Advertisement

ತುರ್ತು ಸಹಾಯಕ್ಕೆ ಹೊಸ ವ್ಯವಸ್ಥೆ: ಒಂದೇ ದೇಶ ಒಂದೇ ತುರ್ತು ಕರೆ ಸಂಖ್ಯೆ 112 ಯೋಜನೆಯಡಿ ಜಾರಿ

12:37 PM Oct 04, 2020 | sudhir |

ದಾವಣಗೆರೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ “ಒಂದೇ ದೇಶ ಒಂದೇ ತುರ್ತು ಕರೆ ಸಂಖ್ಯೆ-112′ ನೂತನ ತುರ್ತು ಸ್ಪಂದನ ಸಹಾಯ ವ್ಯವಸ್ಥೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳುತ್ತಿದ್ದು, ಶೀಘ್ರದಲ್ಲೇ ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.

Advertisement

ದಾವಣಗೆರೆ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಈ ತುರ್ತು ಸ್ಪಂದನ ಸಹಾಯ ವ್ಯವಸ್ಥೆ (ಇಆರ್‌ಎಸ್‌ಎಸ್‌-ಎಮರ್ಜೆನ್ಸಿ ರೆಸ್ಪಾನ್ಸ್‌ ಸಪೋರ್ಟ್‌ ಸಿಸ್ಟಮ್‌) ಯೋಜನೆಗಾಗಿ 3 ಜಿಲ್ಲೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿರುವ 15 ಹೊಸ ವಾಹನಗಳನ್ನು ಈಗಾಗಲೇ ನೀಡಲಾಗಿದೆ. ಈ ಕಾರ್ಯಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಮನ್ವಯ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ.

ಏನಿದು ವ್ಯವಸ್ಥೆ?: ಅಪರಾಧ, ದುರಂತ, ಅವಘಡ, ವಿಪತ್ತು ಸೇರಿದಂತೆ ಇನ್ನಿತರ ಸಮಸ್ಯೆಯಲ್ಲಿ ಸಿಲುಕಿದವರು ಯಾವ ಮೂಲೆಯಲ್ಲಿದ್ದರೂ ಅತಿ ಶೀಘ್ರದಲ್ಲಿ ಪೊಲೀಸ್‌ ಸಂಪರ್ಕದ ಮೂಲಕ ಸಹಾಯ ಮಾಡುವ ನೂತನ ವ್ಯವಸ್ಥೆ ಇದಾಗಿದೆ. ತುರ್ತು ಕರೆಯಾಗಿ ಇಡೀ ದೇಶಕ್ಕೆ 112 ಒಂದೇ ಸಂಖ್ಯೆ ಮಾಡಲಾಗಿದೆ. ಇನ್ನು ಮುಂದೆ ಈ ಹಿಂದಿನಂತೆ ಪೊಲೀಸ್‌ ಸಹಾಯಕ್ಕಾಗಿ 100 ಸಂಖ್ಯೆಗೆ ಕರೆ ಮಾಡಿದರೂ ಅದು ತುರ್ತು ಸ್ಪಂದನ ಸಹಾಯ ಕೇಂದ್ರಕ್ಕೆ ತಲುಪುವ ವ್ಯವಸ್ಥೆ ಮಾಡಲಾಗಿದ್ದು, 24/7 ತುರ್ತು ಪ್ರತಿಕ್ರಿಯೆ ಬೆಂಬಲ ಸೇವೆ ಲಭಿಸಲಿದೆ.

ಇದನ್ನೂ ಓದಿ :ದೀಪಿಕಾ, ಶೃದ್ಧಾ, ಸಾರಾ ವಿಚಾರಣೆ ನಡೆಸಿದ್ದ ಎನ್ ಸಿಬಿ ಅಧಿಕಾರಿಗೆ ಕೋವಿಡ್ ಸೋಂಕು ದೃಢ

ಕಾರ್ಯ ವೈಖರಿ ಹೇಗೆ?: ನೂತನ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯಲ್ಲಿ ಸಾರ್ವಜನಿಕರು 112ಗೆ ಮಾಡುವ ಕರೆಗಳನ್ನು ಸ್ವೀಕರಿಸಲು ಬೆಂಗಳೂರಿನಲ್ಲಿ ರಾಜ್ಯ ತುರ್ತು ಪ್ರತಿಕ್ರಿಯೆ ಕೇಂದ್ರದ ಸೇವಾ ಸಮನ್ವಯ ಘಟಕ ಆರಂಭಿಸಲಾಗಿದೆ. ಈ ಘಟಕ ಸಾರ್ವಜನಿಕರಿಂದ ಬಂದ ಕರೆಗಳನ್ನು ಸ್ವೀಕರಿಸುತ್ತದೆ. ಹೀಗೆ ಕರೆ ಸ್ವೀಕರಿಸುವಾಗಲೇ ಕರೆ ಎಲ್ಲಿಂದ ಬಂತು, ಎಷ್ಟು ಸಮಯಕ್ಕೆ ಬಂತು ಎಂಬ ಮಾಹಿತಿ ಕರೆ ಬಂದ ಸ್ಥಳದ ಉಪಗ್ರಹ ಆಧಾರಿತ ಅಕ್ಷಾಂಶ-ರೇಖಾಂಶ ಸಹಿತ ದಾಖಲಾಗುತ್ತದೆ. ಅಂದರೆ ಸ್ವಯಂ ಚಾಲಿತ ಸ್ಥಳ ಗುರುತಿಸುವಿಕೆ ಕಾರ್ಯ ಇಲ್ಲಿ ನಡೆಯುತ್ತದೆ. ಬಳಿಕ ಸಂಬಂಧಪಟ್ಟ ಪ್ರದೇಶಕ್ಕೆ ಹತ್ತಿರದಲ್ಲಿ ನಿಂತಿರುವ ವಾಹನಗಳಿಗೆ ದೂರು ಕೊಟ್ಟವರ ಪ್ರದೇಶದ ಅಕ್ಷಾಂಶ-ರೇಖಾಂಶ ಸಹಿತ ಕರೆ ಬರುತ್ತದೆ.

