಯಕ್ಕೆ ಕಬ್ಬಿಣ ಬಳಸಿ ಚಕ್ಕಡಿ ತಯಾರಿಸಲಾಗುತ್ತಿದೆ. ಎತ್ತಿನ ಕುತ್ತಿಗೆಯ ಮೇಲೆ ಯಾವಾಗಲೂ ಇದರ ಭಾರ ಬರುತ್ತದೆ. ಕತ್ತಿನ ವಿಸ್ತೀರ್ಣ ಕಡಿಮೆ ಇರುವುದರಿಂದ ಈ ಭಾರದ ಸಾಂದ್ರತೆ ಹೆಚ್ಚಾಗಿ ಎತ್ತುಗಳಿಗೆ ದೈಹಿಕ ಕಿರಿಕಿರಿಯಾಗಿ ಅವುಗಳ ಭಾರ ಎಳೆಯುವ ಕ್ಷಮತೆ ಕಡಿಮೆಯಾಗುತ್ತದೆ ಎಂಬುದು ಈ ತಂಡದ ವಾದ. ಕುತ್ತಿಗೆಯ ಮೇಲೆ ಹೆಚ್ಚಿನ ಸಾಂಧ್ರತೆಯ ಭಾರದಿಂದ ತೀಕ್ಷ್ಮವಾಗಿ ತಿಕ್ಕುವುದು, ಚುಚ್ಚುವುದು ಆಗುವುದರಿಂದ ಕುತ್ತಿಗೆ ಹುಣ್ಣುಗಳಾಗುತ್ತವೆ. ಆಗ ಕೆಲಸದಿಂದ ವಿಶ್ರಾಂತಿ ಕೊಟ್ಟು ವೈದ್ಯಕೀಯ ಶುಶ್ರೂಷೆ ಮಾಡಬೇಕಾಗುತ್ತದೆ. ಒಂದೊಮ್ಮೆ ಸರಿಯಾದ ಚಿಕಿತ್ಸೆ ಸಿಗದೇ ಸಾವನಪ್ಪುವ ಸಾಧ್ಯತೆಯೂ ಇದೆ. ಹೀಗಾಗಿ ಎತ್ತಿನ ಗಾಡಿ ನೊಗ ಹೂಡುವ ಪದ್ದತಿಯಲ್ಲಿ ಸುಧಾರಣೆ ಅಗತ್ಯತೆ ಅರಿತು ಈ ಮಾದರಿ ಸಿದ್ಧಪಡಿಸಲಾಗಿದೆ ಎಂದು ಹೇಳುತ್ತಾರೆ ಡಾ| ಮೃತ್ಯುಂಜಯ ಕಪ್ಪಾಳಿ.
ಎಸ್‌ಡಿಎಂನಲ್ಲಿ ಪ್ರಾತ್ಯಕ್ಷಿತೆ: ನಗರದ ಎಸ್‌ಡಿಎಂ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಈ ಮಾದರಿ ಪ್ರಾತ್ಯಕ್ಷಿತೆಯನ್ನು ತಜ್ಞರ ಸಮ್ಮುಖದಲ್ಲಿ ಶನಿವಾರ ಜರುಗಿತು. ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರ ಕುಮಾರ, ಪಶು ಸಂಗೋಪನೆ ಇಲಾಖೆಯ ನಿವೃತ್ತ ಡಾ| ವಿಲಾಸ ಕುಲಕರ್ಣಿ, ಡಾ| ಎ.ಎ. ಮುಲ್ಲಾ, ಪ್ರಾಂಶುಪಾಲಡಾ| ಕೆ. ಗೋಪಿನಾಥ ಸೇರಿದಂತೆ ಹಲವರು ತಜ್ಞರು ಈ ಮಾದರಿ ವೀಕ್ಷಣೆ ಕೈಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಇದಲ್ಲದೇ ಅಂತಿಮ ಮಾದರಿ ಶೀಘ್ರ ಅಭಿವೃದ್ದಿ ಆಗಲಿ. ಅದಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ಇದನ್ನೂ ಓದಿ:ಶಶಿಕಲಾ ನಟರಾಜನ್ ಸಂಬಂಧಿ ಇಳವರಸಿಗೂ ಕೋವಿಡ್
ಮಾದರಿಯ ವಿಶೇಷತೆ
ಸದೃಢವಾದ ಸ್ನಾಯುಗಳು ಇರುವುದರಿಂದ ಎತ್ತುಗಳ ಕುತ್ತಿಗೆಯು ಭಾರ ಎಳೆಯುವುದಕ್ಕೆ ಪ್ರಶಸ್ತವಾದ ಅಂಗವಾಗಿದೆ. ಈ ವಿಷಯಗಳನ್ನು ಮನದಲ್ಲಿಟ್ಟು ಸುಧಾರಿತ ಪದ್ಧತಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಅಲ್ಯುಮಿನಿಯಂ ಪಟ್ಟಿಗಳಿಂದ ಒಂದು ಮಾದರಿ ಸಿದ್ಧಪಡಿಸಲಾಗಿದೆ. ಒಳ ಮೈಮೇಲೆ ಮೃದು ರಬ್ಬರ್ ಹೊದಿಕೆ ಹಾಕಲಾಗಿದೆ. ಈ ಮಾದರಿ ಸುತ್ತ ಪಟ್ಟಿ ಅಥವಾ ಹಗ್ಗಗಳನ್ನು ಒದಗಿಸಲಾಗಿದೆ. ಈ ಮಾದರಿಯನ್ನು ಎತ್ತಿನ ಬೆನ್ನ ಮೇಲಿಟ್ಟು ಕಟ್ಟಿ, ಇದರ ಮೇಲೆ ನೊಗವನ್ನು ಅದರ ಹಿಡಿಕೆಯಲ್ಲಿ ಬಂಧಿಸಲಾಗುತ್ತದೆ. ಈ ಮಾದರಿ ಎತ್ತಿನ ಬೆನ್ನ ಮೇಲಿನ ವಿಶಾಲ ಪ್ರದೇಶಕ್ಕೆ ಹೊಂದಿಕೊಳ್ಳುತ್ತದೆ. ಸಾಂಪ್ರದಾಯಕ ವಿಧಾನದಲ್ಲಿ ಕುತ್ತಿಗೆಯ ಮೇಲೆ ಆಗುವಂತೆ ಮೊನಚಾದ ಭಾರ ಬೀಳುವುದು ತಪ್ಪುತ್ತದೆ ಎಂಬುದು ಈ ಸಂಶೋಧನೆಯ ಒಟ್ಟಾರೆ ಫಲಿತವಾಗಿದೆ.