Advertisement

ಸೈನಿಕರ ಆಹಾರ ಸಂರಕ್ಷಣೆಗೆ ಹೊಸ ತಂತ್ರಜ್ಞಾನ

02:06 PM May 20, 2018 | Team Udayavani |

ಮೈಸೂರು: ಸೈನಿಕರು ದೇಶ ಕಾಯುವ ವೇಳೆ ತಮ್ಮ ಆಹಾರ ಪದಾರ್ಥಗಳನ್ನು ಸುಲಭವಾಗಿ ಸಂರಕ್ಷಣೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ(ಡಿಎಫ್ಆರ್‌ಎಲ್‌) ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

Advertisement

ಈಶಾನ್ಯ ಗಡಿಭಾಗದ ರಾಜ್ಯಗಳಾದ ಹಿಮಾಚಲ ಪ್ರದೇಶ, ಲಡಾಖ್‌, ಸಿಯಾಚಿನ್‌ ಮುಂತಾದ ಕಡೆಗಳಲ್ಲಿ 40 ಡಿಗ್ರಿಗಿಂತ ಕಡಿಮೆ ಉಷ್ಣಾಂಶ ಇರುವುದರಿಂದ ಅಲ್ಲಿ ಕೆಲಸ ಮಾಡುವ ಸೈನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ.

ಇಂತಹ ಸಮಸ್ಯೆಗಳಲ್ಲಿ ಆಹಾರ ಸಂರಕ್ಷಣೆ ಮಾಡಿಕೊಳ್ಳುವುದು ಪ್ರಮುಖ ಸಮಸ್ಯೆಯಾಗಿದೆ. ಇಂತಹ ಪ್ರದೇಶಗಳಲ್ಲಿ ಕೆಲಸ ಮಾಡುವ ಸೈನಿಕರು ಹಸಿವು ನೀಗಿಸಿಕೊಳ್ಳಲು ಚಾಕೋಲೆಟ್‌, ಇನ್ಸ್‌ಟೆಂಟ್‌ ಫ‌ುಡ್‌, ಆಹಾರಧಾನ್ಯ, ಹಣ್ಣು, ತರಕಾರಿ ಹೀಗೆ ಹಲವು ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ.

ಈ ವೇಳೆ ಬಹುತೇಕ ಆಹಾರ ಮಂಜುಗಡ್ಡೆಯಾಗಿ ಪರಿವರ್ತನೆಯಾಗಿ ಸೇವಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿದೆ. ಸೈನಿಕರ ಈ ಸಮಸ್ಯೆ ಅರಿತುಕೊಂಡ ಡಿಎಫ್ಆರ್‌ಎಲ್‌ ಸಂಸ್ಥೆ ಮಾಡ್ಯುಲರ್‌ ಸ್ಟೋರೇಜ್‌ ಸಿಸ್ಟಂ ಫಾರ್‌ ರೇಷನ್‌(ಸಿಲೋ) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ತಂತ್ರಜ್ಞಾನದ ವಿಶೇಷತೆ: ಡಿಎಫ್ಆರ್‌ಎಲ್‌ ಸಿದ್ಧಪಡಿಸಿರುವ ನೂತನ ಸಿಲೋ ತಂತ್ರಜ್ಞಾನದಲ್ಲಿ ಸೈನಿಕರು ಬಳಸುವ ಆಹಾರ ಪದಾರ್ಥಗಳು ಚಳಿಗೆ ಮಂಜುಗಡ್ಡೆಯಂತೆ ಗಟ್ಟಿಯಾಗದಂತೆ ಮಾಡುತ್ತದೆ. ನೋಡಲು ಮನೆಯಂತೆ ಕಾಣುವ ಈ ಮಾದರಿ, ಮೂರು ಕೊಠಡಿಗಳನ್ನು ಹೊಂದಿದೆ.

Advertisement

ಸಿಲೋ ತಂತ್ರಜ್ಞಾನ ಕೊಠಡಿಯಲ್ಲಿ ಎಲ್ಲಾ ರೀತಿಯ ಆಹಾರ ಪದಾರ್ಥಗಳು ಹಾಳಾಗದಂತೆ ಹಾಗೂ ಗಟ್ಟಿಯಾದಂತೆ ಸಂರಕ್ಷಣೆ ಮಾಡಬಹುದು. ಈ ಪ್ರದೇಶಗಳಲ್ಲಿ ಹೊರಗೆ 40 ಡಿಗ್ರಿ ಕನಿಷ್ಟ ಉಷ್ಣಾಂಶವಿದ್ದರೂ, ಸಿಲೋ ತಂತ್ರಜ್ಞಾನ ಹೊಂದಿರುವ ಕೊಠಡಿಯು 2-8 ಡಿಗ್ರಿ ಗರಿಷ್ಠ ಉಷ್ಣಾಂಶ ಹೊಂದಿರಲಿದೆ.

ಇದರಿಂದ ಕೊರೆಯುವ ಚಳಿಯಲ್ಲಿಯೂ ಆಹಾರ ಪದಾರ್ಥವನ್ನು ಸಂರಕ್ಷಿಸಿಕೊಳ್ಳಲು ನೆರವಾಗಲಿದೆ. ಅಲ್ಲದೆ ಸಿಲೋ ತಂತ್ರಜ್ಞಾನದ ಕೊಠಡಿ ಬೆಂಕಿ ಹಾಗೂ ಹಿಮ ನಿರೋಧಕ ಶಕ್ತಿ ಹೊಂದಿದೆ. ಯಾವುದೇ ಸಮಯದಲ್ಲಿ ಬೆಂಕಿ, ಚಳಿಯಿಂದ ಆಹಾರ ಪದಾರ್ಥಗಳು ಕೆಡದಂತೆ ನೋಡಿಕೊಳ್ಳಲಿದೆ ಎಂದು ಡಿಎಫ್ಆರ್‌ಎಲ್‌ ಸಂಶೋಧಕರು ತಿಳಿಸುತ್ತಾರೆ.