Advertisement

ವಾಹನದಲ್ಲಿ ಅಳವಡಿಸಿರುವ ಸ್ಟಾರ್ಟ್‌ ಗುಂಡಿ ಒತ್ತಿದರೆ ಅದು ವಾಹನ ಎಲ್ಲಿ ಹೋಗಬೇಕು ಎಂದು ಡಿಜಿಟಲ್‌ ಮಾರ್ಗಸೂಚಿಯನ್ನು ತೋರಿಸುತ್ತದೆ.

ಆ ಪ್ರಕಾರವೇ ಚಾಲಕ ವಾಹನ ಓಡಿಸಿ ನಿಗದಿತ ಸ್ಥಳ ತಲುಪಬೇಕಾಗುತ್ತದೆ. ಅಲ್ಲಿ ಹೋದ ಮೇಲೆ ಸ್ಟಾಪ್‌ ಗುಂಡಿ ಒತ್ತಬೇಕಾಗುತ್ತದೆ. ತುರ್ತು ಸ್ಪಂದನ ಸಹಾಯದ ವಾಹನ ಎಲ್ಲಿ ಹೋಗುತ್ತಿದೆ, ಎಷ್ಟು ಹೊತ್ತಿಗೆ ಬಿಟ್ಟಿದೆ, ಎಷ್ಟು ಹೊತ್ತಿಗೆ ತಲುಪಿದೆ ಸೇರಿದಂತೆ ಸಮಗ್ರ ಮಾಹಿತಿ ಕೇಂದ್ರ ಕಚೇರಿಯ ಸರ್ವರ್‌ ಹಾಗೂ ಹಿರಿಯ ಅಧಿಕಾರಿಗಳ ಮೊಬೈಲ್‌ನಲ್ಲಿ ದಾಖಲಾಗುತ್ತದೆ. ಒಂದು ವೇಳೆ ನಿಗದಿತ ಸ್ಥಳಕ್ಕೆ ಹೋಗುವುದು ವಿಳಂಬವಾದರೆ ಅಧಿಕಾರಿಗಳಿಗೆ ಕಾರಣ ಸಹಿತ ತಿಳಿಸಬೇಕಾಗುತ್ತದೆ.

ಇದನ್ನೂ ಓದಿ :ಐತಿಹಾಸಿಕ ಪ್ರವಾಸಿ ತಾಣಗಳಿಗೆ ನಟಿ ಶೃತಿ ಭೇಟಿ-ಪರಿಶೀಲನೆ

ಇಲ್ಲಿ ಯಾವುದೇ ಬರವಣಿಗೆ ಇರುವುದಿಲ್ಲ. ಎಲ್ಲವೂ ತಂತ್ರಜ್ಞಾನ ಆಧಾರಿತವಾಗಿ ನಿರ್ವಹಿಸಲ್ಪಡುತ್ತದೆ. ಯಾವುದೇ ದಾಖಲೆ ತಿದ್ದಲು, ಅಳಿಸಲು ಆಗದು ಎಂಬುದು ವಿಶೇಷ. ತುರ್ತು ಸ್ಪಂದನ ಸಹಾಯ ವ್ಯವಸ್ಥೆಯಲ್ಲಿ ಜಿಪಿಎಸ್‌ ತಂತ್ರಜ್ಞಾನ ಆಧಾರಿತ ವಾಹನಗಳು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಲಿವೆ. ಈ ವಾಹನಗಳನ್ನು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ನಿಲ್ಲಿಸಿರುತ್ತಾರೆ. ಈ ವಿಶೇಷ ವಾಹನಗಳಲ್ಲಿ ಒಬ್ಬ ಸಹಾಯಕ ಉಪನಿರೀಕ್ಷಕರು, ಒಬ್ಬ ಪೊಲೀಸ್‌ ಹಾಗೂ ಚಾಲಕ ಇರುತ್ತಾರೆ. ವಾಹನಗಳಿಗೆ ಕರೆ ಬರುತ್ತಿದ್ದಂತೆ ವಾಹನವು ಡಿಜಿಟಲ್‌ ನಕ್ಷೆ ಆಧರಿಸಿ ನಿಗದಿತ ಸ್ಥಳದಲ್ಲಿ ಶರವೇಗದಲ್ಲಿ ತಲುಪುತ್ತದೆ. ಈ ಕರೆಯಿಂದ ಸದ್ಯ ಪೊಲೀಸ್‌, ಅಗ್ನಿಶಾಮಕ ಸೇವೆ ನೀಡಲು ಉದ್ದೇಶಿಸಲಾಗಿದ್ದು ಮುಂದಿನ ದಿನಗಳಲ್ಲಿ ವೈದ್ಯಕೀಯ ತ್ವರಿತ ಸಹಾಯಕ್ಕೂ ಇದನ್ನು ಬಳಕೆ ಮಾಡುವ ಗುರಿ ಹೊಂದಲಾಗಿದೆ.

– ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next