ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಲಾಗುವ ಕಾಮಗಾರಿಗಳಿಗೆ ಬಿಲ್ ಪಾವತಿಸುವ ಮೊದಲು ಐಐಎಸ್‌ಸಿ,ವಿಟಿಯು ಸೇರಿದಂತೆ ಪ್ರತಿಷ್ಟಿತ ಸಂಸ್ಥೆಗಳ ಮೂಲಕ ಪರಿಶೀಲನೆಗೆ ಒಳಪಡಿಸಲು ಪಾಲಿಕೆ ಮುಂದಾಗಿದೆ. ಆ ಮೂಲಕ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಯೋಜನೆ ರೂಪಿಸಿದೆ.
ಪಾಲಿಕೆಯಿಂದ ವಿವಿಧ ಕಾಮಗಾರಿಗಳನ್ನು ಟೆಂಡರ್ ಮೂಲಕ ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಆದರೆ, ಕೆಲವೊಂದು ಭಾಗಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿರುವುದು ಕಂಡು ಬಂದಿದೆ. ಆ ಹಿನ್ನೆಲೆಯಲ್ಲಿ ಪ್ರತಿಯೊಂದು ಕಾಮಗಾರಿಯನ್ನು 3ನೇ ಸಂಸ್ಥೆಯ ಮೂಲಕ ಪರಿಶೀಲಿಸಲು ಪಾಲಿಕೆ ಮುಂದಾಗಿದ್ದು, ಅದಕ್ಕಾಗಿ 7 ಸಂಸ್ಥೆಗಳನ್ನು ಗುರುತಿಸಲಾಗಿದೆ.
ರಾಜ್ಯ ಸರ್ಕಾರ 2016-17 ಮತ್ತು 2017-18ನೇ ಸಾಲಿಗೆ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬಿಬಿಎಂಪಿಗೆ 7,300 ಕೋಟಿ ರೂ. ಅನುದಾನ ನೀಡಿದೆ. ಈ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುವ ಕಾಮಗಾರಿಗಳು ಕಳಪೆಯಾಗುವುದನ್ನು ತಡೆಯುವುದಕ್ಕೆ ಪಾಲಿಕೆಯ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದು, ಅದರಂತೆ ಕಾಮಗಾರಿ ಪರಿಶೀಲನೆಗಾಗಿ 7 ಸಂಸ್ಥೆಗಳನ್ನು ಗುರುತಿಸಲಾಗಿದೆ.
ಪಾಲಿಕೆಯಿಂದ ಗುರುತಿಸಲಾಗಿರುವ ಸಂಸ್ಥೆಗಳ ಸದಸ್ಯರು ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಬಿಲ್ ಪಾವತಿಗೂ ಮುನ್ನ ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಲಿದ್ದಾರೆ. ನಂತರ ಅದರ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಗುತ್ತಿಗೆದಾರರಿಗೆ ಪಾಲಿಕೆಯಿಂದ ಬಿಲ್ ಪಾವತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ರಾಜ್ಯ ಸರ್ಕಾರ ನೀಡಿರುವ ಅನುದಾನದಲ್ಲಿ ಪ್ರಮುಖವಾಗಿ ಟೆಂಡರ್ ಶ್ಯೂರ್, ವೈಟ್‌ಟಾಪಿಂಗ್, ರಸ್ತೆ ಅಭಿವೃದ್ಧಿ ಕಾಮಗಾರಿ, ಗ್ರೇಡ್ ಸಪರೇಟರ್, ಸಂಚಾರ ನಿರ್ವಹಣೆ ಕಾಮಗಾರಿ, ಕೈಗಾರಿಕಾ ಪ್ರದೇಶದ ಅಭಿವೃದ್ಧಿ, ಪಾದಚಾರಿ ಮಾರ್ಗಗಳ ಅಭಿವೃದ್ದಿ, ಬೃಹತ್ ಮಳೆನೀರುಗಾಲುವೆ (ರಾಜಕಾಲುವೆ) ಹಾಗೂ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಅದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಈಗಾಗಲೆ ಕ್ರಿಯಾಯೋಜನೆ ರೂಪಿಸಿ, ಬಹುತೇಕ ಕಾಮಗಾರಿಯನ್ನು ಅನುಷ್ಠಾನಗೊಳಿಸುತ್ತಿದೆ. ಆ ಕಾಮಗಾರಿಗಳು ಪೂರ್ಣಗೊಂಡ ನಂತರ ಅವುಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಾಲಿಕೆಯಿಂದ ಆಯ್ಕೆ ಮಾಡಿದ ಸಂಸ್ಥೆಗಳ ವಿವರ
– ಭಾರತೀಯ ವಿಜ್ಞಾನ ಸಂಸ್ಥೆ
– ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ
– ಲೋಕೋಪಯೋಗಿ ಇಲಾಖೆ (ಗುಣ ಭರವಸೆ ಹಾಗೂ ರಾಷ್ಟ್ರೀಯ ಹೆದ್ದಾರಿ ಗುಣ ನಿಯಂತ್ರಣ)
– ಸಣ್ಣ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್
– ಯೋಜನೆ ಮತ್ತು ರಸ್ತೆ ಆಸ್ತಿ ನಿರ್ವಹಣೆ ಕೇಂದ್ರ
– ರಿಸೋರ್ಸ್ ಸೆಂಟರ್ ಫಾರ್ ಆಟ್‌ಸ್ಪಾಲ್ಟ್ ಆ್ಯಂಡ್ ಸಾಯಿಲ್ ಟ್ರೈನಿಂಗ್ ಅಕಾಡೆಮಿ (ರಾಸ್ತಾ)