ಸಿಲೋ ಬಳಕೆ ಹೇಗೆ?: ಗಡಿಯಲ್ಲಿ ಕೆಲಸ ಮಾಡುವ ಸೈನಿಕರು ತಮ್ಮ ವಾತಾವರಣದ ಅನುಕೂಲಕ್ಕೆ ಅನುಗುಣವಾಗಿ ಸಿಲೋ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬಹುದು. ಸಿಲೋ ತಂತ್ರಜ್ಞಾನ ಹೊಂದಿರುವ ಮನೆ ಆಕಾರದ ಸಣ್ಣ ಕೊಠಡಿಯನ್ನು ಭೂಮಿಯೊಳಗೆ ಹಾಗೂ ಭೂಮಿಯಿಂದ ಅರ್ಧ ಭಾಗದಷ್ಟು ಒಳಗಿಟ್ಟ ಆಹಾರವನ್ನು ಸಂಕರಕ್ಷಣೆ ಮಾಡಿಕೊಳ್ಳಬಹುದು. ಇದು ಯೋಧರಿಗೆ ಎಲ್ಲಾ ಸಮಯದಲ್ಲೂ ಅನುಕೂಲವಾಗಲಿದೆ. ಈ ತಂತ್ರಜ್ಞಾನವಿರುವ ಕೊಠಡಿಯನ್ನು ಒಂದೆಡೆಯಿಂದ ಮತ್ತೂಂದೆಡೆಗೆ ಸುಲಭವಾಗಿ ಸಾಗಿಸಬಹುದಾಗಿದೆ.

3 ವರ್ಷದ ಪರಿಶ್ರಮ: ಪ್ರಧಾನ ಮಂಂತ್ರಿ ಕಾರ್ಯಾಲಯ ಡಿಎಫ್ಆರ್‌ಎಲ್‌ನ ಯುವ ವಿಜ್ಞಾನಿಗಳಿಗೆ ಈಶಾನ್ಯ ಗಡಿಯಲ್ಲಿ ಯೋಧರಿಗೆ ಆಹಾರ ಸಂರಕ್ಷಣೆಗೆ ಸಹಾಯವಾಗುವ ತಂತ್ರಜ್ಞಾನ ಕಂಡುಹಿಡಿಯಲು ಕೋರಿ, 2015ರಲ್ಲಿ ಆದೇಶ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ಸಂಶೋಧನೆ ನಡೆಸಿದ ಡಿಎಫ್ಆರ್‌ಎಲ್‌ನ ಯುವ ವಿಜ್ಞಾನಿಗಳಾದ ಡಿ.ಕೆ.ಯಾದವ್‌ ಮತ್ತು ನೀರಾ, ಈಶಾನ್ಯ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಅರಿತು, ಸೈನಿಕರ ಜತೆಗೆ ಚರ್ಚಿಸಿದರು.

ನಂತರ ಅಲ್ಲಿನ ಸಮಸ್ಯೆಗಳ ಅನುಗುಣವಾಗಿ ಡಿಎಫ್ಆರ್‌ಎಲ್‌ನ ವಿಜ್ಞಾನಿ ಎ.ಡಿ.ಸಮೆಲ್ವೆನ್‌ ಮಾರ್ಗದರ್ಶನಲ್ಲಿ ವಿಜ್ಞಾನಿಗಳಾದ ಡಿ.ಕೆ.ಯಾದವ್‌ ಮತ್ತು ನೀರಾ, ಮೂರು ವರ್ಷಗಳ ನಿರಂತರ ಪರಿಶ್ರಮದಿಂದ ಸಿಲೋ ತಂತ್ರಜ್ಞಾನದ ಆಹಾರ ಕೊಠಡಿ ತಯಾರಿಸಿದ್ದಾರೆ.

ಈ ಹೊಸ ತಂತ್ರಜಾnನವನ್ನು ಜೂನ್‌ ಮೊದಲ ವಾರದಲ್ಲಿ ಲಡಾಖ್‌ನ ಬೂಮ್ರಾ ವ್ಯಾಲಿಯಲ್ಲಿ ಅಳವಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಹಿಮದಿಂದ ಕೂಡಿದ ಎಲ್ಲಾ ಪ್ರದೇಶಗಳಲ್ಲಿ ಸೇನೆಗಳಿಗೆ ಸಹಕಾರಿಯಾಗಲು ಸಿಲೋ ತಂತ್ರಜ್ಞಾನ ಕೊಠಡಿಯನ್ನು ನಿರ್ಮಿಸಲು ರಕ್ಷಣಾ ಸಚಿವಾಲಯ ನಿರ್ಧಾರಿಸಿದೆ ಎಂದು ಸಂಸ್ಥೆಯ ವಿಜ್ಞಾನಿ ಡಿ.ಕೆ.ಯಾದವ್‌ ತಿಳಿಸಿದ್ದಾರೆ.

* ಸಿ.ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next